ಜಯಲಲಿತಾ ಆಪ್ತೆ ಶಶಿಕಲಾ ರಾಜಕೀಯ ಮರುಪ್ರವೇಶ- ತಮಿಳುನಾಡು ರಾಜಕೀಯದಲ್ಲಿ ಚಿನ್ನಮ್ಮ ಸಂಚಲನ
x
ವಿ.ಕೆ. ಶಶಿಕಲಾ ಅವರು ತಮಿಳುನಾಡು ರಾಜಕೀಯಕ್ಕೆ ಮರು ಪ್ರವೇಶ ಮಾಡಿದ್ದಾರೆ.

ಜಯಲಲಿತಾ ಆಪ್ತೆ ಶಶಿಕಲಾ ರಾಜಕೀಯ ಮರುಪ್ರವೇಶ- ತಮಿಳುನಾಡು ರಾಜಕೀಯದಲ್ಲಿ 'ಚಿನ್ನಮ್ಮ' ಸಂಚಲನ

ತಮಿಳುನಾಡು ರಾಜಕೀಯಕ್ಕೆ ವಿ.ಕೆ. ಶಶಿಕಲಾ ಅಧಿಕೃತ ಪ್ರವೇಶ ಮಾಡುತ್ತಿದ್ದಾರೆ. ಎಐಎಡಿಎಂಕೆಯಿಂದ ಉಚ್ಚಾಟಿತಗೊಂಡ 9 ವರ್ಷಗಳ ನಂತರ ಹೊಸ ಪಕ್ಷ ಸ್ಥಾಪನೆ ಮಾಡಲು ಮುಂದಾಗಿದ್ದಾರೆ.


ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತ ಗೆಳತಿ ವಿ.ಕೆ. ಶಶಿಕಲಾ ಅವರು ಅಧಿಕೃತವಾಗಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಮೂಲಕ ತಮಿಳುನಾಡು ರಾಜಕೀಯಕ್ಕೆ ಮತ್ತೆ ಭರ್ಜರಿ ಎಂಟ್ರಿ ನೀಡಿದ್ದಾರೆ. ಮಂಗಳವಾರ (ಫೆಬ್ರವರಿ 24) ರಾಮನಾಥಪುರಂ ಜಿಲ್ಲೆಯ ಪಸುಂಪನ್‌ನಲ್ಲಿ ನಡೆದ ಜಯಲಲಿತಾ ಅವರ 78ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.

ಹೊಸ ಪಕ್ಷ ಘೋಷಣೆ

ಎಐಎಡಿಎಂಕೆಗೆ ಮರುಸೇರ್ಪಡೆಯಾಗುವ ಶಶಿಕಲಾ ಅವರ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ, ಅವರು ಈ ಹೊಸ ಹಾದಿ ತುಳಿದಿದ್ದಾರೆ. ಕಪ್ಪು, ಬಿಳಿ ಮತ್ತು ಕೆಂಪು ಬಣ್ಣದ ಪಕ್ಷದ ಧ್ವಜವನ್ನು ಅವರು ಅನಾವರಣಗೊಳಿಸಿದರು. ಈ ಧ್ವಜದಲ್ಲಿ ಸಿ.ಎನ್. ಅಣ್ಣಾದೊರೈ, ಎಂಜಿಆರ್ ಮತ್ತು ಜಯಲಲಿತಾ ಅವರ ಚಿತ್ರಗಳಿವೆ. "ತಮಿಳುನಾಡು ಜನತೆ ಮತ್ತು ಕಾರ್ಯಕರ್ತರಿಗಾಗಿ ನಾನು ಹೊಸ ಅಖಾಡಕ್ಕೆ ಇಳಿಯುತ್ತಿದ್ದೇನೆ," ಎಂದು ಶಶಿಕಲಾ ಘೋಷಿಸಿದರು. ಪಕ್ಷದ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಅವರು ತಿಳಿಸಿದ್ದಾರೆ.

ಇಪಿಎಸ್ ವಿರುದ್ಧ ತೀವ್ರ ವಾಗ್ದಾಳಿ

ತಮ್ಮ ಭಾಷಣದಲ್ಲಿ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ವಿರುದ್ಧ ಶಶಿಕಲಾ ಕಿಡಿಕಾರಿದರು. "ನಾನು ಬೆಂಗಳೂರಿನ ಜೈಲಿನಲ್ಲಿದ್ದಾಗ ಪಳನಿಸ್ವಾಮಿ ನನಗೆ ನಿರಂತರ ಕಿರುಕುಳ ನೀಡಿದ್ದರು. ಅವರು ಒಳ್ಳೆಯ ವ್ಯಕ್ತಿಯಲ್ಲ. ಕಳೆದ ಒಂಬತ್ತು ವರ್ಷಗಳಿಂದ ನಾನು ಮೌನವಾಗಿದ್ದೆ, ಇನ್ನು ಮುಂದೆ ಮೌನವಾಗಿರಲು ಸಾಧ್ಯವಿಲ್ಲ," ಎಂದು ಅವರು ಗುಡುಗಿದರು.

