
ಶಶಿಕಲಾ ಮತ್ತು ಪಿ.ಚಿದಂಬರಂ
ಕರೂರ್ ಕಾಲ್ತುಳಿತ: ಸಿಬಿಐ ತನಿಖೆ ಶಶಿಕಲಾ ಆಗ್ರಹ; ಎಲ್ಲ ಬದಿಯಲ್ಲೂ ತಪ್ಪಿದೆ ಎಂದ ಚಿದಂಬರಂ
ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ. ಶಶಿಕಲಾ ಅವರು ಕರೂರು ಕಾಲ್ತುಳಿತ ಘಟನೆ ಸಂಬಂಧ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ನೇತೃತ್ವದಲ್ಲಿ ನಡೆದ ರಾಜಕೀಯ ರ‍್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ.ಶಶಿಕಲಾ ಅವರು ಸಿಬಿಐ ತನಿಖೆಗೆ ಆಗ್ರಹಿಸಿದರೆ, ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಪ್ರಕರಣದಲ್ಲಿ ಎಲ್ಲ ಕಡೆಯಿಂದಲೂ ತಪ್ಪುಗಳಾಗಿವೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೆಲ ಸಲಹೆಗಳನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.
ಸಿಬಿಐ ತನಿಖೆಗೆ ಆಗ್ರಹ
ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಶಿಕಲಾ ಅವರು, “ರ‍್ಯಾಲಿಗೆ ಬಂದವರಲ್ಲಿ ಕೆಲವರಷ್ಟೇ ರಾಜಕೀಯ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಉಳಿದವರು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಕೆಲ ಸ್ಥಳೀಯರು ಮಕ್ಕಳೊಂದಿಗೆ ಅಲ್ಲಿಯೇ ವಾಸಿಸುತ್ತಿದ್ದರು. ಸಭೆ ಮುಗಿದ ಕೆಲ ನಿಮಿಷಗಳಲ್ಲೇ ವಿದ್ಯುತ್ ಕಡಿತವಾಗಿದ ಬಳಿಕ ಕಾಲ್ತುಳಿತ ಸಂಭವಿಸಿದೆ. ಒಬ್ಬ ಆಟೋ ಚಾಲಕನ ಕಣ್ಣ ಮುಂದೆ ಒಂದು ವರ್ಷದ ಮಗುವನ್ನು ತುಳಿದು ಹಾಕಿದ ಘಟನೆ ನಡೆದಿದೆ. ಕಲ್ಲು ತೂರಾಟ ನಡೆದಿದೆ. ವಿದ್ಯುತ್ ಕಡಿತಗೊಂಡು ಮರಳಿ ಬರುವಷ್ಟರಲ್ಲಿ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಈ ಎಲ್ಲ ಆಯಾಮದ ಹೇಳಿಕೆಗಳನ್ನು ಗಮನಿಸಿದರೆ ಹಲವು ಅನುಮಾನಗಳು ಮೂಡುತ್ತವೆ. ಹಾಗಾಗಿ ಕರೂರು ಘಟನೆ ಕುರಿತ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಲ್ಲರದ್ದು ತಪ್ಪಿದೆ; ಚಿದಂಬರಂ
ಕರೂರು ಘಟನೆಯಲ್ಲಿ ಎಲ್ಲ ಕಡೆಯಿಂದಲೂ ತಪ್ಪುಗಳು ನಡೆದಿವೆ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. ಘಟನೆ ಸಂಬಂಧ ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ಕೆಲವು ಸಲಹೆಗಳನ್ನು ನೀಡಿದ್ದೇನೆ, ಅವುಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪರಿಹಾರ ಘೋಷಣೆ
ಕರೂರಿನ ವ್ಯಾಪಾರಿಗಳು, ಅಂಗಡಿಗಳು ಮತ್ತು ವ್ಯಾಪಾರಿಕ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ 10 ರೂ.ಲಕ್ಷ ಮತ್ತು ಗಾಯಗೊಂಡವರಿಗೆ 1 ರೂ.ಲಕ್ಷ ಪರಿಹಾರ ಘೋಷಿಸಿದೆ.
ಟಿವಿಕೆ ಸಂಸ್ಥಾಪಕ, ನಟ ವಿಜಯ್ ಅವರು ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.