
ಭಾರತ -ಯುರೋಪ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಸಹಿ
ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವೆ ಇಂದು ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ (FTA) ಘೋಷಣೆಯಾಗಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಆರ್ಥಿಕ ನೀತಿಗಳಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆಯ ನಡುವೆಯೇ, ಭಾರತ ಮತ್ತು ಯುರೋಪಿಯನ್ ಯೂನಿಯನ್ ಇಂದು ಅತ್ಯಂತ ಮಹತ್ವದ 'ಮುಕ್ತ ವ್ಯಾಪಾರ ಒಪ್ಪಂದ'ಕ್ಕೆ (FTA) ಸಹಿ ಹಾಕಲಿವೆ. ಈ ಒಪ್ಪಂದವು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ರಕ್ಷಣೆ ಮತ್ತು ತಂತ್ರಜ್ಞಾನ ವಲಯದಲ್ಲೂ ಹೊಸ ಇತಿಹಾಸ ಬರೆಯಲಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸಮಗ್ರ ದ್ವಿಪಕ್ಷೀಯ ಸಂಬಂಧ
ಈ ಒಪ್ಪಂದವು ಭಾರತ ಮತ್ತು ಯುರೋಪ್ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಕೇವಲ ವ್ಯಾಪಾರ ಮಾತ್ರವಲ್ಲದೆ ರಕ್ಷಣೆ, ಭದ್ರತೆ, ಹವಾಮಾನ ಬದಲಾವಣೆ ಮತ್ತು ನಿರ್ಣಾಯಕ ತಂತ್ರಜ್ಞಾನಗಳ ಮೇಲೆ ಇದು ಹೆಚ್ಚಿನ ಗಮನ ಹರಿಸಲಿದೆ.
ರಕ್ಷಣಾ ಸಹಭಾಗಿತ್ವ
ಯುರೋಪ್ ಈಗ ಅಮೆರಿಕ ಮತ್ತು ಚೀನಾದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರತದೊಂದಿಗೆ ಹೊಸ 'ರಕ್ಷಣಾ ಚೌಕಟ್ಟು' ಮತ್ತು 'ಕಾರ್ಯತಂತ್ರದ ಕಾರ್ಯಸೂಚಿ'ಯನ್ನು ಉಭಯ ದೇಶಗಳು ಅನಾವರಣಗೊಳಿಸಲಿವೆ.
ಗಣರಾಜ್ಯೋತ್ಸವದ ಅತಿಥಿಗಳು
ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರನ್ನು ಬರಮಾಡಿಕೊಂಡಿದ್ದರು. ಇವರಿಬ್ಬರೂ ಭಾರತದ 77ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಎಂಬುದು ವಿಶೇಷ.
77ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ
20 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ
2007ರಲ್ಲಿ ಮೊದಲ ಬಾರಿಗೆ ಮಾತುಕತೆ ಆರಂಭವಾಗಿತ್ತು. ನಂತರ 2013ರಲ್ಲಿ ಸ್ಥಗಿತಗೊಂಡು, 2022ರಲ್ಲಿ ಮತ್ತೆ ಪುನರಾರಂಭಗೊಂಡ ಈ ಪ್ರಕ್ರಿಯೆ ಇಂದು ತಾರ್ಕಿಕ ಅಂತ್ಯ ತಲುಪಿದೆ. ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಇದನ್ನು ಮದರ್ ಆಫ್ ಆಲ್ ಡೀಲ್ಸ್ ಎಂದು ಬಣ್ಣಿಸಿದ್ದಾರೆ.
200 ಕೋಟಿ ಜನರ ಬೃಹತ್ ಮಾರುಕಟ್ಟೆ
ಈ ಒಪ್ಪಂದದ ಮೂಲಕ ಸುಮಾರು 200 ಕೋಟಿ ಜನಸಂಖ್ಯೆಯನ್ನು ಒಳಗೊಂಡ ಬೃಹತ್ ಮಾರುಕಟ್ಟೆ ಸೃಷ್ಟಿಯಾಗಲಿದೆ. ಇದು ಜಾಗತಿಕ ಜಿಡಿಪಿಯ (GDP) ಸುಮಾರು ಶೇಕಡಾ 25ರಷ್ಟು ಪಾಲನ್ನು ಹೊಂದಿರಲಿದೆ.
ಯಾವ ವಸ್ತುಗಳ ಬೆಲೆ ಇಳಿಕೆಯಾಗಲಿದೆ?
