
ರಾಯ್ ಸಿ.ಜೆ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ ಕೇರಳ ಸಿಎಂ ಪಿಣರಾಯ್ ವಿಜಯನ್ ಕೇಂದ್ರಕ್ಕೆ ಮನವಿ
ಫೆಬ್ರವರಿ 1ರಂದು ಬರೆದ ಪತ್ರದಲ್ಲಿ ಕೇರಳ ಮುಖ್ಯಮಂತ್ರಿಗಳು ಐಟಿ ಅಧಿಕಾರಿಗಳ ಕಾರ್ಯವೈಖರಿ ಮತ್ತು ದಾಳಿಯ ಸಂದರ್ಭದಲ್ಲಿನ ಲೋಪದೋಷಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ರಾಯ್ ಸಿ ಜೆ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸುವಂತೆ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತ ಉದ್ಯಮಿಯೊಬ್ಬರು ಐಟಿ ಅಧಿಕಾರಿಗಳ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲೇ ಪ್ರಾಣ ಕಳೆದುಕೊಂಡಿರುವುದು ದೇಶದ ತೆರಿಗೆ ಆಡಳಿತ ವ್ಯವಸ್ಥೆಗೆ ಅಂಟಿದ ಕಳಂಕ ಎಂದು ಸಿಎಂ ಪಿಣರಾಯ್ ವಿಜಯನ್ ತಮ್ಮ ಪತ್ರದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿರುವ ಪ್ರಮುಖಾಂಶಗಳೇನು?
ಫೆಬ್ರವರಿ 1ರಂದು ಬರೆದ ಪತ್ರದಲ್ಲಿ ಕೇರಳ ಮುಖ್ಯಮಂತ್ರಿಗಳು ಐಟಿ ಅಧಿಕಾರಿಗಳ ಕಾರ್ಯವೈಖರಿ ಮತ್ತು ದಾಳಿಯ ಸಂದರ್ಭದಲ್ಲಿನ ಲೋಪದೋಷಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
"ಐಟಿ ಅಧಿಕಾರಿಗಳು ಶೋಧ ನಡೆಸುತ್ತಿರುವಾಗಲೇ, ಆ ಜಾಗದಲ್ಲಿದ್ದ ವ್ಯಕ್ತಿಯೊಬ್ಬರು ಲೈಸೆನ್ಸ್ ಇರುವ ಗನ್ ತೆಗೆದುಕೊಂಡು ಗುಂಡು ಹಾರಿಸಿಕೊಳ್ಳಲು ಹೇಗೆ ಸಾಧ್ಯವಾಯಿತು?" ಎಂದು ಸಿಎಂ ಪ್ರಶ್ನಿಸಿದ್ದಾರೆ. ದಾಳಿಯ ವೇಳೆ ಆವರಣವು ಸಂಪೂರ್ಣವಾಗಿ ಅಧಿಕಾರಿಗಳ ನಿಯಂತ್ರಣದಲ್ಲಿರಬೇಕಿತ್ತು. ಆದರೆ, ರಾಯ್ ಅವರು ಪಕ್ಕದ ಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಸಿಕ್ಕಿದ್ದು, ಅಧಿಕಾರಿಗಳ ಕಡೆಯಿಂದ ಆದ 'ಗಂಭೀರ ಕರ್ತವ್ಯ ಲೋಪ' ಮತ್ತು ಶಿಷ್ಟಾಚಾರದ ಉಲ್ಲಂಘನೆ ಎಂದು ಅವರು ದೂರಿದ್ದಾರೆ.
ತೆರಿಗೆ ವಂಚನೆಯನ್ನು ತಡೆಗಟ್ಟಲು ಕಠಿಣ ಕ್ರಮಗಳು ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ತೆರಿಗೆ ಸಂಗ್ರಹದ ಹೆಸರಿನಲ್ಲಿ ನಾಗರಿಕ ಸಮಾಜದಲ್ಲಿ ಒಪ್ಪಲಾಗದ 'ಅನಾಗರಿಕ ವರ್ತನೆ'ಗಳಿಗೆ ಶೂನ್ಯ ಸಹಿಷ್ಣುತೆ ಇರಬೇಕು. ತೆರಿಗೆದಾರರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಖು ಎಂದು ಸಿಎಂ ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಕೇರಳ ಸಿಎಂ ಪಿಣರಾಯಿ ವಿಜಯನ್
ರಾಯ್ ಅವರ ಸಹೋದರ ಬಾಬು ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿರುವ ಸಿಎಂ, "ರಾಯ್ ಅವರು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದರು. ಆದರೂ ಐಟಿ ಅಧಿಕಾರಿಗಳ ಕಿರುಕುಳ ಅಸಹನೀಯವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಮೃತ ಕುಟುಂಬದವರ ಈ ನೋವನ್ನು ಗಂಭೀರವಾಗಿ ಪರಿಗಣಿಸಬೇಕಿದೆ," ಎಂದು ಹೇಳಿದ್ದಾರೆ.
ನ್ಯಾಯಾಂಗ ತನಿಖೆಯೇ ಏಕೆ?
ಕೇವಲ ಇಲಾಖಾ ಮಟ್ಟದ ತನಿಖೆ ಅಥವಾ ಪೊಲೀಸ್ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಸಮಾಜದಲ್ಲಿ ವಿಶ್ವಾಸ ಮೂಡಿಸಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ಸಾಂವಿಧಾನಿಕ ಹುದ್ದೆಯಲ್ಲಿರುವ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ 'ನ್ಯಾಯಾಂಗ ತನಿಖೆ' ನಡೆಸಬೇಕು. ನಿಗದಿತ ಕಾಲಮಿತಿಯೊಳಗೆ ವರದಿ ತರಿಸಿಕೊಂಡು ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು ಎಂದು ಪಿಣರಾಯ್ ವಿಜಯನ್ ಆಗ್ರಹಿಸಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಜನವರಿ 30ರಂದು ಬೆಂಗಳೂರಿನಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ವಿಚಾರಣೆಗೆ ಸಹಕರಿಸುತ್ತಿದ್ದ ಸಿ.ಜೆ. ರಾಯ್ ಅವರು, ಏಕಾಏಕಿ ತಮ್ಮ ಕ್ಯಾಬಿನ್‌ಗೆ ತೆರಳಿ ತಮ್ಮ ಬಳಿಯಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಉದ್ಯಮ ವಲಯದಲ್ಲಿ ತೀವ್ರ ಆಘಾತ ಉಂಟುಮಾಡಿತ್ತು.

