
ಉತ್ತರ ಪ್ರದೇಶದ ಮೀರತ್ ದಕ್ಷಿಣ ಮೆಟ್ರೋ ನಿಲ್ದಾಣದಲ್ಲಿ ಮೀರತ್ ಮೆಟ್ರೋ ರೈಲು (ಎಡ) ಮತ್ತು ನಮೋ ಭಾರತ್ ರೈಲು.
ದೇಶದ ಅತಿ ವೇಗದ 'ನಮೋ ಭಾರತ್' ರೈಲು, ಮೀರತ್ ಮೆಟ್ರೋ ಭಾನುವಾರ ಲೋಕಾರ್ಪಣೆ
ಮೀರತ್ ದಕ್ಷಿಣ ಮತ್ತು ಮೋದಿಪುರಂ ನಡುವಿನ ಸಂಪೂರ್ಣ ಮಾರ್ಗವನ್ನು ಎಲ್ಲ ನಿಲ್ದಾಣಗಳಲ್ಲಿ ನಿಲ್ಲಿಸಿಕೊಂಡು ಕೇವಲ 30 ನಿಮಿಷಗಳಲ್ಲಿ ಕ್ರಮಿಸಲಿದೆ.
ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉತ್ತರ ಪ್ರದೇಶದ ಮೀರತ್‌ನಲ್ಲಿ ದೇಶದ ಅತಿ ವೇಗದ ಮೆಟ್ರೋ ಸೇವೆ ಹಾಗೂ 'ನಮೋ ಭಾರತ್' ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಸುಮಾರು 12,930 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನೂ ಅವರು ಇದೇ ಸಂದರ್ಭದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಮೀರತ್ ಮೆಟ್ರೋ ಗಂಟೆಗೆ ಗರಿಷ್ಠ 120 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಈ ಮೂಲಕ ದೇಶದ ಅತಿ ವೇಗದ ಮೆಟ್ರೋ ಎಂಬ ಹೆಗ್ಗಳಿಕೆ ಪಡೆಯಲಿದೆ. ಮೀರತ್ ದಕ್ಷಿಣ ಮತ್ತು ಮೋದಿಪುರಂ ನಡುವಿನ ಸಂಪೂರ್ಣ ಮಾರ್ಗವನ್ನು ಎಲ್ಲ ನಿಲ್ದಾಣಗಳಲ್ಲಿ ನಿಲ್ಲಿಸಿಕೊಂಡು ಕೇವಲ 30 ನಿಮಿಷಗಳಲ್ಲಿ ಕ್ರಮಿಸಲಿದೆ. ದೇಶದಲ್ಲೇ ಮೊದಲ ಬಾರಿಗೆ 'ನಮೋ ಭಾರತ್' ಮತ್ತು ಮೆಟ್ರೋ ರೈಲುಗಳು ಒಂದೇ ಮೂಲಭೂತ ಸೌಕರ್ಯದ ಮೇಲೆ ಸಂಚರಿಸುವ ವಿನೂತನ ಪ್ರಯೋಗ ಇದು ಎನ್ನಲಾಗಿದೆ.
82 ಕಿ.ಮೀ ಕಾರಿಡಾರ್ ಪೂರ್ಣ
ಪ್ರಧಾನಿ ಮೋದಿ ದೆಹಲಿ ಮತ್ತು ಮೀರತ್ ನಡುವಿನ ಸಂಪೂರ್ಣ 82 ಕಿ.ಮೀ ಉದ್ದದ 'ನಮೋ ಭಾರತ್' ಕಾರಿಡಾರ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದರಲ್ಲಿ ದೆಹಲಿಯ ಸರಾಯ್ ಕಾಲೇ ಖಾನ್ ಮತ್ತು ನ್ಯೂ ಅಶೋಕ್ ನಗರ ನಡುವಿನ 5 ಕಿ.ಮೀ ವಿಭಾಗ ಮತ್ತು ಮೀರತ್ ದಕ್ಷಿಣ ಹಾಗೂ ಮೋದಿಪುರಂ ನಡುವಿನ 21 ಕಿ.ಮೀ ವಿಭಾಗ ಸೇರಿವೆ. ಗಂಟೆಗೆ 180 ಕಿ.ಮೀ ವೇಗದ ವಿನ್ಯಾಸ ಹೊಂದಿರುವ 'ನಮೋ ಭಾರತ್', ಭಾರತದ ಮೊದಲ ಪ್ರಾದೇಶಿಕ ಸಾರಿಗೆ ವ್ಯವಸ್ಥೆ (RRTS) ಆಗಿದ್ದು, ಸಾಹೀಬಾಬಾದ್, ಗಾಜಿಯಾಬಾದ್, ಮೋದಿನಗರ ಮತ್ತು ಮೀರತ್ ಅನ್ನು ದೆಹಲಿಯೊಂದಿಗೆ ನೇರವಾಗಿ ಸಂಪರ್ಕಿಸಲಿದೆ.
ಸರಾಯ್ ಕಾಲೇ ಖಾನ್ ಬಹುಸಂಪರ್ಕ ಕೇಂದ್ರ
ಕಾರಿಡಾರ್‌ನ ಆರಂಭ ನಿಲ್ದಾಣವಾಗಿರುವ ಸರಾಯ್ ಕಾಲೇ ಖಾನ್ ತಾಣ ವ್ಯೂಹಾತ್ಮಕ ದೃಷ್ಟಿಯಿಂದ ಮಹತ್ವದ್ದಾಗಿದೆ. ಇದು ಹಜ್ರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣ, ದೆಹಲಿ ಮೆಟ್ರೋ ಪಿಂಕ್ ಲೈನ್, ವೀರ್ ಹಕ್ಕೀಕತ್ ರಾಯ್ ಅಂತಾರಾಜ್ಯ ಬಸ್ ನಿಲ್ದಾಣ ಮತ್ತು ರಿಂಗ್ ರೋಡ್‌ನೊಂದಿಗೆ ನೇರ ಸಂಪರ್ಕ ಹೊಂದಿರುವ ಬಹು ಸಾರಿಗೆ ಸಂಧಿಸ್ಥಾನ. ಮೀರತ್‌ನಲ್ಲಿ ಶತಾಬ್ದಿ ನಗರ, ಬೇಗಂಪಲ್ ಮತ್ತು ಮೋದಿಪುರಂ ನಿಲ್ದಾಣಗಳೂ ಇದೇ ವೇಳೆ ಕಾರ್ಯಾರಂಭ ಮಾಡಲಿವೆ.

