Red Fort blast case: ED chargesheet contains many shocking details
x

ಅಲ್ ಫಲಾ ವಿಶ್ವವಿದ್ಯಾಲಯ

ಕೆಂಪುಕೋಟೆ ಸ್ಫೋಟ ಪ್ರಕರಣ: ಇಡಿ ಚಾರ್ಜ್‌ಶೀಟ್‌ನಲ್ಲಿವೆ ಹಲವು ಆಘಾತಕಾರಿ ಅಂಶಗಳು

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮತ್ತು ಪ್ರಾಂಶುಪಾಲರು ಇಡಿಗೆ ನೀಡಿರುವ ಹೇಳಿಕೆಯಲ್ಲಿ, ಡಾ. ಮುಜಮ್ಮಿಲ್ ಗಣೈ, ಡಾ. ಶಹೀನ್ ಸಯೀದ್ ಮತ್ತು ಡಾ. ಉಮರ್ ನಬಿ ಅವರ ನೇಮಕಾತಿಯ ಸಮಯದಲ್ಲಿ ಯಾವುದೇ ಪೊಲೀಸ್ ವೆರಿಫಿಕೇಶನ್ ನಡೆಸಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.


Click the Play button to hear this message in audio format

2025ರ ನವೆಂಬರ್‌ನಲ್ಲಿ ದೆಹಲಿಯ ಕೆಂಪುಕೋಟೆ ಪ್ರದೇಶದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ದೆಹಲಿ ನ್ಯಾಯಾಲಯಕ್ಕೆ ಮಹತ್ವದ ಚಾರ್ಜ್‌ಶೀಟ್ ಸಲ್ಲಿಸಿದೆ. ಫರಿದಾಬಾದ್ ಮೂಲದ 'ಅಲ್ ಫಲಾ ವಿಶ್ವವಿದ್ಯಾಲಯ'ವು (Al Falah University) ಯಾವುದೇ ಪೊಲೀಸ್ ಪರಿಶೀಲನೆ ಅಥವಾ ಸೂಕ್ತ ತಪಾಸಣೆ ನಡೆಸದೆ, ಭಯೋತ್ಪಾದಕ ನಂಟು ಹೊಂದಿರುವ ಮೂವರು ವೈದ್ಯರನ್ನು ನೇಮಕ ಮಾಡಿಕೊಂಡಿತ್ತು ಎಂದು ಇಡಿ ಗಂಭೀರ ಆರೋಪ ಮಾಡಿದೆ.

ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾದ ಮೂವರು ವೈದ್ಯರಲ್ಲಿ ಇಬ್ಬರನ್ನು ಈಗಾಗಲೇ ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಇನ್ನುಳಿದ ಓರ್ವ ವೈದ್ಯ ನವೆಂಬರ್ ಸ್ಫೋಟದ ವೇಳೆ 'ಮಾನವ ಬಾಂಬ್' ಆಗಿ ಮೃತಪಟ್ಟಿದ್ದಾನೆ ಎಂದು ಹೇಳಲಾದ ಡಾ. ಉಮರ್ ನಬಿ. ಇಡಿ ಅಧಿಕಾರಿಗಳ ಪ್ರಕಾರ, ಇವರೆಲ್ಲರೂ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಯಾವುದೇ ಹಿನ್ನೆಲೆ ತಪಾಸಣೆ ಇಲ್ಲದೆ ಕೆಲಸಕ್ಕೆ ಸೇರಿಕೊಂಡಿದ್ದರು.

