ವಿಶ್ವದ ಅತಿದೊಡ್ಡ ಎಐ ಶೃಂಗಸಭೆಗೆ ದೆಹಲಿಯಲ್ಲಿ ಪ್ರಧಾನಿ ಚಾಲನೆ
x

ವಿಶ್ವದ ಅತಿದೊಡ್ಡ 'ಎಐ' ಶೃಂಗಸಭೆಗೆ ದೆಹಲಿಯಲ್ಲಿ ಪ್ರಧಾನಿ ಚಾಲನೆ

ಈ ಶೃಂಗಸಭೆಯು ಭಾರತದ ತಾಂತ್ರಿಕ ಕೌಶಲ್ಯ ಮತ್ತು ಬೃಹತ್ ಎಂಜಿನಿಯರಿಂಗ್ ಪ್ರತಿಭೆ ಪ್ರದರ್ಶನಕ್ಕಾಗಿ ಏರ್ಪಡಿಸಿದ್ದ ಬೃಹತ್​ ಕಾರ್ಯಕ್ರಮ.


Click the Play button to hear this message in audio format

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಹಾಗೂ ತಂತ್ರಜ್ಞಾನದ ಬಳಕೆಯನ್ನು ಜಾಗತಿಕವಾಗಿ ವಿಸ್ತರಿಸುವ ಮಹತ್ವಾಕಾಂಕ್ಷೆಯೊಂದಿಗೆ ಆಯೋಜಿಸಲಾಗಿರುವ 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಫೆ.16) ಚಾಲನೆ ನೀಡಿದರು. ಫೆಬ್ರವರಿ 20ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಈ ವಿಶ್ವದ ಅತಿದೊಡ್ಡ ಎಐ ಶೃಂಗಸಭೆಯ ಉದ್ಘಾಟನಾ ಸಮಾರಂಭಕ್ಕೆ ಭಾರತ್ ಮಂಡಪದಲ್ಲಿ ಜಾಗತಿಕ ತಂತ್ರಜ್ಞಾನ ದಿಗ್ಗಜರು, ಉದ್ಯಮಿಗಳು, ನೀತಿ ನಿರೂಪಕರು ಮತ್ತು ತಂತ್ರಜ್ಞರು ಸಾಕ್ಷಿಯಾದರು.

ಸಮಾವೇಶದ ಭಾಗವಾಗಿ ಆಯೋಜಿಸಲಾಗಿರುವ 'ಎಐ ಇಂಪ್ಯಾಕ್ಟ್ ಎಕ್ಸ್‌ಪೋ'ವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಬಳಿಕ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಅವರು, ಎಐ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಿರುವ ಸ್ಟಾರ್ಟಪ್‌ಗಳು ಮತ್ತು ಕಂಪನಿಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ಬೆಳಿಗ್ಗೆ 9.30ಕ್ಕೆ ಅಧಿಕೃತವಾಗಿ ಸಮ್ಮೇಳನ ಆರಂಭವಾಗುವ ಮುನ್ನವೇ 'ಭಾರತ್ ಮಂಡಪ'ದ ಎದುರು ಉದ್ದನೆಯ ಸಾಲುಗಳಲ್ಲಿ ಜನರು ನಿಂತಿದ್ದ ದೃಶ್ಯಗಳು, ಎಐ ವಿಷಯದ ಬಗ್ಗೆ ಪ್ರಸ್ತುತ ಜಗತ್ತಿನಲ್ಲಿರುವ ಕುತೂಹಲಕ್ಕೆ ಕನ್ನಡಿ ಹಿಡಿದಂತಿತ್ತು.

ತಾಂತ್ರಿಕ ಕೌಶಲ

ಈ ಶೃಂಗಸಭೆಯು ಭಾರತದ ತಾಂತ್ರಿಕ ಕೌಶಲ್ಯ ಮತ್ತು ಬೃಹತ್ ಎಂಜಿನಿಯರಿಂಗ್ ಪ್ರತಿಭೆ ಪ್ರದರ್ಶನಕ್ಕಾಗಿ ಏರ್ಪಡಿಸಿದ್ದ ಬೃಹತ್​ ಕಾರ್ಯಕ್ರಮವಾಗಿದೆ. ಅದೇ ರೀತಿ 'ಗ್ಲೋಬಲ್ ಸೌತ್' ರಾಷ್ಟ್ರಗಳಲ್ಲಿ ಎಐ ತಂತ್ರಜ್ಞಾನದ ಬಳಕೆಯನ್ನು ವ್ಯಾಪಕಗೊಳಿಸುವುದು ಭಾರತದ ಪ್ರಮುಖ ಉದ್ದೇಶ. ಪ್ರಮುಖ ವಲಯಗಳಲ್ಲಿ ಎಐ ಬಳಕೆಯ ಮಾದರಿಗಳನ್ನು ಹಂಚಿಕೊಳ್ಳುವ ಹಾಗೂ ಅದಕ್ಕಾಗಿ ಅಂತಾರಾಷ್ಟ್ರೀಯ ಒಪ್ಪಂದವೊಂದನ್ನು ರೂಪಿಸುವ 'ಗ್ಲೋಬಲ್ ಎಐ ಕಾಮನ್ಸ್' ಪರಿಕಲ್ಪನೆಯನ್ನು ಭಾರತ ಈ ವೇದಿಕೆಯಲ್ಲಿ ಪ್ರಬಲವಾಗಿ ಪ್ರತಿಪಾದಿಸಲಿದೆ.

