
ಸಾರಸ್ವತ ಲೋಕದ ಮೇರು ಸಾಧಕ ಶತಾವಧಾನಿ ಗಣೇಶ್‌ಗೆ ‘ಪದ್ಮಭೂಷಣ’ ಗರಿ
ತಾಂತ್ರಿಕ ಶಿಕ್ಷಣದ ನಡುವೆಯೂ ಸಾಹಿತ್ಯದ ಸೆಳೆತಕ್ಕೆ ಒಳಗಾದ ಗಣೇಶ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ‘ಕನ್ನಡದಲ್ಲಿ ಅವಧಾನ ಕಲೆ’ ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪ್ರಪ್ರಥಮ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.
ಬಹುಭಾಷಾ ಪಂಡಿತ, ಅವಧಾನ ಕಲೆ ಪ್ರಚುರಪಡಿಸುತ್ತಿರುವ ಶತಾವಧಾನಿ ಡಾ.ಆರ್.ಗಣೇಶ್ ಅವರಿಗೆ 2026ನೇ ಸಾಲಿನ ಅತ್ಯುನ್ನತ ಪದ್ಮಭೂಷಣ ನಾಗರಿಕ ಗೌರವ ಸಂದಿದೆ. ಕನ್ನಡ, ಸಂಸ್ಕೃತ ಸೇರಿ ವಿವಿಧ ಭಾಷೆಗಳಲ್ಲಿ ಸಾವಿರಾರು ಅವಧಾನಗಳನ್ನು ಪ್ರಸ್ತುತಪಡಿಸುವ ಮೂಲಕ ಭಾರತೀಯ ಸಾಹಿತ್ಯ, ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸಿದ ಇವರ ಸಾಧನೆಗೆ ಕೇಂದ್ರ ಸರ್ಕಾರ ನೀಡಿದೆ.
ಬಹುಮುಖ ಪ್ರತಿಭೆಯ ಸಾಧಕ
1962 ಡಿ.4 ರಂದು ಕೋಲಾರದಲ್ಲಿ ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿ ಪುತ್ರನಾಗಿ ಜನಿಸಿದ ಗಣೇಶ್ ಅವರು ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ ಪದವಿ ಪಡೆದರು.
ತಾಂತ್ರಿಕ ಶಿಕ್ಷಣದ ನಡುವೆಯೂ ಸಾಹಿತ್ಯದ ಸೆಳೆತಕ್ಕೆ ಒಳಗಾದ ಗಣೇಶ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ‘ಕನ್ನಡದಲ್ಲಿ ಅವಧಾನ ಕಲೆ’ ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪ್ರಪ್ರಥಮ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.
ಅವಧಾನ ಕಲೆಯ ಅಧಿಪತಿ
ಬೆಳ್ಳಾವೆ ನರಹರಿಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಅವಧಾನ ಕಲೆ ಕಲಿತ ಗಣೇಶ್ ಅವರು, 1981ರಲ್ಲಿ ಈ ಕಲೆಯ ಮೇಲೆ ಹಿಡಿತ ಸಾಧಿಸಿದರು. 1987ರಲ್ಲಿ ಕೋಲಾರದಲ್ಲಿ ಡಿ.ವಿ.ಜಿ ಅವರ ನೂರನೇ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಮೊದಲ ಅಷ್ಟಾವಧಾನದ ಮೂಲಕ ಸಾರ್ವಜನಿಕವಾಗಿ ಹೊರಹೊಮ್ಮಿದರು.
ಶತಾವಧಾನಿ ಆರ್. ಗಣೇಶ್ ಅವರು ಈವರೆಗೆ 1300ಕ್ಕೂ ಹೆಚ್ಚು ಅಷ್ಟಾವಧಾನಗಳು ಮತ್ತು ಎಂಟು ಭಾಷೆಗಳಲ್ಲಿ ಶತಾವಧಾನಗಳನ್ನು ನೆರವೇರಿಸಿದ್ದಾರೆ. ಕನ್ನಡ, ಸಂಸ್ಕೃತ, ತೆಲುಗು ಮತ್ತು ತಮಿಳು ಎಂಬ ನಾಲ್ಕು ಭಾಷೆಗಳಲ್ಲಿ ಅವಧಾನ ನಡೆಸಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ 20ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ವಿದೇಶೀಯರಿಗೂ ಭಾರತೀಯ ಕಾವ್ಯ ವೈಭವದ ಪರಿಚಯ ಮಾಡಿಸಿದ್ದಾರೆ.
18 ಭಾಷೆಗಳ ಪ್ರಕಾಂಡ ಪಂಡಿತ
ರಾಷ್ಟ್ರಕವಿ ಎಂ. ಗೋವಿಂದ ಪೈ ಅವರನ್ನೇ ಆದರ್ಶವನ್ನಾಗಿಟ್ಟುಕೊಂಡ ಗಣೇಶ್ ಅವರು ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಹಿಂದಿ, ಪಾಳಿ, ಶೌರಸೇನಿ, ಮರಾಠಿ, ಬಂಗಾಳಿ ಮಾತ್ರವಲ್ಲದೆ ಇಂಗ್ಲಿಷ್, ಗ್ರೀಕ್, ಲ್ಯಾಟಿನ್ ಮತ್ತು ಇಟಾಲಿಯನ್ ಸೇರಿದಂತೆ ಒಟ್ಟು 18 ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ. ಎಂಜಿನಿಯರಿಂಗ್ನಿಂದ ಹಿಡಿದು ತತ್ವಶಾಸ್ತ್ರದವರೆಗೆ, ಯಕ್ಷಗಾನದಿಂದ ಹಿಡಿದು ಮೆಟಲರ್ಜಿಯವರೆಗೆ ಇವರ ಜ್ಞಾನ ವ್ಯಾಪ್ತಿ ವಿಸ್ತರಿಸಿದೆ.
ಸಾಹಿತ್ಯ ಮತ್ತು ಸಂಶೋಧನೆ
ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿರುವ ಇವರು ಅಲಂಕಾರ ಶಾಸ್ತ್ರ, ವಿಮರ್ಶೆ, ನೃತ್ಯ ಮತ್ತು ವಿಜ್ಞಾನ ವಿಷಯಗಳ ಕುರಿತು ಗಂಭೀರ ಚರ್ಚೆಗಳನ್ನು ನಡೆಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಭಾರತೀಯ ವಿದ್ಯಾಭವನದ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಈಗ ತಮ್ಮ ‘ಸಹಸ್ರಾವಧಾನ’ಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಡಾ. ಆರ್. ಗಣೇಶ್ ಅವರಿಗೆ ಸಂದಿರುವ ಈ ಪದ್ಮಭೂಷಣ ಪ್ರಶಸ್ತಿಯು ಕನ್ನಡ ಸಾರಸ್ವತ ಲೋಕಕ್ಕೆ ದೊರೆತ ದೊಡ್ಡ ಗೌರವವಾಗಿದೆ.

