
Shashi Tharoor: ಸಂಸದ ಶಶಿ ತರೂರ್ ಕಾರಿನ ಮೇಲೆ ದಾಳಿ, ಗನ್‌ಮ್ಯಾನ್‌ಗೆ ಗಾಯ!
Kerala Assembly Election: ಕೇರಳದ ವಂಡೂರಿನಲ್ಲಿ ಸಂಸದ ಶಶಿ ತರೂರ್ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಹಾರ್ನ್ ಬಾರಿಸಿದ ವಿಚಾರಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಗನ್‌ಮ್ಯಾನ್ ಮೇಲೆ ಹಲ್ಲೆ ನಡೆದಿದೆ. ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಕಾರನ್ನು ತಡೆದು ಹಲ್ಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯಲ್ಲಿ ತರೂರ್ ಅವರ ಭದ್ರತಾ ಸಿಬ್ಬಂದಿ (ಗನ್‌ಮ್ಯಾನ್) ಮೇಲೆ ಹಲ್ಲೆಯಾಗಿದ್ದು, ಅವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದದ್ದು ಎಲ್ಲಿ?
ಮಲಪ್ಪುರಂ ಜಿಲ್ಲೆಯ ವಂಡೂರಿನ ಚೆಲ್ಲಿತೋಡೆ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಶಶಿ ತರೂರ್ ಅವರು ಕಾಂಗ್ರೆಸ್ ಅಭ್ಯರ್ಥಿ ಎ.ಪಿ. ಅನಿಲ್ ಕುಮಾರ್ ಪರ ಪ್ರಚಾರ ನಡೆಸಲು ವಂಡೂರಿಗೆ ಆಗಮಿಸಿದ್ದರು. ರಾತ್ರಿಯ ಸಮಯದಲ್ಲಿ ಈ ದಾಳಿ ನಡೆದಿದೆ.
Malappuram, Keralam: A complaint has been filed alleging that the convoy of Congress MP Shashi Tharoor was blocked near Thiruvalli Chellithodu bridge while he was travelling to an election campaign event in Wandoor.
— IANS (@ians_india) April 3, 2026
The complaint claims that Tharoor’s gunman was assaulted… pic.twitter.com/CVqZ25TzbP
ದಾಳಿಗೆ ಕಾರಣವೇನು?
ವರದಿಗಳ ಪ್ರಕಾರ, ಸಂಚಾರ ದಟ್ಟಣೆಯ ವೇಳೆ ಶಶಿ ತರೂರ್ ಅವರ ಕಾರಿನ ಚಾಲಕ ಹಾರ್ನ್ ಬಾರಿಸಿದ್ದಕ್ಕೆ ರೊಚ್ಚಿಗೆದ್ದ ಗುಂಪೊಂದು ಈ ಕೃತ್ಯ ಎಸಗಿದೆ. ಕಿಡಿಗೇಡಿಗಳು ಎರಡು ವಾಹನಗಳಲ್ಲಿ ತರೂರ್ ಅವರ ಕಾರನ್ನು ಹಿಂಬಾಲಿಸಿದ್ದರು. ಸಂಸದರ ಕಾರನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ವಾಗ್ವಾದ ಶುರುವಾಗಿದೆ. ಸುಮಾರು ಎಂಟು ಜನರಿದ್ದ ಗುಂಪು ತರೂರ್ ಅವರ ಕಾರನ್ನು ತಡೆದು, ಕಿಟಕಿಗಳಿಗೆ ಬಡಿಯುತ್ತಾ ನಿಂದಿಸಲು ಪ್ರಾರಂಭಿಸಿದರು.
ಗನ್‌ಮ್ಯಾನ್ ಮೇಲೆ ಹಲ್ಲೆ
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿ ಭದ್ರತಾ ಕಾರಣಗಳಿಗಾಗಿ ಶಶಿ ತರೂರ್ ಅವರ ಗನ್‌ಮ್ಯಾನ್ ಕಾರಿನಿಂದ ಕೆಳಗಿಳಿದಿದ್ದಾರೆ. ಈ ವೇಳೆ ದಾಳಿಕೋರರು ಗನ್‌ಮ್ಯಾನ್‌ನನ್ನು ತಳ್ಳಿ, ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಶಶಿ ತರೂರ್ ಅವರ ತಂಡದ ಪ್ರಕಾರ, ಇದು ಕೇವಲ ರಸ್ತೆ ಬದಿಯ ಜಗಳವಲ್ಲ, ಇದೊಂದು ಯೋಜಿತ ದಾಳಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸ್ ಕ್ರಮ ಮತ್ತು ಬಂಧನ
ಘಟನೆಗೆ ಸಂಬಂಧಿಸಿದಂತೆ ವಂಡೂರು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಮುಖ ಆರೋಪಿ ಉಮ್ಮರ್ ಎಂಬಾತನನ್ನು ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ. ಘಟನೆಯಲ್ಲಿ ಭಾಗಿಯಾದ ಇತರ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ದಾಳಿಕೋರರು ಬಳಸಿದ್ದ ಕಾರನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.
ಚುನಾವಣಾ ಸಮಯದಲ್ಲಿ ಇಂತಹ ಘಟನೆ ನಡೆದಿರುವುದು ಕೇರಳ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಇಂತಹ ಅವ್ಯವಸ್ಥೆ ಸೃಷ್ಟಿಸುತ್ತಿವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