ಐದು ದಿನಗಳ ಈ ಬೃಹತ್ ಸಮಾವೇಶದಲ್ಲಿ 3,250ಕ್ಕೂ ಹೆಚ್ಚು ಭಾಷಣಕಾರರು ಮತ್ತು 500ಕ್ಕೂ ಹೆಚ್ಚು ಗೋಷ್ಠಿಗಳು ನಡೆಯಲಿವೆ. ಗೂಗಲ್‌ನ ಸುಂದರ್ ಪಿಚೈ, ಓಪನ್ ಎಐನ ಸ್ಯಾಮ್ ಆಲ್ಟ್‌ಮನ್ ಮತ್ತು ಆಂಥ್ರೋಪಿಕ್‌ನ ಡಾರಿಯೊ ಅಮೋಡೆ ಅವರಂತಹ ದಿಗ್ಗಜರು ಬುಧವಾರದ ನಂತರ ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಕೊನೆಯ ಎರಡು ದಿನಗಳಂದು (ಫೆ. 19 ಮತ್ತು 20) ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಬ್ರೆಜಿಲ್ ಅಧ್ಯಕ್ಷ ಲುಲಾ ಡಾ ಸಿಲ್ವಾ ಸೇರಿದಂತೆ 20ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದು, ಎಐ ಭವಿಷ್ಯದ ಬಗ್ಗೆ ಚರ್ಚಿಸಲಿದ್ದಾರೆ.

ಪ್ರಮುಖ ಕಂಪನಿಗಳು ಭಾಗಿ

ಎಐ ಯುಗದಲ್ಲಿ ಉದ್ಯೋಗಾವಕಾಶ, ಕೌಶಲ್ಯ ಅಭಿವೃದ್ಧಿ, ಸುರಕ್ಷಿತ ಎಐ ಬಳಕೆ, ಆಡಳಿತ ನಿರ್ವಹಣೆ ಹಾಗೂ ಜನರೇಟಿವ್ ಎಐ ಅಳವಡಿಕೆ ಕುರಿತು ಗೋಷ್ಠಿಗಳು ನಡೆಯುತ್ತಿವೆ. ಎಕ್ಸ್‌ಪೋದಲ್ಲಿ ಗೂಗಲ್, ಎನ್‌ವಿಡಿಯಾ, ಅಮೆಜಾನ್, ಮೆಟಾ, ಮೈಕ್ರೋಸಾಫ್ಟ್ ಸೇರಿದಂತೆ ದೇಶೀಯ ದಿಗ್ಗಜ ಕಂಪನಿಗಳು ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸುತ್ತಿವೆ. 'ಜನರು, ಗ್ರಹ ಮತ್ತು ಪ್ರಗತಿ' ಎಂಬ ಧ್ಯೇಯವಾಕ್ಯದಡಿ 600ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಮತ್ತು 13 ದೇಶಗಳ ಪೆವಿಲಿಯನ್‌ಗಳು ಇಲ್ಲಿವೆ. 2023ರಲ್ಲಿ ಬ್ರಿಟನ್‌ನಲ್ಲಿ ನಡೆದ ಶೃಂಗಸಭೆಯು ಎಐ ಸುರಕ್ಷತೆಯ ಮೇಲೆ ಮತ್ತು 2025ರ ಫ್ರಾನ್ಸ್ ಶೃಂಗಸಭೆಯು ಹೂಡಿಕೆಯ ಮೇಲೆ ಕೇಂದ್ರೀಕೃತವಾಗಿದ್ದವು. ಇದೀಗ ಭಾರತದಲ್ಲಿ ನಡೆಯುತ್ತಿರುವ ಶೃಂಗಸಭೆಯು ಎಐ ತಂತ್ರಜ್ಞಾನದ ವ್ಯಾಪಕ ಬಳಕೆ ಮತ್ತು ಪರಿಣಾಮದ ಮೇಲೆ ಬೆಳಕು ಚೆಲ್ಲುತ್ತಿದೆ.

Read More
Next Story