
ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ
ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ಸೋನಿಯಾ ಗಾಂಧಿ
ಕಳೆದ ವಾರ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 24ರ ರಾತ್ರಿ ಸೋನಿಯಾ ಗಾಂಧಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರಾದ ಡಾ. ಡಿ.ಎಸ್. ರಾಣಾ ನೇತೃತ್ವದ ವೈದ್ಯರ ತಂಡವು ಅವರ ಆರೋಗ್ಯ ತಪಾಸಣೆ ನಡೆಸಿತ್ತು.
ರಕ್ತದ ಸೋಂಕಿನಿಂದ ಬಳಲುತ್ತಿದ್ದ ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನವದೆಹಲಿಯ ಪ್ರತಿಷ್ಠಿತ ಶ್ರೀ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಮಂಗಳವಾರ ಬೆಳಿಗ್ಗೆ ಡಿಸ್ಚಾರ್ಜ್ ಮಾಡಲಾಗಿದ್ದು, ಅವರು ತಮ್ಮ ನಿವಾಸಕ್ಕೆ ಮರಳಿದ್ದಾರೆ.
ಕಳೆದ ವಾರ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 24ರ ರಾತ್ರಿ ಸೋನಿಯಾ ಗಾಂಧಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರಾದ ಡಾ. ಡಿ.ಎಸ್. ರಾಣಾ, ಡಾ. ಎಸ್. ನಂದಿ ಮತ್ತು ಡಾ. ಅರೂಪ್ ಬಸು ಅವರ ನೇತೃತ್ವದ ವೈದ್ಯರ ತಂಡವು ಅವರ ಆರೋಗ್ಯ ತಪಾಸಣೆ ನಡೆಸಿತ್ತು. ವೈದ್ಯಕೀಯ ಪರೀಕ್ಷೆಗಳ ಬಳಿಕ ಅವರ ರಕ್ತದಲ್ಲಿ ಸೋಂಕು (ಸಿಸ್ಟಮಿಕ್ ಇನ್ಫೆಕ್ಷನ್) ಇರುವುದು ದೃಢಪಟ್ಟಿತ್ತು. ತಕ್ಷಣವೇ ಎಚ್ಚೆತ್ತ ವೈದ್ಯರ ತಂಡ ಅವರಿಗೆ ಆಂಟಿಬಯೋಟಿಕ್ (ಜೀವಾಣು ನಿರೋಧಕ) ಔಷಧಿಗಳ ಮೂಲಕ ಸೂಕ್ತ ಚಿಕಿತ್ಸೆ ಆರಂಭಿಸಿತ್ತು. ಒಟ್ಟು ಏಳು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿದು ಅವರು ವೈದ್ಯರ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಮನೆಯಲ್ಲೇ ಮುಂದುವರಿಯಲಿರುವ ಚಿಕಿತ್ಸೆ
ಸತತ ಒಂದು ವಾರದ ಚಿಕಿತ್ಸೆಯ ಬಳಿಕ ಸೋನಿಯಾ ಗಾಂಧಿ ಅವರ ಆರೋಗ್ಯ ಇದೀಗ ಸಂಪೂರ್ಣವಾಗಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಶ್ರೀ ಗಂಗಾರಾಮ್ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಅಜಯ್ ಸ್ವರೂಪ್ ಈ ಬಗ್ಗೆ ಮಾಹಿತಿ ನೀಡಿದ್ದು, ರಕ್ತದ ಸೋಂಕಿಗೆ ನೀಡಲಾದ ಚಿಕಿತ್ಸೆಗೆ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ. ಪ್ರಸ್ತುತ ಅವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿರುವುದರಿಂದ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಆದರೆ, ಮುಂಜಾಗ್ರತಾ ಕ್ರಮವಾಗಿ ಮುಂದಿನ ದಿನಗಳಲ್ಲಿ ಮನೆಯಲ್ಲಿಯೇ ಅವರಿಗೆ ಅಗತ್ಯ ವೈದ್ಯಕೀಯ ಆರೈಕೆ ಮತ್ತು ಫಾಲೋ-ಅಪ್ ಚಿಕಿತ್ಸೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

