
ಚೀನಾದ ಎದುರು ಸೈನ್ಯವನ್ನು ಏಕಾಂಗಿಯಾಗಿ ಮಾಡಿದ್ರಾ ಮೋದಿ? ಜ.ನರವಾಣೆ ಕೃತಿಯಲ್ಲಿ ಏನಿದೆ?
ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಕೃತಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ, ರಾಷ್ಟ್ರೀಯ ಭದ್ರತೆ ಮತ್ತು ಚೀನಾ ಗಡಿ ವಿವಾದದ ವಿಚಾರವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕೇಂದ್ರ ಸರ್ಕಾರದ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದೆ. ಮಾಜಿ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಜೀವನಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕವನ್ನು ಉಲ್ಲೇಖಿಸಿ ಮಾತನಾಡಲು ಪ್ರಯತ್ನಿಸಿದ ರಾಹುಲ್ ಗಾಂಧಿ ಅವರನ್ನು ಸಭಾಧ್ಯಕ್ಷರು ತಡೆದಿದ್ದು, ಇದು ಸದನದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು.
ಪ್ರಧಾನಿಗೆ ಪುಸ್ತಕ ಉಡುಗೊರೆ
ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರಲ್ ನರವಾಣೆ ಅವರು ಬರೆದ ಪುಸ್ತಕವನ್ನು ಉಡುಗೊರೆಯಾಗಿ ನೀಡಲು ಬಯಸಿದ್ದಾರೆ. "ಇದು ಯಾವುದೇ ವಿರೋಧ ಪಕ್ಷದ ನಾಯಕ ಅಥವಾ ವಿದೇಶಿ ಲೇಖಕ ಬರೆದ ಪುಸ್ತಕವಲ್ಲ, ಇದು ದೇಶದ ಮಾಜಿ ಸೇನಾ ಮುಖ್ಯಸ್ಥರು ಬರೆದ ಪುಸ್ತಕ. ಆದರೆ ಕ್ಯಾಬಿನೆಟ್ ಮಂತ್ರಿಗಳ ಪ್ರಕಾರ ಇಂತಹ ಪುಸ್ತಕ ಅಸ್ತಿತ್ವದಲ್ಲೇ ಇಲ್ಲ," ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
आज अगर प्रधानमंत्री संसद में आते हैं, तो मैं उन्हें एक किताब भेंट करूंगा।
— Rahul Gandhi (@RahulGandhi) February 4, 2026
यह किताब किसी विपक्षी नेता की नहीं है।
यह किताब किसी विदेशी लेखक की नहीं है।
यह किताब है देश के पूर्व सेना प्रमुख जनरल नरवणे की - और हैरानी की बात यह है कि यह किताब कैबिनेट मंत्रियों के हिसाब से मौजूद ही… pic.twitter.com/xKzh0wPdni
ನರವಾಣೆ ಕೃತಿಯಲ್ಲಿ ಏನಿದೆ?
2020ರಲ್ಲಿ ಚೀನಾ ಸೈನ್ಯ ಭಾರತದ ಗಡಿಯೊಳಗೆ ಪ್ರವೇಶಿಸಿದಾಗ, ಗಂಭೀರವಾದ ಆ ಸಮಯದಲ್ಲಿ ಸೇನಾ ಮುಖ್ಯಸ್ಥರನ್ನು ಕಾಯುವಂತೆ ಮಾಡಲಾಗಿತ್ತು ಎಂದು ರಾಹುಲ್ ಆರೋಪಿಸಿದ್ದಾರೆ. "ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಾಗ ಪ್ರಧಾನಿಯವರು 'ನಿಮಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನೇ ಮಾಡಿ' ಎಂದು ಕೈತೊಳೆದುಕೊಂಡರು. ದೇಶದ ಭದ್ರತೆಯ ಅತಿ ದೊಡ್ಡ ಬಿಕ್ಕಟ್ಟಿನ ಸಮಯದಲ್ಲಿ ಮೋದಿ ಅವರು ರಾಜಕೀಯ ಜವಾಬ್ದಾರಿಯಿಂದ ನುಣುಚಿಕೊಂಡರು ಎಂದು ಜನರಲ್ ನರವಾಣೆ ಅವರೇ ಬರೆದಿದ್ದಾರೆ," ಎಂದು ರಾಹುಲ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಗದ್ದಲ ಮತ್ತು ಸದಸ್ಯರ ಅಮಾನತು
ಚೀನಾ ವಿಚಾರ ಪ್ರಸ್ತಾಪಿಸಿದ್ದಕ್ಕೆ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡದ ಕಾರಣ ಸದನದಲ್ಲಿ ಭಾರೀ ಗದ್ದಲ ಉಂಟಾಯಿತು. ನಿಯಮ ಉಲ್ಲಂಘನೆ ಮತ್ತು "ಸಭಾಧ್ಯಕ್ಷರ ಪೀಠದತ್ತ ಪೇಪರ್ ಎಸೆದ" ಆರೋಪದ ಮೇಲೆ ಕಾಂಗ್ರೆಸ್‌ನ ಹಿಬಿ ಈಡನ್ ಸೇರಿದಂತೆ ಎಂಟು ವಿರೋಧ ಪಕ್ಷದ ಸಂಸದರನ್ನು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ.
ಕಾಂಗ್ರೆಸ್‌ನ ಹಿಬಿ ಈಡನ್ ಜೊತೆಗೆ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಗುರ್ಜಿತ್ ಸಿಂಗ್ ಔಜ್ಲಾ, ಪ್ರಶಾಂತ್ ಯಾದೋರಾವ್ ಪಡೋಲೆ, ಚಮಾಲ ಕಿರಣ್ ಕುಮಾರ್ ರೆಡ್ಡಿ, ಡೀನ್ ಕುರಿಯಾಕೋಸ್ ಮತ್ತು ಸಿಪಿಐ(ಎಂ)ನ ಎಸ್ ವೆಂಕಟೇಶನ್ ಅವರನ್ನು ಅಮಾನತುಗೊಳಿಸಲಾಗಿದೆ.

