ನರವಾಣೆ ಜೀವನಚರಿತ್ರೆ ವಿವಾದ: ಪುಸ್ತಕದ ಬಗ್ಗೆ ಪೆಂಗ್ವಿನ್ ಇಂಡಿಯಾ ಮಹತ್ವದ ಸ್ಪಷ್ಟನೆ
x
ಜನರಲ್ ಎಂ.ಎಂ. ನರವಾಣೆ ಅವರ ಜೀವನಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಕೃತಿ

ನರವಾಣೆ ಜೀವನಚರಿತ್ರೆ ವಿವಾದ: ಪುಸ್ತಕದ ಬಗ್ಗೆ ಪೆಂಗ್ವಿನ್ ಇಂಡಿಯಾ ಮಹತ್ವದ ಸ್ಪಷ್ಟನೆ

ಮಾಜಿ ಭೂಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕ ಇನ್ನೂ ಪ್ರಕಟವಾಗಿಲ್ಲ ಎಂದು ಪೆಂಗ್ವಿನ್ ಇಂಡಿಯಾ ಸ್ಪಷ್ಟಪಡಿಸಿದೆ.


Click the Play button to hear this message in audio format

ಮಾಜಿ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಜೀವನಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕದ ಪ್ರತಿಗಳ ಬಗ್ಗೆ ಭುಗಿಲೆದ್ದಿರುವ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಈ ಪುಸ್ತಕದ ಪ್ರತಿಯನ್ನು ಕೈಯಲ್ಲಿ ಹಿಡಿದು ಸಂಸತ್‌ ಎದುರು ಹಂಗಾಮಾ ಸೃಷ್ಟಿಸಿದ್ದರು. ಇದರ ಬೆನ್ನಲ್ಲೇ ಹಸ್ತಪ್ರತಿಯನ್ನು ಅಕ್ರಮವಾಗಿ ವಿತರಿಸಲಾಗುತ್ತಿದೆ ಎಂಬ ಶಂಕೆಯ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದರು. ಇದೀಗ ಈ ವಿವಾದ ಬಗ್ಗೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಎಂಬ ಪ್ರಕಾಶನ ಸಂಸ್ಥೆ ಸ್ಪಷ್ಟನೆ ನೀಡಿದೆ.

'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಸಂಪೂರ್ಣ ಪ್ರಕಾಶನ ಹಕ್ಕನ್ನು ತಾನು ಹೊಂದಿರುವುದಾಗಿ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ, ಈ ಪುಸ್ತಕವು ಇದುವರೆಗೆ ಯಾವುದೇ ರೂಪದಲ್ಲಿ ಪ್ರಕಟಗೊಂಡಿಲ್ಲ ಎಂದು ಪ್ರಕಾಶನ ಸಂಸ್ಥೆ ತಿಳಿಸಿದೆ.‌

ಪೆಂಗ್ವಿನ್‌ ಸಂಸ್ಥೆಯ ಎಕ್ಸ್‌ ಪೋಸ್ಟ್‌

ಹಸ್ತಪ್ರತಿಯ ಅನಧಿಕೃತ ಪ್ರತಿಗಳು ಹರಿದಾಡುತ್ತಿವೆ ಎಂಬ ವಿವಾದ ಮತ್ತು ಈ ವಿಚಾರವಾಗಿ ಸಂಸತ್ತಿನಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷದ ನಡುವೆ ಪ್ರಕಾಶನ ಸಂಸ್ಥೆ ಈ ಹೇಳಿಕೆ ನೀಡಿದೆ. ಈ ನಡುವೆ, ಇನ್ನೂ ಅನುಮೋದನೆಗೊಳ್ಳದ ಪ್ರಕಟಣೆಯ ಹಸ್ತಪ್ರತಿಯನ್ನು ಅಕ್ರಮವಾಗಿ ವಿತರಿಸಲಾಗುತ್ತಿದೆ ಎಂಬ ಶಂಕೆಯ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಪೆಂಗ್ವಿನ್‌ ಸಂಸ್ಥೆ ಹೇಳಿದ್ದೇನು?