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮತ್ತು ಪ್ರಾಂಶುಪಾಲರು ಇಡಿಗೆ ನೀಡಿರುವ ಹೇಳಿಕೆಯಲ್ಲಿ, ಡಾ. ಮುಜಮ್ಮಿಲ್ ಗಣೈ, ಡಾ. ಶಹೀನ್ ಸಯೀದ್ ಮತ್ತು ಡಾ. ಉಮರ್ ನಬಿ ಅವರ ನೇಮಕಾತಿಯ ಸಮಯದಲ್ಲಿ ಯಾವುದೇ ಪೊಲೀಸ್ ವೆರಿಫಿಕೇಶನ್ ನಡೆಸಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ವಿವಿಯ ಭಾರೀ ಅಕ್ರಮ

ವಿಶ್ವವಿದ್ಯಾಲಯದ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಇಡಿ, ಈ ವೈದ್ಯರನ್ನು ಕೇವಲ ದಾಖಲೆಗಳಲ್ಲಿ ಮಾತ್ರ ತೋರಿಸಲಾಗಿತ್ತು ಎಂದು ತಿಳಿಸಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಅನುಮೋದನೆ ಪಡೆಯಲು ಮತ್ತು ಆಸ್ಪತ್ರೆಯ ಮಾನ್ಯತೆ ಉಳಿಸಿಕೊಳ್ಳಲು ಈ ವೈದ್ಯರನ್ನು "ರೆಗ್ಯುಲರ್ ಫ್ಯಾಕಲ್ಟಿ" ಎಂದು ತೋರಿಸಲಾಗಿತ್ತು. ಆದರೆ ಇವರು ವಾರಕ್ಕೆ ಎರಡು ದಿನ ಅಥವಾ ಕೇವಲ '22 ದಿನಗಳ ಪಂಚ್' ವ್ಯವಸ್ಥೆಯಡಿ ಕೆಲಸ ಮಾಡುತ್ತಿದ್ದರು. ವಿಶ್ವವಿದ್ಯಾಲಯದ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ ಅವರ ಸೂಚನೆಯ ಮೇರೆಗೆ ಈ ನೇಮಕಾತಿಗಳು ನಡೆದಿದ್ದವು ಎಂದು ತಿಳಿದುಬಂದಿದೆ.

140 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ವಿಶ್ವವಿದ್ಯಾಲಯದ ಸಂಸ್ಥಾಪಕರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸುತ್ತಿರುವ ಇಡಿ, ಫರಿದಾಬಾದ್‌ನ ಧೌಜ್ ಪ್ರದೇಶದಲ್ಲಿರುವ ಸುಮಾರು 140 ಕೋಟಿ ರೂಪಾಯಿ ಮೌಲ್ಯದ ವಿಶ್ವವಿದ್ಯಾಲಯದ ಭೂಮಿ ಮತ್ತು ಕಟ್ಟಡಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ವಿದ್ಯಾರ್ಥಿಗಳಿಂದ ಪಡೆದ ಶುಲ್ಕವನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆ ಮತ್ತು ಮಾನ್ಯತೆಯ ವಿಚಾರದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಆರೋಪವೂ ಸಂಸ್ಥೆಯ ಮೇಲಿದೆ.

ರಾಷ್ಟ್ರದ ರಾಜಧಾನಿಯ ಐತಿಹಾಸಿಕ ಕೆಂಪುಕೋಟೆಯ ಬಳಿ ನಡೆದ ಸ್ಫೋಟದ ತನಿಖೆಯು ಈಗ ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ಲೋಪಗಳತ್ತ ಹೊರಳಿದೆ. ಯಾವುದೇ ಭದ್ರತಾ ತಪಾಸಣೆ ಇಲ್ಲದೆ ಸೂಕ್ಷ್ಮ ಪ್ರದೇಶಗಳ ಸಮೀಪವಿರುವ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ನೇಮಕಾತಿಗಳು ನಡೆಯುತ್ತಿರುವುದು ದೇಶದ ಆಂತರಿಕ ಭದ್ರತೆಯ ದೃಷ್ಟಿಯಿಂದ ಕಳವಳಕಾರಿ ಸಂಗತಿಯಾಗಿದೆ. ಈ ಪ್ರಕರಣದ ಬಗ್ಗೆ ನ್ಯಾಯಾಲಯವು ಮುಂದಿನ ದಿನಗಳಲ್ಲಿ ಚಾರ್ಜ್‌ಶೀಟ್‌ನ ಸಂಜ್ಞಾನ (Cognizance) ತೆಗೆದುಕೊಳ್ಳುವ ನಿರೀಕ್ಷೆಯಿದೆ.

Read More
Next Story