Speaker OM Birla| ಲೋಕಸಭೆ ಸ್ಪೀಕರ್ ಪದಚ್ಯುತಿ: ಸಂಸತ್‌ನಲ್ಲಿ ಇಂದು ಹೈಡ್ರಾಮಾ; ಸಂವಿಧಾನ ಹೇಳೋದೇನು?
x
ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ(ಸಂಗ್ರಹ ಚಿತ್ರ)

Speaker OM Birla| ಲೋಕಸಭೆ ಸ್ಪೀಕರ್ ಪದಚ್ಯುತಿ: ಸಂಸತ್‌ನಲ್ಲಿ ಇಂದು ಹೈಡ್ರಾಮಾ; ಸಂವಿಧಾನ ಹೇಳೋದೇನು?

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ನಿರ್ಣಯ ಮಂಡಿಸಿವೆ. ಸಂವಿಧಾನಾತ್ಮಕ ಪ್ರಕ್ರಿಯೆ ಮತ್ತು ಇಂದಿನ ಸದನದ ಹೈಲೈಟ್ಸ್ ಇಲ್ಲಿದೆ.


ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಆ ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ವಿರೋಧ ಪಕ್ಷಗಳು ಮಂಡಿಸಿರುವ ನಿರ್ಣಯವು ಇಂದು (ಮಾರ್ಚ್ 9) ಸಂಸತ್ತಿನಲ್ಲಿ ಚರ್ಚೆಗೆ ಬರಲಿದೆ. ಇಂದು ಸಂಸತ್‌ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ಸಂಘರ್ಷ ನಡೆಯುವ ಸಾಧ್ಯತೆ ಇದೆ.

ವಿರೋಧ ಪಕ್ಷಗಳ ಆರೋಪವೇನು?

ಕಾಂಗ್ರೆಸ್ ಸಂಸದರಾದ ಮೊಹಮ್ಮದ್ ಜಾವೇದ್, ಕೊಡಿಕ್ಕುನ್ನಿಲ್ ಸುರೇಶ್ ಮತ್ತು ಮಳ್ಳು ರವಿ ಈ ನೋಟಿಸ್ ನೀಡಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಅವರು "ಪಕ್ಷಪಾತ"ದಿಂದ ವರ್ತಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡಿವೆ. ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ವಿರೋಧ ಪಕ್ಷದ ಮಹಿಳಾ ಸಂಸದರ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ವಿಷಯ ಎತ್ತಿದ ಸಂಸದರನ್ನು ಇಡೀ ಅಧಿವೇಶನಕ್ಕೆ ಅಮಾನತುಗೊಳಿಸಿದ್ದಾರೆ. ಅಲ್ಲದೇ ಆಡಳಿತ ಪಕ್ಷದ ಸದಸ್ಯರು ಮಾಜಿ ಪ್ರಧಾನಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದರೂ ಅವರನ್ನು ತಡೆದಿಲ್ಲ ಎಂಬುದು ವಿರೋಧ ಪಕ್ಷ ನಾಯಕರ ಆರೋಪ.

ಸಂವಿಧಾನ ಮತ್ತು ಸಂಸದೀಯ ನಿಯಮಗಳು ಏನು ಹೇಳುತ್ತವೆ?

ಸಂವಿಧಾನದ ಪ್ರಕಾರ ಲೋಕಸಭೆಯ ಸ್ಪೀಕರ್ ಅವರನ್ನು ಪದಚ್ಯುತಗೊಳಿಸಲು ಈ ಕೆಳಗಿನ ಪ್ರಕ್ರಿಯೆಗಳನ್ನು ಪಾಲಿಸಬೇಕು:

