ಮಹಿಳಾ ಮೀಸಲಾತಿ ಕೇವಲ ನೆಪ, ಕ್ಷೇತ್ರ ಮರು ವಿಂಗಡಣೆಯೇ ಸರ್ಕಾರದ ಉದ್ದೇಶ: ಸೋನಿಯಾ ಗಾಂಧಿ ವಾಗ್ದಾಳಿ
x

 ಲಾಭ ಪಡೆಯುವ ಉದ್ದೇಶದಿಂದಲೇ ಕೇಂದ್ರ ಸರ್ಕಾರವು ದಿಢೀರ್ ಆಗಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ ಎಂದು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. 

ಮಹಿಳಾ ಮೀಸಲಾತಿ ಕೇವಲ ನೆಪ, ಕ್ಷೇತ್ರ ಮರು ವಿಂಗಡಣೆಯೇ ಸರ್ಕಾರದ ಉದ್ದೇಶ: ಸೋನಿಯಾ ಗಾಂಧಿ ವಾಗ್ದಾಳಿ

ಈ ಮಸೂದೆಯನ್ನು 2027ರ ಜನಗಣತಿಗೆ ಜೋಡಿಸುವ ಬದಲು 2011ರ ಜನಗಣತಿಯ ಆಧಾರದ ಮೇಲೆಯೇ 2029ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.


Click the Play button to hear this message in audio format

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೩೩ರಷ್ಟು ಮೀಸಲಾತಿ ಕಲ್ಪಿಸುವ 'ನಾರಿ ಶಕ್ತಿ ವಂದನ್ ಅಧಿನಿಯಮ'ದ ವಿಚಾರವನ್ನು ಮುಂದಿಟ್ಟುಕೊಂಡು, ರಾಜಕೀಯ ಲಾಭ ಪಡೆಯುವ ಉದ್ದೇಶದಿಂದಲೇ ಕೇಂದ್ರ ಸರ್ಕಾರವು ದಿಢೀರ್ ಆಗಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ ಎಂದು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರವು ತಾರಕಕ್ಕೇರಿರುವ ಹೊತ್ತಿನಲ್ಲೇ ಏಪ್ರಿಲ್ 16 ರಿಂದ ಈ ಅಧಿವೇಶನ ಕರೆಯುವ ಮೂಲಕ, ಉದ್ದೇಶಪೂರ್ವಕವಾಗಿ ಪ್ರತಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು ಸರ್ಕಾರದ ತಂತ್ರವಾಗಿದೆ. ಇದಲ್ಲದೆ, ಮಹಿಳಾ ಮೀಸಲಾತಿ ಕೇವಲ ನೆಪ ಮಾತ್ರವಾಗಿದ್ದು, ಇದರ ಹಿಂದಿರುವ ಸರ್ಕಾರದ ಅಸಲಿ ಉದ್ದೇಶವೇ ಕ್ಷೇತ್ರ ಮರು ವಿಂಗಡಣೆ (ಡಿಲಿಮಿಟೇಶನ್) ಮಾಡುವುದಾಗಿದೆ. ಇದು ಸಂವಿಧಾನದ ಮೇಲಿನ ನೇರ ಪ್ರಹಾರವಾಗಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

'ದಿ ಹಿಂದೂ' ರಾಷ್ಟ್ರೀಯ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ತಮ್ಮ ವಿಶೇಷ ಲೇಖನದಲ್ಲಿ ಕೇಂದ್ರದ ನೈಜ ಉದ್ದೇಶಗಳನ್ನು ಸೋನಿಯಾ ಗಾಂಧಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 2023ರಲ್ಲೇ ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ ತರಲು ಬೆಂಬಲ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಪಕ್ಷಗಳಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ. ಈ ಮಸೂದೆಯನ್ನು 2027ರ ಜನಗಣತಿಗೆ ಜೋಡಿಸುವ ಬದಲು 2011ರ ಜನಗಣತಿಯ ಆಧಾರದ ಮೇಲೆಯೇ 2029ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಈ ಹಿಂದೆ ಇದೇ ಮಸೂದೆಯನ್ನು ಮುಂದಿನ ಜನಗಣತಿಗೆ ಜೋಡಿಸಿದ್ದು ಇದೇ ಕೇಂದ್ರ ಸರ್ಕಾರವಾಗಿತ್ತು. ಅಂದೇ ಈ ಮೀಸಲಾತಿಯನ್ನು 2024ರ ಲೋಕಸಭಾ ಚುನಾವಣೆಯಿಂದಲೇ ಜಾರಿಗೆ ತರಬೇಕು ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಲವಾಗಿ ಆಗ್ರಹಿಸಿದ್ದರು. ಆಗ ಮೌನ ವಹಿಸಿದ್ದ ಸರ್ಕಾರ, ಈಗ ಏಕಾಏಕಿ ೩೩೪-ಎ ಪರಿಚ್ಛೇದಕ್ಕೆ ತಿದ್ದುಪಡಿ ತಂದು 2029ರಿಂದಲೇ ಅನ್ವಯವಾಗುವಂತೆ ಮಾಡಲು ಹೊರಟಿದೆ. ಪ್ರಧಾನಿಯವರ ಈ 30 ತಿಂಗಳ ಹಿಂದಿನ ನಿಲುವಿನ ಬದಲಾವಣೆಯ (ಯು-ಟರ್ನ್) ಹಿಂದಿನ ಮರ್ಮವೇನು ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಯಾವುದೇ ಮಾಹಿತಿ ಇಲ್ಲ

