ಉನ್ನಾವೋ ಪ್ರಕರಣ: 3 ತಿಂಗಳಲ್ಲಿ ಸೆಂಗಾರ್ ಅರ್ಜಿ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್‌ ಆದೇಶ
x
ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್

ಉನ್ನಾವೋ ಪ್ರಕರಣ: 3 ತಿಂಗಳಲ್ಲಿ ಸೆಂಗಾರ್ ಅರ್ಜಿ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್‌ ಆದೇಶ

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ನಿಗೂಢ ಸಾವು ಪ್ರಕರಣದಲ್ಲಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಮೇಲ್ಮನವಿಯನ್ನು ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್‌ಗೆ ಸೂಚಿಸಿದೆ.


ಪೊಲೀಸ್‌ ಕಸ್ಟಡಿಯಲ್ಲಿರುವಾಗಲೇ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ನಿಗೂಢವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಮಹತ್ವದ ಆದೇಶವೊಂದನ್ನು ನೀಡಿದೆ. ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಉತ್ತರ ಪ್ರದೇಶದ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಸಲ್ಲಿಸಿರುವ ಮೇಲ್ಮನವಿಯನ್ನು ಆದ್ಯತೆಯ ಮೇರೆಗೆ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ದೆಹಲಿ ಹೈಕೋರ್ಟ್‌ಗೆ ಸೂಚಿಸಿದೆ.

ಪ್ರಕರಣದ ಹಿನ್ನೆಲೆ

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಕುಲದೀಪ್ ಸಿಂಗ್ ಸೆಂಗಾರ್ ತಪ್ಪಿತಸ್ಥ ಎಂದು ಸಾಬೀತಾಗಿ, ನ್ಯಾಯಾಲಯ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ದೆಹಲಿ ಹೈಕೋರ್ಟ್ ಜನವರಿ 19 ರಂದು ಈ ಶಿಕ್ಷೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸೆಂಗಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ಸೂಚನೆಗಳು

ಸೋಮವಾರ ನಡೆದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸಾಮಾನ್ಯವಾಗಿ ಮೇಲ್ಮನವಿಗಳು ವಿಚಾರಣೆಗೆ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ. ಆದರೆ, ಈ ಪ್ರಕರಣವನ್ನು ಆದ್ಯತೆಯ ಮೇಲೆ ಪರಿಗಣಿಸಿ, ಬೇಗನೆ ವಿಚಾರಣೆ ಮುಗಿಸುವಂತೆ ದೆಹಲಿ ಹೈಕೋರ್ಟ್‌ಗೆ ಸೂಚಿಸಿದೆ. ಮುಂದಿನ ಮೂರು ತಿಂಗಳ ಒಳಗಾಗಿ ಈ ಮೇಲ್ಮನವಿಯ ಬಗ್ಗೆ ಅಂತಿಮ ತೀರ್ಪು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಕಾಲಮಿತಿ ನಿಗದಿಪಡಿಸಿದೆ.

ಎರಡೂ ಅರ್ಜಿಗಳ ಒಟ್ಟು ವಿಚಾರಣೆ

ಆರೋಪಿ ಮತ್ತು ಸಂತ್ರಸ್ತ ಕುಟುಂಬ ಸಲ್ಲಿಸಿರುವ ಎರಡೂ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಲು ಕೋರ್ಟ್‌ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ವಿಧಿಸಲಾಗಿರುವ ಶಿಕ್ಷೆಯನ್ನು ಪ್ರಶ್ನಿಸಿದ ಸೆಂಗಾರ್‌ ಅರ್ಜಿ ಸಲ್ಲಿಸಿದರೆ, ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕೆಂದು (10 ವರ್ಷಕ್ಕಿಂತ ಹೆಚ್ಚು) ಸಂತ್ರಸ್ತೆಯ ಕುಟುಂಬ ಸಲ್ಲಿಸಿದ ಅರ್ಜಿ. ಈ ಎರಡನ್ನೂ ಒಟ್ಟಿಗೆ ವಿಚಾರಣೆ ನಡೆಸಲು ಸೂಚಿಸಲಾಗಿದೆ.

ವಕೀಲರ ವಾದವೇನಿತ್ತು?

ಸೆಂಗಾರ್ ಪರ ವಕೀಲರು, "ಸೆಂಗಾರ್ ಈಗಾಗಲೇ ಸುಮಾರು 7 ವರ್ಷ 7 ತಿಂಗಳು ಜೈಲಿನಲ್ಲಿ ಕಳೆದಿದ್ದಾರೆ. 10 ವರ್ಷದ ಶಿಕ್ಷೆಯಲ್ಲಿ ಬಹುಪಾಲು ಶಿಕ್ಷೆ ಮುಗಿದಿರುವುದರಿಂದ ಅವರಿಗೆ ನ್ಯಾಯ ಸಿಗಬೇಕು," ಎಂದು ವಾದಿಸಿದರು. ಸಿಬಿಐ ಪರ ಹಾಜರಾದ ತುಷಾರ್ ಮೆಹ್ತಾ ಅವರು, ಫೆಬ್ರವರಿ 11, 2026 ರಿಂದಲೇ ಈ ವಿಚಾರಣೆ ನಡೆಸಲು ತೊಂದರೆಯಿಲ್ಲ ಎಂದು ತಿಳಿಸಿದರು. ಕುಲದೀಪ್ ಸಿಂಗ್ ಸೆಂಗಾರ್ ಅವರ ಶಿಕ್ಷೆ ಮುಂದುವರಿಯಬೇಕೇ ಅಥವಾ ಅವರಿಗೆ ರಿಯಾಯಿತಿ ಸಿಗಬೇಕೇ ಎಂಬ ಬಗ್ಗೆ ಮುಂದಿನ 90 ದಿನಗಳಲ್ಲಿ ದೆಹಲಿ ಹೈಕೋರ್ಟ್ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ.

Read More
Next Story