Child Abuse Case| 33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ದಂಪತಿಗೆ ಮರಣದಂಡನೆ
x
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಗೆ ಗಲ್ಲು ಶಿಕ್ಷೆ

Child Abuse Case| 33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ದಂಪತಿಗೆ ಮರಣದಂಡನೆ

ಉತ್ತರಪ್ರದೇಶ ಬಂಡಾ ಜಿಲ್ಲೆಯಲ್ಲಿ 33 ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ಜೂನಿಯರ್ ಎಂಜಿನಿಯರ್ ಮತ್ತು ಆತನ ಪತ್ನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತರಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.


Click the Play button to hear this message in audio format

ಉತ್ತರ ಪ್ರದೇಶದ ಬಂಡಾದಲ್ಲಿ 33 ಮಕ್ಕಳ ಮೇಲೆ ನಡೆದ ಅಮಾನುಷ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಕಿರಿಯ ಎಂಜಿನಿಯರ್ ಆಗಿದ್ದ ರಾಮ್‌ಭಬನ್ ಮತ್ತು ಆತನ ಪತ್ನಿ ದುರ್ಗಾವತಿ ಈ ಭೀಕರ ಕೃತ್ಯದ ಅಪರಾಧಿಗಳಾಗಿದ್ದು, ಇವರಿಬ್ಬರನ್ನೂ ಪ್ರಕರಣದ ದೋಷಿ ಎಂದು ಘೋಷಿಸಿರುವ ಕೋರ್ಟ್‌, ಗಲ್ಲು ಶಿಕ್ಷೆ ವಿಧಿಸಿದೆ.

ಪ್ರಕರಣದ ಹಿನ್ನೆಲೆ ಮತ್ತು ದೌರ್ಜನ್ಯದ ಭೀಕರತೆ

ಉತ್ತರ ಪ್ರದೇಶದ ನೀರಾವರಿ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿದ್ದ ರಾಮ್‌ಭಬನ್, 2010 ರಿಂದ 2020ರ ನಡುವೆ ಬಂಡಾ ಮತ್ತು ಚಿತ್ರಕೂಟ ಜಿಲ್ಲೆಗಳಲ್ಲಿ ಈ ಕೃತ್ಯ ಎಸಗಿದ್ದಾನೆ. ಮೂರು ವರ್ಷದ ಹಸುಗೂಸು ಸೇರಿದಂತೆ 33 ಮಕ್ಕಳನ್ನು ಹಣ, ಉಡುಗೊರೆ ಮತ್ತು ಆನ್‌ಲೈನ್ ವಿಡಿಯೋ ಗೇಮ್‌ಗಳ ಆಸೆ ತೋರಿಸಿ ಈ ದಂಪತಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು.

ಸಿಬಿಐ ತನಿಖೆಯ ವೇಳೆ ಈ ದೌರ್ಜನ್ಯ ಎಷ್ಟು ಭೀಕರವಾಗಿತ್ತು ಎಂದರೆ, ಕೆಲವು ಮಕ್ಕಳು ಗುಪ್ತಾಂಗದ ಗಾಯಗಳಿಂದ ವರ್ಷಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಇನ್ನು ಕೆಲವು ಮಕ್ಕಳು ಕಣ್ಣಿನ ಗಾಯ ಮತ್ತು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶಗಳು

ಈ ಭೀಕರ ಪ್ರಕರಣವನ್ನು 'ಅಪರೂಪದಲ್ಲಿ ಅಪರೂಪದ್ದು' ಎಂದು ಬಣ್ಣಿಸಿರುವ ನ್ಯಾಯಾಲಯವು, ಅಪರಾಧಿಗಳಲ್ಲಿ ಸುಧಾರಣೆಯ ಸಾಧ್ಯತೆಯೇ ಇಲ್ಲ ಎಂದು ಅಭಿಪ್ರಾಯಪಟ್ಟು ಅವರಿಗೆ ಮರಣದಂಡನೆ ವಿಧಿಸಿದೆ. ತೀರ್ಪಿನ ಭಾಗವಾಗಿ ಪ್ರತಿ ಸಂತ್ರಸ್ತ ಮಗುವಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿರುವ ಕೋರ್ಟ್, ಆರೋಪಿಗಳ ಮನೆಯಲ್ಲಿ ಪತ್ತೆಯಾದ ಹಣವನ್ನು ಎಲ್ಲಾ ಸಂತ್ರಸ್ತರಿಗೆ ಸಮನಾಗಿ ಹಂಚುವಂತೆ ಸೂಚಿಸಿದೆ. ಅಪರಾಧಿಗಳ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ, ಚೈಲ್ಡ್ ಪೋರ್ನೋಗ್ರಫಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಪೋಕ್ಸೊ (POCSO) ಕಾಯ್ದೆಯ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಲಾಗಿದೆ.

ಸಿಬಿಐನ ಚಾತುರ್ಯದ ತನಿಖೆ

2020ರಲ್ಲಿ ಪ್ರಕರಣ ದಾಖಲಿಸಿಕೊಂಡ ಸಿಬಿಐ, ಕೇವಲ ನಾಲ್ಕೇ ತಿಂಗಳಲ್ಲಿ ಅಂದರೆ ಫೆಬ್ರವರಿ 2021ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಡಿಜಿಟಲ್ ಪುರಾವೆಗಳ ಸಂರಕ್ಷಣೆ, ವಿಧಿವಿಜ್ಞಾನ ತಜ್ಞರ ಬಳಕೆ ಮತ್ತು ಸಂತ್ರಸ್ತ ಮಕ್ಕಳ ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಡೆಸಿದ ಸಂವೇದನಾಶೀಲ ತನಿಖೆಯು ಈ ಪ್ರಕರಣದಲ್ಲಿ ಶಿಕ್ಷೆಯಾಗುವಂತೆ ಮಾಡಿದೆ.

Read More
Next Story