ಈ ವಿಶೇಷ ಅಧಿವೇಶನದ ಕಾರ್ಯಕಲಾಪಗಳ ಬಗ್ಗೆ ಇದುವರೆಗೂ ಸಂಸದರಿಗೆ ಯಾವುದೇ ಅಧಿಕೃತ ಮಾಹಿತಿಯನ್ನು ಒದಗಿಸಿಲ್ಲ. ಏಪ್ರಿಲ್ ೨೯ರಂದು ಪಶ್ಚಿಮ ಬಂಗಾಳದ ಕೊನೆಯ ಹಂತದ ಚುನಾವಣೆ ಮುಗಿದ ಬಳಿಕ ಸರ್ವಪಕ್ಷ ಸಭೆ ಕರೆದು ಈ ಬಗ್ಗೆ ಚರ್ಚಿಸೋಣ ಎಂದು ಪ್ರತಿಪಕ್ಷ ನಾಯಕರು ಮೂರು ಬಾರಿ ಪತ್ರ ಬರೆದು ಮನವಿ ಮಾಡಿದರೂ, ಸರ್ಕಾರ ಆ ಸಕಾರಾತ್ಮಕ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಪ್ರಧಾನಿಯವರು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು, ಪತ್ರಿಕೆಗಳಿಗೆ ಲೇಖನ ಬರೆಯುವುದು ಹಾಗೂ 'ನನ್ನ ದಾರಿಯೇ ಅಂತಿಮ' ಎನ್ನುವಂತಹ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ. ಮುಂಬರುವ ಮುಂಗಾರು ಅಧಿವೇಶನದಲ್ಲಿ ಈ ಬಗ್ಗೆ ಮುಕ್ತ ಚರ್ಚೆ ನಡೆಸಿದ್ದರೆ ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲ. ಆದರೆ, ಕೇವಲ ರಾಜಕೀಯ ನಿರೂಪಣೆಗಾಗಿ ಇಂತಹ ಆತುರದ ಮತ್ತು ಪ್ರಜಾಸತ್ತಾತ್ಮಕ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಅಂಕಗಣಿತ ಲೆಕ್ಕವಲ್ಲ

ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆಯ ಕುರಿತಾಗಿಯೂ ಲೇಖನದಲ್ಲಿ ಸುದೀರ್ಘವಾಗಿ ಪ್ರಸ್ತಾಪಿಸಲಾಗಿದೆ. ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಯಾವುದೇ ಮರು ವಿಂಗಡಣೆ ಪ್ರಕ್ರಿಯೆಯು ಕೇವಲ ಅಂಕಗಣಿತದ ಲೆಕ್ಕಾಚಾರವಾಗಬಾರದು, ಬದಲಾಗಿ ಅದು ರಾಜಕೀಯ ಸಮಾನತೆಯನ್ನು ಕಾಯ್ದುಕೊಳ್ಳುವಂತಿರಬೇಕು. ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳು ಕುಟುಂಬ ಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜನಸಂಖ್ಯೆಯನ್ನು ನಿಯಂತ್ರಿಸಿವೆ. ಇಂತಹ ಪ್ರಗತಿಪರ ಸಣ್ಣ ರಾಜ್ಯಗಳಿಗೆ ಕ್ಷೇತ್ರ ಮರು ವಿಂಗಡಣೆಯಿಂದ ಅನ್ಯಾಯವಾಗಬಾರದು ಹಾಗೂ ಅವರ ಪ್ರಾತಿನಿಧ್ಯ ಕುಸಿಯಬಾರದು ಎಂಬುದು ಅವರ ಪ್ರಮುಖ ಆಗ್ರಹವಾಗಿದೆ. ಇದರ ಜೊತೆಗೆ, ೨೦೨೧ರಲ್ಲೇ ನಡೆಯಬೇಕಿದ್ದ ಜನಗಣತಿಯನ್ನು ವಿಳಂಬ ಮಾಡಿದ್ದರಿಂದಾಗಿ ದೇಶದ ೧೦ ಕೋಟಿಗೂ ಹೆಚ್ಚು ಬಡವರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ. ಮತ್ತೊಂದೆಡೆ, ಜಾತಿಗಣತಿ ನಡೆಸಿದರೆ ೨೦೨೭ರ ಜನಗಣತಿ ವಿಳಂಬವಾಗುತ್ತದೆ ಎಂಬ ಸರ್ಕಾರದ ವಾದ ಸಂಪೂರ್ಣ ಸುಳ್ಳಾಗಿದ್ದು, ಜಾತಿಗಣತಿ ಪ್ರಕ್ರಿಯೆಯ ಹಾದಿ ತಪ್ಪಿಸುವುದೇ ಪ್ರಧಾನಿಯವರ ಅಸಲಿ ಉದ್ದೇಶವಾಗಿದೆ ಎಂದು ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ.

Read More
Next Story