ಸಾಮಾಜಿಕ ಜಾಲತಾಣಗಳಲ್ಲಿ ಪುಸ್ತಕದ ಹಸ್ತಪ್ರತಿಯ ಪಿಡಿಎಫ್ (PDF) ಮತ್ತು ಡಿಜಿಟಲ್ ಪ್ರತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಕಾಶನ ಸಂಸ್ಥೆ ಈ ಎಚ್ಚರಿಕೆ ನೀಡಿದೆ. ಈ ಪುಸ್ತಕದ ಯಾವುದೇ ಪ್ರತಿಯನ್ನು ನಾವು ಇದುವರೆಗೆ ಮಾರಾಟ ಮಾಡಿಲ್ಲ ಅಥವಾ ಸಾರ್ವಜನಿಕವಾಗಿ ಹಂಚಿಲ್ಲ. ಪ್ರಸ್ತುತ ಓಡಾಡುತ್ತಿರುವ ಯಾವುದೇ ಆವೃತ್ತಿಯು ಕಾಪಿರೈಟ್ (ಕೃತಿಸ್ವಾಮ್ಯ) ಉಲ್ಲಂಘನೆಯಾಗಿದೆ. ಅನಧಿಕೃತವಾಗಿ ಹಸ್ತಪ್ರತಿಯನ್ನು ಹಂಚುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ವಿವಾದವೇನು?

ಪ್ರಕಟಗೊಳ್ಳದ ಈ ಪುಸ್ತಕವು ಸಂಸತ್ತಿನಲ್ಲೂ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಕಳೆದ ವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಪುಸ್ತಕದ ಪ್ರತಿಯನ್ನು ಹಿಡಿದು ಸಂಸತ್ತಿನ ಆವರಣದಲ್ಲಿ ಪ್ರತಿಭಟಿಸಿದ್ದರು. 2020ರ ಲಡಾಖ್‌ನಲ್ಲಿ ನಡೆದ ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆ ನರವಾಣೆ ಅವರು ಬರೆದಿರುವ ವಿಷಯಗಳನ್ನು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಸ್ತಾಪಿಸಲು ಬಯಸಿದ್ದರು.

ಸರ್ಕಾರದ ವಾದವೇನು?

ಪುಸ್ತಕವು ಅಧಿಕೃತವಾಗಿ ಪ್ರಕಟಗೊಳ್ಳದ ಕಾರಣ, ಅದರ ಉಲ್ಲೇಖಗಳನ್ನು ಸಂಸತ್ತಿನಲ್ಲಿ ಬಳಸಲು ಸ್ಪೀಕರ್ ಅನುಮತಿ ನಿರಾಕರಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಇಂತಹ ಪುಸ್ತಕವೇ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಈ ಪುಸ್ತಕದ ಬಗ್ಗೆ ಯುವಕರು ತಿಳಿದುಕೊಳ್ಳಬೇಕು. ಸರ್ಕಾರವು ಸತ್ಯವನ್ನು ಮರೆಮಾಚುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಸಂಸದರ ಅಮಾನತು

ಇನ್ನು ಇದೇ ವಿಚಾರವನ್ನಿಟ್ಟುಕೊಂಡು ಸಂಸತ್‌ನಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಕಾಂಗ್ರೆಸ್‌ನ 7 ಮತ್ತು ಸಿಪಿಐ(ಎಂ)ನ ಓರ್ವ ಸಂಸದ ಸೇರಿದಂತೆ ಒಟ್ಟು 8 ಸಂಸದರನ್ನು ಬಜೆಟ್ ಅಧಿವೇಶನದ ಅಂತ್ಯದವರೆಗೆ ಅಮಾನತುಗೊಳಿಸಲಾಗಿದೆ. ಪ್ರಕಟಗೊಳ್ಳದ ಪುಸ್ತಕದ ಹಸ್ತಪ್ರತಿ ಸೋರಿಕೆಯಾಗಿರುವ ಬಗ್ಗೆ ದೆಹಲಿ ಪೊಲೀಸರ ವಿಶೇಷ ದಳ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

Read More
Next Story