
ಪದ್ಮ ಪುರಸ್ಕೃತರಿಗೆ ರಾಷ್ಟ್ರಪತಿಗಳ ಸಹಿ ಇರುವ ಪ್ರಮಾಣಪತ್ರ ಮತ್ತು ಪದಕವನ್ನು ಮಾತ್ರ ನೀಡಲಾಗುತ್ತದೆ.
ಪದ್ಮ ಪ್ರಶಸ್ತಿಗಳು 2026: ಅತ್ಯುನ್ನತ ನಾಗರಿಕ ಗೌರವ ಪಡೆದ ಸಾಧಕರಿಗೆ ಎಷ್ಟು ನಗದು ಬಹುಮಾನ ಸಿಗುತ್ತದೆ?
ಪದ್ಮ ಪುರಸ್ಕೃತರಿಗೆ ರಾಷ್ಟ್ರಪತಿಗಳ ಸಹಿ ಇರುವ ಪ್ರಮಾಣಪತ್ರ ಮತ್ತು ಪದಕವನ್ನು ಮಾತ್ರ ನೀಡಲಾಗುತ್ತದೆ. ಇದನ್ನು ʻಶೀರ್ಷಿಕೆʼಯಾಗಿ ಹೆಸರಿನ ಮುಂದೆ ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಕೊಡುವ ಈ ಪುರಸ್ಕಾರಕ್ಕೆ ನಗದು ಬಹುಮಾನ, ಸೌಲಭ್ಯಗಳು ಹೇಗಿರಲಿವೆ ಎಂಬ ಕುತೂಹಲ ಹಲವರಲ್ಲಿ ಇರುತ್ತದೆ. ಕ್ರೀಡಾ ಕ್ಷೇತ್ರದ ಸಾಧಕರಿಗೆ ಅತ್ಯುನ್ನತ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಕೇಂದ್ರ ಸರ್ಕಾರ 25ಲಕ್ಷ ರೂ. ನಗದು ಬಹುಮಾನ ನೀಡಲಿದೆ.
ಅರ್ಜುನ ಪ್ರಶಸ್ತಿಗೆ 15ಲಕ್ಷ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ 15 ಲಕ್ಷ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ 2ರಿಂದ 3ಲಕ್ಷ ನಗದು ಬಹುಮಾನ ನೀಡುವ ವ್ಯವಸ್ಥೆ ಇದೆ. ಈ ಎಲ್ಲಾ ರಾಷ್ಟ್ರೀಯ ಪುರಸ್ಕಾರಗಳಿಗೆ ಇರುವಂತೆ ಪದ್ಮ ಪ್ರಶಸ್ತಿಗಳಿಗೂ ನಗದು ಬಹುಮಾನ ಇರಬಹುದು ಎಂದು ಭಾವಿಸುವುದರಲ್ಲಿ ತಪ್ಪಿಲ್ಲ.
ಆದರೆ, ಪದ್ಮ ಪ್ರಶಸ್ತಿಗಳಿಗೆ ಯಾವುದೇ ನಗದು ಬಹುಮಾನ ಹಾಗೂ ವಿಶೇಷ ಸೌಲಭ್ಯಗಳು ಸಿಗುವುದಿಲ್ಲ ಎಂಬುದೇ ವಾಸ್ತವ. ಪದ್ಮ ಪ್ರಶಸ್ತಿಗಳು ಅತ್ಯುನ್ನತ ನಾಗರಿಕ ಗೌರವಗಳಾಗಿದ್ದು, ರಾಷ್ಟ್ರಪತಿಗಳಿಂದ ಪದಕ ಹಾಗೂ ಪ್ರಮಾಣ ಪತ್ರ ಮಾತ್ರ ಸಿಗಲಿದೆ.
ಪ್ರಶಸ್ತಿ ಪುರಸ್ಕೃತರಿಗೆ ನಗದು ಬಹುಮಾನ ಸಿಗಲಿದೆಯೇ?
ಪದ್ಮ ಪ್ರಶಸ್ತಿ ವಿಜೇತರಿಗೆ ಕೇಂದ್ರ ಸರ್ಕಾರ ನಗದು ಬಹುಮಾನ ಘೋಷಿಸುವುದಿಲ್ಲ. ಬದಲಿಗೆ ಆಯಾ ರಾಜ್ಯ ಸರ್ಕಾರಗಳು ನಗದು ಪುರಸ್ಕಾರ ನೀಡಲಿವೆ. ಆದರೂ, ಇದು ಕೂಡ ಕಡ್ಡಾಯವಲ್ಲ. ಕೆಲವು ರಾಜ್ಯಗಳು ಸಾಧಕರಿಗೆ ನಗದು ಬಹುಮಾನ, ಪಿಂಚಣಿ, ವಿಶೇಷ ಸರ್ಕಾರಿ ಸೌಲಭ್ಯಗಳನ್ನು ಘೋಷಿಸಲಿವೆ.
