ಶಬರಿಮಲೆ ತುಪ್ಪ ಮಾರಾಟದಲ್ಲಿ 36 ಲಕ್ಷ ರೂ. ಹಗರಣ: ದೇವಸ್ವಂ ಮಂಡಳಿ ಅರ್ಚಕನ ಬಂಧನ!
x
ಶಬರಿಮಲೆ ದೇವಸ್ಥಾನ

ಶಬರಿಮಲೆ ತುಪ್ಪ ಮಾರಾಟದಲ್ಲಿ 36 ಲಕ್ಷ ರೂ. ಹಗರಣ: ದೇವಸ್ವಂ ಮಂಡಳಿ ಅರ್ಚಕನ ಬಂಧನ!

ಶಬರಿಮಲೆ ದೇವಾಲಯದ ಅಡಿಯ ಶಿಷ್ಟಂ ತುಪ್ಪದ ಮಾರಾಟದಲ್ಲಿ 36.24 ಲಕ್ಷ ರೂ. ದುರುಪಯೋಗ ಆರೋಪದಡಿ ಅರ್ಚಕ ಸುನಿಲ್ ಕುಮಾರ್ ಪೊಟ್ಟಿಯನ್ನು ಪತ್ತಣಂತಿಟ್ಟ ವಿಚಕ್ಷಣಾ ದಳ ಬಂಧಿಸಿದೆ.


ಶಬರಿಮಲೆ ದೇವಾಲಯದಲ್ಲಿ ತುಪ್ಪದ ಮಾರಾಟದಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಸಿಬ್ಬಂದಿಯನ್ನು ಪತ್ತಣಂತಿಟ್ಟ ವಿಚಕ್ಷಣಾ ದಳ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

ಏನಿದು ಹಗರಣ?

ಶಬರಿಮಲೆ ದೇವಾಲಯದಲ್ಲಿ ಭಕ್ತರಿಗೆ ವಿತರಿಸಲಾಗುವ ತುಪ್ಪದ ಮಾರಾಟ ಮತ್ತು ಲೆಕ್ಕಪತ್ರದಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಮೇರೆಗೆ ವಿಚಕ್ಷಣಾ ದಳ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ ಅಡಿಯಲ್ಲಿ 'ಕೀಳ್ ಶಾಂತಿ' ಆಗಿ ಸೇವೆ ಸಲ್ಲಿಸುತ್ತಿದ್ದ ಸುನಿಲ್ ಕುಮಾರ್ ಪೊಟ್ಟಿ ಎಂಬುವವರನ್ನು ಬಂಧಿಸಲಾಗಿದೆ.

ಹಗರಣ ನಡೆದಿದ್ದು ಹೇಗೆ?

2025-26ರ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ ಸುನಿಲ್ ಕುಮಾರ್ ಅವರಿಗೆ ತುಪ್ಪದ ಮಾರಾಟದ ಜವಾಬ್ದಾರಿಯನ್ನು ನೀಡಲಾಗಿತ್ತು. ಭಕ್ತರಿಂದ ಪ್ರತಿ 100 ಮಿಲಿ ತುಪ್ಪದ ಪ್ಯಾಕೆಟ್‌ಗೆ 100 ರೂ.ವಸೂಲಿ ಮಾಡಲಾಗುತ್ತಿತ್ತು. ಒಟ್ಟು 89,129 ಪ್ಯಾಕೆಟ್‌ಗಳ ಮಾರಾಟದಿಂದ 89.12 ರೂ. ಲಕ್ಷ ಬರಬೇಕಿತ್ತು. ಆದರೆ ದಾಸ್ತಾನು ಪರಿಶೀಲನೆಯಲ್ಲಿ ಸಾವಿರಾರು ಪ್ಯಾಕೆಟ್‌ಗಳ ಮಾರಾಟದ ಹಣ ಕಾಣೆಯಾಗಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ದಾಸ್ತಾನು ದಾಖಲೆಗಳಲ್ಲಿ (Stock Records) ಭಾರೀ ತಿದ್ದುವಿಕೆ ಮಾಡಿರುವುದು ಕಂಡುಬಂದಿದೆ.

ತನಿಖೆಯ ಪ್ರಕಾರ, ಒಟ್ಟು 36.24 ಲಕ್ಷ ರೂ. ಮೊತ್ತದ ಹಣವನ್ನು ದೇವಸ್ವಂ ಮಂಡಳಿಯ ಖಾತೆಗೆ ಜಮೆ ಮಾಡದೆ ದುರುಪಯೋಗಪಡಿಸಿಕೊಳ್ಳಲಾಗಿದೆ.

ನ್ಯಾಯಾಂಗ ಬಂಧನ

ಪ್ಯಾಕೆಟ್ ಮಾಡಿದ ತುಪ್ಪದ ದಾಸ್ತಾನು ಮತ್ತು ಲೆಕ್ಕಪತ್ರಗಳಲ್ಲಿ ಮ್ಯಾನಿಪ್ಯುಲೇಷನ್ ಮಾಡಲಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆರೋಪಿಯನ್ನು ಕೊಲ್ಲಂ ವಿಚಕ್ಷಣಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರಾದ ಡಾ. ಸಿ.ಎಸ್. ಮೋಹಿತ್ ಅವರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಸುನಿಲ್ ಕುಮಾರ್ ಅವರನ್ನು ಕೊಲ್ಲಂ ಜಿಲ್ಲಾ ಜೈಲಿಗೆ ಸ್ಥಳಾಂತರಿಸಲಾಗಿದೆ.

ಆರೋಪಿಗಳ ಪಟ್ಟಿ

ಈ ಪ್ರಕರಣದಲ್ಲಿ ಒಟ್ಟು 33 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅದರಲ್ಲಿ ಅಸಿಸ್ಟೆಂಟ್ ದೇವಸ್ವಂ ಕಮಿಷನರ್ ಮತ್ತು ಹಿರಿಯ ಅಧಿಕಾರಿಗಳ ಹೆಸರೂ ಇದೆ. ಸುನಿಲ್ ಕುಮಾರ್ ಈ ಹಗರಣದ 13ನೇ ಆರೋಪಿಯಾಗಿದ್ದು, ಸದ್ಯ ಬಂಧನಕ್ಕೊಳಗಾದ ಮೊದಲ ವ್ಯಕ್ತಿಯಾಗಿದ್ದಾರೆ.

ಕೋರ್ಟ್ ಆದೇಶ

ಕೇರಳ ಹೈಕೋರ್ಟ್ ಈ ಹಗರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಆದೇಶಿಸಿತ್ತು. ಮೇಲಿನ ಹಂತದ ಅಧಿಕಾರಿಗಳ ಶಾಮೀಲಾಗದೆ ಇಷ್ಟೊಂದು ದೊಡ್ಡ ಮಟ್ಟದ ಹಣ ದುರುಪಯೋಗ ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Read More
Next Story