  • ಸ್ಪೀಕರ್ ಪದಚ್ಯುತಿ ನಿರ್ಣಯವನ್ನು ಕೈಗೆತ್ತಿಕೊಳ್ಳುವ ಮೊದಲು, ಕನಿಷ್ಠ 50 ಸಂಸದರು ಎದ್ದು ನಿಂತು ಈ ಪ್ರಕ್ರಿಯೆಯನ್ನು ಬೆಂಬಲಿಸಬೇಕು.
  • 50 ಸಂಸದರ ಬೆಂಬಲ ಸಿಕ್ಕರೆ ಮಾತ್ರ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತದೆ.
  • ಈ ಚರ್ಚೆ ನಡೆಯುವಾಗ ಸ್ಪೀಕರ್ ಅವರು ಸದನದ ಅಧ್ಯಕ್ಷತೆ ವಹಿಸುವಂತಿಲ್ಲ. ಆದರೆ, ಅವರು ಸದನದಲ್ಲಿ ಹಾಜರಿರಬಹುದು, ತಮ್ಮ ಪರವಾಗಿ ವಾದ ಮಂಡಿಸಬಹುದು ಮತ್ತು ಮತದಾನದಲ್ಲಿ ಪಾಲ್ಗೊಳ್ಳಬಹುದು.
  • ಚರ್ಚೆಯ ನಂತರ ಮತದಾನ ನಡೆಯುತ್ತದೆ. ಸದನದಲ್ಲಿ ಹಾಜರಿರುವ ಬಹುಪಾಲು ಸದಸ್ಯರು ನಿರ್ಣಯದ ಪರ ಮತ ಚಲಾಯಿಸಿದರೆ ಮಾತ್ರ ಸ್ಪೀಕರ್ ಅಧಿಕಾರ ಕಳೆದುಕೊಳ್ಳುತ್ತಾರೆ.

ಪ್ರಧಾನಿ ಮೋದಿ ಸಮರ್ಥನೆ

ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಬಿರ್ಲಾ ಅವರು ಸಂವಿಧಾನ ಮತ್ತು ಸಂಸದೀಯ ಕಾರ್ಯವಿಧಾನಗಳಿಗೆ ಸಂಪೂರ್ಣ ಬದ್ಧರಾಗಿದ್ದಾರೆ ಹಾಗೂ ಪಕ್ಷಭೇದ ಮರೆತು ಕುಟುಂಬದ ಮುಖ್ಯಸ್ಥನಂತೆ ಸದನವನ್ನು ನಿಭಾಯಿಸುತ್ತಿದ್ದಾರೆ ಎಂದು ಮೋದಿ ಶ್ಲಾಘಿಸಿದ್ದಾರೆ.

ವಿಪ್‌ ಜಾರಿ

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಸಂಸದರಿಗೆ ಸದನದಲ್ಲಿ ಹಾಜರಿರುವಂತೆ 'ತ್ರೀ ಲೈನ್ ವಿಪ್' ಜಾರಿಗೊಳಿಸಿವೆ. ವಿರೋಧ ಪಕ್ಷಗಳ ಒಕ್ಕೂಟ (INDIA Bloc) ಈ ನಿರ್ಣಯಕ್ಕೆ ಬೆಂಬಲ ನೀಡಿದೆ. ಆದರೆ, ಲೋಕಸಭೆಯಲ್ಲಿ ಸರ್ಕಾರದ ಸಂಖ್ಯಾಬಲ ಹೆಚ್ಚಿರುವುದರಿಂದ ಈ ನಿರ್ಣಯ ಸೋಲುವ ಸಾಧ್ಯತೆ ಹೆಚ್ಚಿದೆ.

ಸಂಘರ್ಷಕ್ಕೆ ಕಾರಣವಾದ ಅಂಶ

ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಪ್ರಕಟವಾಗದ ಆತ್ಮಕಥೆಯ ಅಂಶಗಳನ್ನು ರಾಹುಲ್ ಗಾಂಧಿ ಪ್ರಸ್ತಾಪಿಸಲು ಹೋದಾಗ ಸ್ಪೀಕರ್ ಅನುಮತಿ ನಿರಾಕರಿಸಿದ್ದರು. ಇದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು.

Read More
Next Story