2024 ನೇ ಸಾಲಿನಲ್ಲಿ ತೆಲಂಗಾಣ ಸರ್ಕಾರವು ಸಾಹಿತ್ಯ ಹಾಗೂ ಕಲೆಗೆ ಪದ್ಮ ಪ್ರಶಸ್ತಿ ಸ್ವೀಕರಿಸಿದ ಸಾಧಕರಿಗೆ ತಲಾ 25 ಲಕ್ಷ ರೂ. ನಗದು ಹಾಗೂ 25 ಸಾವಿರ ಪಿಂಚಣಿ ಘೋಷಿಸಿತ್ತು. ಹರಿಯಾಣ ಸರ್ಕಾರ ಪ್ರಶಸ್ತಿ ಪುರಸ್ಕೃತರಿಗೆ ತಲಾ 10 ಸಾವಿರ ರೂ. ಪಿಂಚಣಿ ಘೋಷಣೆ ಮಾಡಿತ್ತು. ಅಸ್ಸಾಂನಲ್ಲಿ ಪದ್ಮ ಪ್ರಶಸ್ತಿ ಪುರಸ್ಜೃತರಿಗೆ ಪಿಂಚಣಿ ಹಾಗೂ ಆರೋಗ್ಯ ವಿಮೆ ನೀಡಲಾಗಿತ್ತು.
ಪದ್ಮ ಪ್ರಶಸ್ತಿ ವಿಶೇಷತೆ ಏನು?
1954 ರಲ್ಲಿ ಪದ್ಮ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. ಮೊದಲ ವರ್ಷವೇ 17 ಮಂದಿ ಪುರಸ್ಕೃತರನ್ನು ಗೌರವಿಸಲಾಯಿತು. ಆರಂಭದಲ್ಲಿ, ಪದಕವು ಕಮಲ ಮತ್ತು ರಾಷ್ಟ್ರೀಯ ಲಾಂಛನದೊಂದಿಗೆ ವೃತ್ತಾಕಾರದ ವಿನ್ಯಾಸ ಹೊಂದಿತ್ತು. ದೇವನಾಗರಿಯಲ್ಲಿ ಕೆತ್ತಲಾದ ಕಂಚಿನ ಪದಕಗಳಾಗಿವೆ. ಈ ಪ್ರಶಸ್ತಿಗಳಿಂದ ರಾಷ್ಟ್ರ ಮಟ್ಟದಲ್ಲಿ ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ.
ಹಲವು ಬಾರಿ ಪ್ರಶಸ್ತಿ ನೀಡಿರಲಿಲ್ಲ
ರಾಜಕೀಯ ಕಾರಣಗಳಿಂದಾಗಿ 1977 ರಿಂದ 1980 ಮತ್ತು 1992 ರಿಂದ1995ರ ಅವಧಿಯಲ್ಲಿ ಪದ್ಮ ಪ್ರಶಸ್ತಿಗಳನ್ನು ಘೋಷಿಸಿರಲಿಲ್ಲ. 2015 ರಿಂದ ಕೇಂದ್ರ ಸರ್ಕಾರವು ನಾಮನಿರ್ದೇಶನ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿದೆ. ಸಾಮಾನ್ಯ ನಾಗರಿಕರು ಅರ್ಹ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಎಲೆ ಮರೆಯ ಕಾಯಿಯಂತೆ ಸಾಧನೆ ಮಾಡಿದವರನ್ನೂ ಗುರುತಿಸಿ, ಗೌರವಿಸುವ ಪ್ರಶಸ್ತಿಯಾಗಿ ಬೆಳೆದಿದೆ. ಕೆಲವು ಸಂದರ್ಭಗಳಲ್ಲಿ ಪ್ರಶಸ್ತಿ ಆಯ್ಕೆಯಲ್ಲಿ ಪಕ್ಷಪಾತದ ಆರೋಪಗಳೂ ಕೇಳಿ ಬಂದಿವೆ. ಈಗಾಗಲೇ ಪದ್ಮ ಪ್ರಶಸ್ತಿ ಪಡೆದಿರುವವರೂ ಕೂಡ ಪ್ರಶಸ್ತಿಗಳಿಗೆ ಆಯ್ಕೆಯಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ನು ಪ್ರಶಸ್ತಿ ಸ್ವೀಕರಿಸುವವರ ಹೆಸರಿನ ಮುಂದೆ ಪ್ರಶಸ್ತಿಯ ಶೀರ್ಷಿಕೆ ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಈ ಹಿಂದೆ ಹೇಳಿದೆ.

