ದೆಹಲಿ ಕೆಂಪುಕೋಟೆ ಸ್ಫೋಟ: ಅಲ್ ಫಲಾಹ್ ವಿವಿ ಮೇಲೆ ಇ.ಡಿ ದಾಳಿ
x

ದೆಹಲಿ ಕೆಂಪುಕೋಟೆ ಸ್ಫೋಟ: ಅಲ್ ಫಲಾಹ್ ವಿವಿ ಮೇಲೆ ಇ.ಡಿ ದಾಳಿ

ಮಂಗಳವಾರ ಮುಂಜಾನೆಯಿಂದಲೇ ದೆಹಲಿ-ಎನ್‌ಸಿಆರ್‌ನ ಹಲವು ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳ ತಂಡಗಳು ಶೋಧ ಕಾರ್ಯಾಚರಣೆ ನಡೆಸಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.


ದೆಹಲಿಯ ಕೆಂಪುಕೋಟೆ ಬಳಿ ನಡೆದಿದ್ದ ಉಗ್ರರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ (ನ.18) ಮಹತ್ವದ ಕ್ರಮ ಕೈಗೊಂಡಿದೆ. ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯ, ಅದರ ಪ್ರವರ್ತಕರು ಹಾಗೂ ಸಂಬಂಧಿತ ವ್ಯಕ್ತಿಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸುತ್ತಿದೆ.

ಮಂಗಳವಾರ ಮುಂಜಾನೆಯಿಂದಲೇ ದೆಹಲಿ-ಎನ್‌ಸಿಆರ್‌ನ ಹಲವು ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳ ತಂಡಗಳು ಶೋಧ ಕಾರ್ಯಾಚರಣೆ ನಡೆಸಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣದ ಹಣಕಾಸು ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿರುವ ಶಂಕೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಎನ್‌ಐಎ ಮತ್ತು ದೆಹಲಿ ಪೊಲೀಸರು ಈ ಹಿಂದೆ ದಾಖಲಿಸಿದ್ದ ಎಫ್‌ಐಆರ್‌ಗಳನ್ನು ಆಧರಿಸಿ ಇ.ಡಿ ಈ ತನಿಖೆ ಆರಂಭಿಸಿದೆ ಎಂದು ತಿಳಿದುಬಂದಿದೆ.

"ವೈಟ್ ಕಾಲರ್ ಉಗ್ರರ ಘಟಕ"ದ ಭಾಗವೆಂಬ ಆರೋಪ ಎದುರಿಸುತ್ತಿರುವ ಅಲ್ ಫಲಾಹ್ ವಿವಿಯು ದೆಹಲಿ ಸಮೀಪದ ಹರಿಯಾಣದ ಫರಿದಾಬಾದ್ ಜಿಲ್ಲೆಯ ಧೌಜ್ ಪ್ರದೇಶದಲ್ಲಿದೆ. ಇದೊಂದು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಾಗಿದೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈವರೆಗೆ "ಆತ್ಮಹತ್ಯಾ ಬಾಂಬರ್" ಡಾ. ಉಮರ್ ನಬಿಯ ಇಬ್ಬರು ಆಪ್ತರನ್ನು ಬಂಧಿಸಿದೆ.

ವಿವಿಯ ಮೇಲೆ ಹೆಚ್ಚಿದ ತನಿಖಾ ಬಿಸಿ

ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC) ವರದಿ ಮಾಡಿದ ಸೂಚನೆಗಳನ್ನು ಉಲ್ಲಂಘನೆಗಳ ನಂತರ, ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಆರೋಪದ ಮೇಲೆ ಕ್ರೈಂ ಬ್ರಾಂಚ್ ವಿಶ್ವವಿದ್ಯಾಲಯದ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿತ್ತು. ಇದರ ಬೆನ್ನಲ್ಲೇ, ಅಲ್ ಫಲಾಹ್ ವಿವಿ ಕುಲಪತಿ ಜವಾದ್ ಅಹ್ಮದ್ ಸಿದ್ದಿಕಿ ಅವರ ಸಹೋದರ ಹಮೂದ್ ಅಹ್ಮದ್ ಸಿದ್ದಿಕಿಯನ್ನು ಸುಮಾರು 25 ವರ್ಷಗಳ ಹಿಂದಿನ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ. ಹೂಡಿಕೆ ಮೇಲೆ ಶೇ. 20ರಷ್ಟು ಬಡ್ಡಿ ನೀಡುವುದಾಗಿ ಜನರಿಂದ ಹಣ ಪಡೆದು ವಂಚಿಸಿದ್ದ ಆರೋಪ ಆತನ ಮೇಲಿದೆ.

Read More
Next Story