
Rajya Sabha Election 2026: 37 ಸ್ಥಾನಗಳ ಪೈಕಿ 21ರಲ್ಲಿ ಎನ್‌ಡಿಎ ಜಯಭೇರಿ; ಮೇಲ್ಮನೆಯಲ್ಲಿ ಹೆಚ್ಚಿದ ಬಿಜೆಪಿ ಬಲ!
ದೇಶದ 37 ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 21 ಸ್ಥಾನಗಳನ್ನು ಗೆದ್ದು ಬೀಗಿದೆ. ಹರಿಯಾಣದಲ್ಲಿ ನಡೆದ ಹೈಡ್ರಾಮಾ ಅಂತ್ಯವಾಗಿದ್ದು, ಸಂಜಯ್ ಭಾಟಿಯಾ ಮತ್ತು ಕರಮವೀರ್ ಸಿಂಗ್ ಬೌಧ್ ಜಯಗಳಿಸಿದ್ದಾರೆ.
ದೇಶದ 37 ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಒಕ್ಕೂಟವು 21 ಸ್ಥಾನಗಳನ್ನು ಗೆಲ್ಲುವ ಮೂಲಕ ಮೇಲ್ಮನೆಯಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ವಿರೋಧ ಪಕ್ಷಗಳ 'ಇಂಡಿಯಾ' (INDIA) ಮೈತ್ರಿಕೂಟ 13 ಸ್ಥಾನಗಳನ್ನು ಗೆದ್ದರೆ, ಬಿಜೆಡಿ 1 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಹರಿಯಾಣದ ಎರಡು ಸ್ಥಾನಗಳ ಮತ ಎಣಿಕೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದೆ.
ಅವಿರೋಧ ಆಯ್ಕೆಯ ವಿವರ
ಒಟ್ಟು 37 ಸ್ಥಾನಗಳ ಪೈಕಿ 26 ಸಂಸದರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಬಿಜೆಪಿಯ ಏಳು ಮಂದಿ ಸೇರಿದ್ದಾರೆ. ಉಳಿದಂತೆ ಶಿವಸೇನೆ, ಆರ್‌ಪಿಐ (ಅಠಾವಳೆ), ಎನ್‌ಸಿಪಿ, ಎಐಎಡಿಎಂಕೆ, ಪಿಎಂಕೆ ಮತ್ತು ಯುಪಿಪಿಎಲ್ ತಲಾ ಒಂದು ಸ್ಥಾನ ಪಡೆದಿವೆ. ಕಾಂಗ್ರೆಸ್ 5, ತೃಣಮೂಲ ಕಾಂಗ್ರೆಸ್ 4, ಡಿಎಂಕೆ 3 ಮತ್ತು ಎನ್‌ಸಿಪಿ (ಶರದ್ ಪವಾರ್) 1 ಸ್ಥಾನವನ್ನು ಅವಿರೋಧವಾಗಿ ಗೆದ್ದಿವೆ.
ಬಿಹಾರ ಮತ್ತು ಒಡಿಶಾದಲ್ಲಿ ತೀವ್ರ ಪೈಪೋಟಿ
ಒಡಿಶಾ: ಕುದುರೆ ವ್ಯಾಪಾರ ಮತ್ತು ಹಿಂಸಾಚಾರದ ನಡುವೆಯೂ ನಡೆದ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ನಾಲ್ಕನೇ ಸ್ಥಾನವನ್ನು ಗೆದ್ದರೆ, ಬಿಜೆಡಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಬಿಹಾರ: ಬಿಹಾರದಲ್ಲಿ ಎನ್‌ಡಿಎ 4 ಸ್ಥಾನಗಳನ್ನು ಗೆದ್ದಿದೆ. ಇಲ್ಲಿ 'ಇಂಡಿಯಾ' ಮೈತ್ರಿಕೂಟಕ್ಕೆ ಎಐಎಂಐಎಂ ಮತ್ತು ಬಿಎಸ್‌ಪಿ ಬೆಂಬಲ ನೀಡಿದ್ದರೂ, ಮೂವರು ಕಾಂಗ್ರೆಸ್ ಮತ್ತು ಒಬ್ಬ ಆರ್‌ಜೆಡಿ ಶಾಸಕರು ಅಡ್ಡ ಮತದಾನ (ಅಥವಾ ಗೈರು) ಮಾಡಿದ ಪರಿಣಾಮ ವಿರೋಧ ಪಕ್ಷದ ಐದನೇ ಅಭ್ಯರ್ಥಿ ಸೋಲು ಕಂಡಿದ್ದಾರೆ. ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಬಿಜೆಪಿಯ ನಿತಿನ್ ನವೀನ್ ಜಯಗಳಿಸಿದ್ದಾರೆ.
ಹರಿಯಾಣದಲ್ಲಿ ಹೈಡ್ರಾಮಾ
ತೀವ್ರ ಕುತೂಹಲ ಕೆರಳಿಸಿದ್ದ ಹರಿಯಾಣದ ಎರಡು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿಯ ಸಂಜಯ್ ಭಾಟಿಯಾ ಮತ್ತು ಕಾಂಗ್ರೆಸ್ ಪಕ್ಷದ ಕರಮವೀರ್ ಸಿಂಗ್ ಬೌಧ್ ಅವರು ವಿಜಯಶಾಲಿಯಾಗಿದ್ದಾರೆ ಎಂದು ಘೋಷಿಸಲಾಗಿದೆ. ಮತದಾನದ ಗೌಪ್ಯತೆ ಉಲ್ಲಂಘನೆಯ ಆರೋಪಗಳ ಹಿನ್ನೆಲೆಯಲ್ಲಿ ಮತ ಎಣಿಕೆ ವಿಳಂಬವಾಗಿತ್ತಾದರೂ, ಅಂತಿಮವಾಗಿ ಇಬ್ಬರೂ ನಾಯಕರು ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಸೋಮವಾರ ಮತದಾನದ ವೇಳೆ ಕಾಂಗ್ರೆಸ್‌ನ ಇಬ್ಬರು ಶಾಸಕರು ತಮ್ಮ ಮತಪತ್ರವನ್ನು ಅನಧಿಕೃತ ವ್ಯಕ್ತಿಗಳಿಗೆ ತೋರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು, ಇದರಿಂದಾಗಿ ಎಣಿಕೆ ಪ್ರಕ್ರಿಯೆ ಸ್ಥಗಿತಗೊಂಡು ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿತ್ತು. ಅಂತಿಮವಾಗಿ ಚುನಾವಣಾ ಆಯೋಗದ ಹಸಿರು ನಿಶಾನೆ ಬಳಿಕ ಫಲಿತಾಂಶ ಪ್ರಕಟವಾಗಿದ್ದು, ಉಭಯ ಪ್ರಮುಖ ಪಕ್ಷಗಳು ತಲಾ ಒಂದು ಸ್ಥಾನವನ್ನು ಹಂಚಿಕೊಂಡಿವೆ.
ರಾಜಕೀಯ ಪ್ರತಿಕ್ರಿಯೆ
ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, "ನಮಗೆ ಆರು ಮತಗಳ ಕೊರತೆಯಿತ್ತು, ಆದರೂ ನಾವು ಹೋರಾಡಿದೆವು. ನಮಗೆ ದ್ರೋಹ ಮಾಡದಿದ್ದರೆ ನಾವು ಖಂಡಿತ ಗೆಲ್ಲುತ್ತಿದ್ದೆವು. ಮುಂದಿನ ಕ್ರಮದ ಬಗ್ಗೆ ಶೀಘ್ರವೇ ತೀರ್ಮಾನಿಸುತ್ತೇವೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