ಓಪಿಎಸ್ ಪ್ರತಿಕ್ರಿಯೆ

ಶಶಿಕಲಾ ಅವರ ಈ ನಡೆಗೆ ಪ್ರತಿಕ್ರಿಯಿಸಿರುವ ಓ. ಪನ್ನೀರ್ ಸೆಲ್ವಂ (ಓಪಿಎಸ್), "ನಾನು ಜಯಲಲಿತಾ ಅವರಿಗೆ ಎಂದಿಗೂ ದ್ರೋಹ ಬಗೆದಿಲ್ಲ. ಯಾವುದೇ ತಪ್ಪು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ," ಎಂದಿದ್ದಾರೆ. ಅಲ್ಲದೆ, ತಾವು ಹೊಸ ಪಕ್ಷ ಕಟ್ಟುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಸಮೀಕರಣ

ಶಶಿಕಲಾ ಅವರ ಹೊಸ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಯ ಸಾಂಪ್ರದಾಯಿಕ ಮತಬ್ಯಾಂಕ್‌ಗೆ, ವಿಶೇಷವಾಗಿ 'ತೇವರ್' ಸಮುದಾಯದ ಮತಗಳಿಗೆ ಕನ್ನ ಹಾಕುವ ಸಾಧ್ಯತೆಯಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಯಾಗಿರುವ ಕಾರಣ ಶಶಿಕಲಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಾಗಿ, ಅವರು ಎನ್‌ಡಿಎ (NDA) ಒಕ್ಕೂಟಕ್ಕೆ ಬೆಂಬಲ ನೀಡುತ್ತಾರೆಯೇ ಅಥವಾ ನಟ ವಿಜಯ್ ಅವರ ಟಿಜಿಕೆ (TVK) ಪಕ್ಷದೊಂದಿಗೆ ಕೈಜೋಡಿಸುತ್ತಾರೆಯೇ ಎಂಬ ಕುತೂಹಲ ಮೂಡಿದೆ.

ಒಂದಾಗದ ಎಐಎಡಿಎಂಕೆ ಬಣಗಳು

ರಾಜಕೀಯ ವಿಶ್ಲೇಷಕರ ಪ್ರಕಾರ, ಇಪಿಎಸ್, ಓಪಿಎಸ್ ಮತ್ತು ಶಶಿಕಲಾ ಬಣಗಳು ಒಂದಾಗದಿದ್ದರೆ ಅದರ ಲಾಭ ಆಡಳಿತಾರೂಢ ಡಿಎಂಕೆ ಪಾಲಾಗಲಿದೆ. ಬಿಜೆಪಿ ಪ್ರಭಾವದಿಂದಾಗಿಯೇ ಎಐಎಡಿಎಂಕೆ ಹೋಳಾಗಿದೆ ಎಂಬ ವಾದವೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಬಿಜೆಪಿ ಜೊತೆ ಕೈ ಜೋಡಿಸುತ್ತಾರಾ?

ತಮಿಳುನಾಡಿನ ತಂಜಾವೂರು, ರಾಮನಾಥಪುರಂ ಮತ್ತು ಮದುರೈ ಸೇರಿದಂತೆ ದಕ್ಷಿಣ ಜಿಲ್ಲೆಗಳ ಸುಮಾರು 38 ವಿಧಾನಸಭಾ ಕ್ಷೇತ್ರಗಳಲ್ಲಿ ತೇವರ್ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಶಶಿಕಲಾ ಅವರು ತಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಮತಗಳು ವಿಭಜನೆಯಾಗಿ ಎನ್‌ಡಿಎ (NDA) ಒಕ್ಕೂಟಕ್ಕೆ ಭಾರಿ ಹಿನ್ನಡೆಯಾಗುವ ಸಾಧ್ಯತೆಯಿದೆ. ಆದರೆ ಗಮನಾರ್ಹ ವಿಷಯವೆಂದರೆ, ಜೈಲಿನಿಂದ ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಶಶಿಕಲಾ ಅವರು ಬಿಜೆಪಿಯ ವಿರುದ್ಧ ಒಂದೇ ಒಂದು ಮಾತನ್ನೂ ಆಡದಿರುವುದು ಅವರ ಹೊಸ ರಾಜಕೀಯ ಪಯಣಕ್ಕೆ ಹಿನ್ನಡೆಯಾಗಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

Read More
Next Story