ಪಂಜಾಬ್ ಕಾಲೇಜಿನಲ್ಲಿ ಶೂಟೌಟ್: ಸಹಪಾಠಿಗೆ ಗುಂಡಿಕ್ಕಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ!
x
ಸಹಪಾಠಿಯನ್ನು ಗುಂಡಿಕ್ಕಿ ಹತ್ಯೆಗೈದ ಕಾಲೇಜು ವಿದ್ಯಾರ್ಥಿ

ಪಂಜಾಬ್ ಕಾಲೇಜಿನಲ್ಲಿ ಶೂಟೌಟ್: ಸಹಪಾಠಿಗೆ ಗುಂಡಿಕ್ಕಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ!

ಪಂಜಾಬ್‌ನ ತರ್ನ್ ತರನ್ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರಿನ್ಸ್ ರಾಜ್ ತನ್ನ ಸಹಪಾಠಿ ಸಂದೀಪ್ ಕೌರ್‌ಗೆ ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ


Click the Play button to hear this message in audio format

ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಕಾಲೇಜೊಂದರ ತರಗತಿಯ ಒಳಗೆ ಸೋಮವಾರ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಯುವತಿಗೆ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಕೊಂದಿದ್ದು, ಆ ಬಳಿಕ ಅದೇ ಗನ್‌ನಿಂದ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತರಗತಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಭೀಕರ ದೃಶ್ಯಗಳು ಇಡೀ ರಾಜ್ಯವನ್ನೇ ನಡುಗಿಸಿದ್ದು, ಶೈಕ್ಷಣಿಕ ಸಂಸ್ಥೆಗಳ ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿವೆ.

ಘಟನೆಯ ಹಿನ್ನೆಲೆ

ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಕಾಲೇಜೊಂದರಲ್ಲಿ ಸೋಮವಾರ ತರಗತಿಗಳು ಆರಂಭವಾಗುವ ಸಮಯದಲ್ಲಿ ಈ ಘಟನೆ ನಡೆದಿದೆ. ತರಗತಿಯೊಳಗೆ ವಿದ್ಯಾರ್ಥಿಗಳೆಲ್ಲಾ ಕುಳಿತಿದ್ದಾಗ, ಅನಿರೀಕ್ಷಿತವಾಗಿ ಗುಂಡಿನ ದಾಳಿ ನಡೆದಿದ್ದು ಇಡೀ ಕಾಲೇಜು ಆವರಣ ಆತಂಕದಲ್ಲಿ ಮುಳುಗಿತು.

ದುರ್ಘಟನೆ ವಿಡಿಯೊ ಇಲ್ಲಿದೆ

ಯಾರು ಈ ವಿದ್ಯಾರ್ಥಿಗಳು?

ಪ್ರಿನ್ಸ್ ರಾಜ್, ಮಲ್ಲಿಯನ್ ಗ್ರಾಮದ ನಿವಾಸಿ. ಈತನೇ ಗುಂಡು ಹಾರಿಸಿದ ವಿದ್ಯಾರ್ಥಿಯಾಗಿದ್ದಾನೆ. ನೌಶೆಹ್ರಾ ಪನ್ನುವಾನ್ ನಿವಾಸಿ ಸಂದೀಪ್ ಕೌರ್ ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಪ್ರಿನ್ಸ್‌ನ ಸಹಪಾಠಿ.

ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ದೃಶ್ಯ

ತರಗತಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಇಡೀ ಕೃತ್ಯವನ್ನು ನಿಖರವಾಗಿ ಸೆರೆಹಿಡಿದಿದೆ. ಪ್ರಿನ್ಸ್ ರಾಜ್ ತನ್ನ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ತರಗತಿಯೊಳಗೆ ಬರುತ್ತಾನೆ. ಮೊದಲು ಆತ ಸಂದೀಪ್ ಕೌರ್ ಮತ್ತು ಮತ್ತೊಬ್ಬ ಸಹಪಾಠಿ ಯುವತಿಯ ಬಳಿ ಹೋಗಿ ಮಾತು ಆರಂಭಿಸುತ್ತಾನೆ. ಸ್ವಲ್ಪ ಹೊತ್ತು ಮಾತನಾಡಿದ ನಂತರ, ಈ ಮೂವರು ವಿದ್ಯಾರ್ಥಿಗಳು ತರಗತಿಯ ಕೊನೆಯ ಸಾಲಿನ ಸೀಟುಗಳ ಬಳಿ ಹೋಗಿ ಕುಳಿತುಕೊಳ್ಳುತ್ತಾರೆ. ಅಲ್ಲಿಯೂ ಅವರು ಕೆಲವು ನಿಮಿಷಗಳ ಕಾಲ ಸಂಭಾಷಣೆ ನಡೆಸುತ್ತಾರೆ.

ಇದ್ದಕ್ಕಿದ್ದಂತೆ ಪ್ರಿನ್ಸ್ ರಾಜ್ ಎದ್ದು ನಿಲ್ಲುತ್ತಾನೆ. ಯುವತಿಯರಿಗೆ ಬೆನ್ನು ಹಾಕಿ ನಿಂತು ತನ್ನ ಬ್ಯಾಗ್‌ನಿಂದ ಗನ್ ಹೊರತೆಗೆಯುತ್ತಾನೆ. ತಕ್ಷಣವೇ ತಿರುಗಿದ ಆತ, ಅತಿ ಸಮೀಪದಿಂದ ಸಂದೀಪ್ ಕೌರ್ ಮೇಲೆ ಗುಂಡು ಹಾರಿಸುತ್ತಾನೆ. ಸಂದೀಪ್ ಕೌರ್ ನೆಲಕ್ಕೆ ಬೀಳುತ್ತಿದ್ದಂತೆಯೇ, ಪ್ರಿನ್ಸ್ ಅದೇ ಗನ್ ಅನ್ನು ತನ್ನ ತಲೆಗೆ ಇಟ್ಟುಕೊಂಡು ಗುಂಡು ಹಾರಿಸಿಕೊಳ್ಳುತ್ತಾನೆ. ಇಬ್ಬರೂ ತರಗತಿಯ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬೀಳುತ್ತಾರೆ.

ಗುಂಡೇಟು ತಗುಲಿದ ಸಂದೀಪ್ ಕೌರ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪ್ರಿನ್ಸ್ ರಾಜ್ ಅತಿ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಗುಂಡು ಹಾರಿಸಲು ನಿಖರ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ. ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಕಾಲೇಜಿನೊಳಗೆ ವಿದ್ಯಾರ್ಥಿಯು ಮಾರಕ ಆಯುಧವನ್ನು (ಗನ್) ಹೊತ್ತು ತಂದಿದ್ದು ಹೇಗೆ? ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಬಗ್ಗೆ ಮೃತ ಯುವತಿಯ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಭದ್ರತಾ ವೈಫಲ್ಯದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Read More
Next Story