
ತಂದೆಯನ್ನೇ ಕೊಂದ ಮಗ; ಅಕ್ಕನ ಎದುರೇ ಶವವನ್ನು ತುಂಡರಿಸಿ ಡ್ರಮ್‌ಗೆ ತುಂಬಿದ ಆರೋಪಿ
UP Horror|ವೈದ್ಯಕೀಯ ವೃತ್ತಿ ಸೇರಲು ಒತ್ತಾಯಿಸಿದ ತಂದೆಯನ್ನು 21 ವರ್ಷದ ಮಗ ಗುಂಡಿಕ್ಕಿ ಕೊಂದಿದ್ದಾನೆ. ಶವವನ್ನು ತುಂಡರಿಸಿ ಡ್ರಮ್‌ನಲ್ಲಿ ಅಡಗಿಸಿಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ನಡೆದ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ. ಫಾರ್ಮಸಿ ನಡೆಸುತ್ತಿದ್ದ 49 ವರ್ಷದ ಮಾನ್ವೇಂದ್ರ ಸಿಂಗ್ ಎಂಬುವವರನ್ನು ಅವರ 21 ವರ್ಷದ ಮಗ ಅಕ್ಷತ್ ಪ್ರತಾಪ್ ಸಿಂಗ್ ಗುಂಡಿಕ್ಕಿ ಕೊಂದಿದ್ದಾನೆ. ಅಷ್ಟೇ ಅಲ್ಲದೆ, ಸಾಕ್ಷ್ಯ ನಾಶಪಡಿಸಲು ತಂದೆಯ ಶವವನ್ನು ತುಂಡು ತುಂಡು ಮಾಡಿ ಅದನ್ನು ಡ್ರಮ್‌ನಲಿ ಮುಚ್ಚಿಟ್ಟಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ
ಮಾನ್ವೇಂದ್ರ ಸಿಂಗ್ ಅವರು ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಪೊಲೀಸರು ತನಿಖೆ ಆರಂಭಿಸಿ ಅವರ ಮನೆಗೆ ಭೇಟಿ ನೀಡಿದಾಗ, ಮನೆಯಲ್ಲಿದ್ದ ನೀಲಿ ಬಣ್ಣದ ಡ್ರಮ್‌ನಲ್ಲಿ ದೇಹದ ಕೆಲವು ಭಾಗಗಳು ಪತ್ತೆಯಾಗಿವೆ. ಮಗ ಅಕ್ಷತ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ತಂದೆ ಮಾನ್ವೇಂದ್ರ ಸಿಂಗ್ ತನ್ನ ಮಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ವೈದ್ಯಕೀಯ ವೃತ್ತಿ ಸೇರಬೇಕೆಂದು ಬಯಸಿದ್ದರು. ಆದರೆ ಅಕ್ಷತ್‌ಗೆ ಇದರಲ್ಲಿ ಆಸಕ್ತಿ ಇರಲಿಲ್ಲ. ಇದೇ ವಿಷಯವಾಗಿ ತಂದೆ-ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹಿಂದೆ ಒಮ್ಮೆ ಇದೇ ಕಾರಣಕ್ಕೆ ಅಕ್ಷತ್ ಮನೆಯಿಂದ ಓಡಿ ಹೋಗಿದ್ದ ಎನ್ನಲಾಗಿದೆ.
ಶುಕ್ರವಾರ ಸಂಜೆ 4:30ರ ಸುಮಾರಿಗೆ ಕೆರಿಯರ್ ವಿಚಾರವಾಗಿ ಮತ್ತೆ ಜಗಳ ಆರಂಭವಾಗಿದೆ. ಈ ವೇಳೆ ಆಕ್ರೋಶಗೊಂಡ ಅಕ್ಷತ್ ರೈಫಲ್‌ನಿಂದ ತಂದೆಗೆ ಗುಂಡು ಹಾರಿಸಿದ್ದಾನೆ. ನಂತರ ಶವವನ್ನು ಮೂರನೇ ಮಹಡಿಯಿಂದ ನೆಲಮಹಡಿಗೆ ಹೊತ್ತೊಯ್ದು, ಅಲ್ಲಿನ ಖಾಲಿ ಕೋಣೆಯಲ್ಲಿ ಶವವನ್ನು ತುಂಡರಿಸಲು ಆರಂಭಿಸಿದ್ದಾನೆ.
ಅಕ್ಕನ ಎದುರೇ ಮೃತ ದೇಹ ಕತ್ತರಿಸಿದ್ದ ಆರೋಪಿ
ಇನ್ನು ತಂದೆಯ ಶವವನ್ನು ತುಂಡು ತುಂಡು ಮಾಡುತ್ತಿದ್ದ ಭಯಾನಕ ದೃಶ್ಯವನ್ನು ಅಕ್ಷತ್‌ನ ಅಕ್ಕ ನೋಡಿದ್ದಾರೆ. ಆಗ, ಆಕೆಯನ್ನು ಬೆದರಿಸಿ ಮೌನವಾಗಿರುವಂತೆ ಮಾಡಿದ್ದಾನೆ. ಆಕೆಯ ಮುಂದೆಯೇ ಶವದ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿ ಸದರುನಾ ಎಂಬಲ್ಲಿ ವಿಲೇವಾರಿ ಮಾಡಿದ್ದಾನೆ. ದೇಹದ ಮೇಲ್ಭಾಗವನ್ನು (Torso) ಮನೆಯಲ್ಲೇ ಇದ್ದ ನೀಲಿ ಬಣ್ಣದ ಡ್ರಮ್‌ನಲ್ಲಿ ಅಡಗಿಸಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಅಕ್ಷತ್ ಪ್ರತಾಪ್ ಸಿಂಗ್ ಪೊಲೀಸರ ವಶದಲ್ಲಿದ್ದಾನೆ. ವಿಧಿವಿಜ್ಞಾನ ತಂಡವು ಮನೆಯಿಂದ ಮಾದರಿಗಳನ್ನು ಸಂಗ್ರಹಿಸುತ್ತಿದ್ದು, ವಿಲೇವಾರಿ ಮಾಡಲಾದ ದೇಹದ ಇತರ ಭಾಗಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಲಕ್ನೋದ ಆಶಿಯಾನಾ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ವಿಕ್ರಾಂತ್ ವೀರ್ ಮಾತನಾಡಿ, "ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ಸೂಕ್ತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದಿದ್ದಾರೆ.