ಯುರೋಪ್‌ನಿಂದ ಆಮದು ಮಾಡಿಕೊಳ್ಳುವ ಬ್ರಾಂಡೆಡ್ ಉತ್ಪನ್ನಗಳ ಮೇಲೆ ಸುಂಕ ಇಳಿಕೆಯಾಗಲಿದೆ. ಶೇ. 110ರಷ್ಟು ಇರುವ ಸುಂಕವನ್ನು ಪ್ರಾಥಮಿಕವಾಗಿ ಶೇ. 40ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಇದರಿಂದ BMW, Mercedes-Benz, ಮತ್ತು Volkswagen ನಂತಹ ಕಾರುಗಳು ಅಗ್ಗವಾಗಲಿವೆ. ವಿದೇಶಿ ಮದ್ಯಗಳ ಮೇಲಿನ ತೆರಿಗೆಯಲ್ಲಿ ಗಣನೀಯ ಕಡಿತವಾಗಲಿದೆ.
ಭಾರತಕ್ಕೆ ಸಿಗಲಿರುವ ಲಾಭಗಳು
ಭಾರತದ ಕಾರ್ಮಿಕ-ಪ್ರಧಾನ ವಲಯಗಳಿಗೆ ಯುರೋಪ್ ಮಾರುಕಟ್ಟೆಯಲ್ಲಿ 'ಶೂನ್ಯ ಸುಂಕ' ಪ್ರವೇಶ ಸಿಗಲಿದೆ. ಜವಳಿ-ಸಿದ್ಧ ಉಡುಪುಗಳು, ಚರ್ಮದ ಉತ್ಪನ್ನಗಳು- ಪಾದರಕ್ಷೆಗಳು, ರತ್ನ ಮತ್ತು ಆಭರಣಗಳ ಮೇಲಿನ ಸುಂಕ ತೆಗೆದು ಹಾಕಲಾಗುತ್ತದೆ ಎಂದುತಜ್ಞರು ವಿಶ್ಲೇಸಿದ್ದಾರೆ.
ಭಾರತೀಯ ಕಂಪನಿಗಳಿಗೆ 150 ಬಿಲಿಯನ್ ಯುರೋ ಲಾಟರಿ
ಭಾರತೀಯ ಕಂಪನಿಗಳು ಯುರೋಪಿಯನ್ ಯೂನಿಯನ್‌ನ 'SAFE' (Security Action for Europe) ಯೋಜನೆಯಲ್ಲಿ ಭಾಗವಹಿಸಲು ಅವಕಾಶ ಪಡೆಯಲಿವೆ. ಇದು ಯುರೋಪ್‌ನ ರಕ್ಷಣಾ ಸನ್ನದ್ಧತೆಗೆ ಮೀಸಲಾದ ಬೃಹತ್ ಆರ್ಥಿಕ ನಿಧಿಯಾಗಿದೆ.
ವೀಸಾ ಪ್ರಕ್ರಿಯೆಯೂ ಸರಳ
ಭಾರತೀಯ ವೃತ್ತಿಪರರು ಮತ್ತು ನುರಿತ ಕಾರ್ಮಿಕರು ಕೆಲಸದ ಉದ್ದೇಶಕ್ಕಾಗಿ ಯುರೋಪಿಯನ್ ರಾಷ್ಟ್ರಗಳಿಗೆ ತೆರಳಲು ವೀಸಾ ಪ್ರಕ್ರಿಯೆ ಮತ್ತು ಇತರ ನಿಯಮಗಳು ಸರಳವಾಗಲಿವೆ.
ಚೀನಾಕ್ಕೆ ಟಕ್ಕರ್ ಮತ್ತು ಅಮೆರಿಕದ ಪ್ರಭಾವ
ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಕಠಿಣ ಸುಂಕ ನೀತಿಗಳಿಂದ ಜಾಗತಿಕ ವಾಣಿಜ್ಯ ವಲಯದಲ್ಲಿ ಅಸ್ಥಿರತೆ ಉಂಟಾಗಿದೆ. ಈ ಸಮಯದಲ್ಲಿ ಭಾರತ ಮತ್ತು ಯುರೋಪ್ ಒಂದಾಗಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಚೀನಾಕ್ಕೆ ಪ್ರಬಲ ಪೈಪೋಟಿ ನೀಡಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರೊಂದಿಗೆ ಇಂದು 16ನೇ ಭಾರತ-ಇಯು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಒಪ್ಪಂದದ ಮಾತುಕತೆ ಮುಕ್ತಾಯದ ಅಧಿಕೃತ ಘೋಷಣೆ ನಡೆಯಲಿದೆ. ಮುಂದಿನ 5-6 ತಿಂಗಳುಗಳಲ್ಲಿ ಇದರ ಕಾನೂನು ಪ್ರಕ್ರಿಯೆಗಳು ನಡೆಯಲಿದ್ದು, 2027ರ ಆರಂಭದಲ್ಲಿ ಈ ಒಪ್ಪಂದವು ಪೂರ್ಣಪ್ರಮಾಣದಲ್ಲಿ ಜಾರಿಗೆ ಬರಲಿದೆ.

