Noida Violence | ನೋಯ್ಡಾ ಕಾರ್ಮಿಕರ ಹಿಂಸಾಚಾರಕ್ಕೆ ಪಾಕಿಸ್ತಾನದ ಸಂಚು? ತನಿಖೆಗೆ ಆದೇಶಿಸಿದ ಯುಪಿ ಸರ್ಕಾರ!
x
ನೋಯ್ಡಾದಲ್ಲಿ ಹಿಂಸಾಚಾರ(ಸಂಗ್ರಹ ಚಿತ್ರ)

Noida Violence | ನೋಯ್ಡಾ ಕಾರ್ಮಿಕರ ಹಿಂಸಾಚಾರಕ್ಕೆ ಪಾಕಿಸ್ತಾನದ ಸಂಚು? ತನಿಖೆಗೆ ಆದೇಶಿಸಿದ ಯುಪಿ ಸರ್ಕಾರ!

ನೋಯ್ಡಾದಲ್ಲಿ ವೇತನ ಹೆಚ್ಚಳಕ್ಕಾಗಿ ಕಾರ್ಮಿಕರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಇದರ ಹಿಂದೆ ಪಾಕಿಸ್ತಾನದ ಕೈವಾಡವಿರುವ ಶಂಕೆಯನ್ನು ಸಚಿವ ಅನಿಲ್ ರಾಜ್‌ಭರ್ ವ್ಯಕ್ತಪಡಿಸಿದ್ದಾರೆ.


ಉತ್ತರ ಪ್ರದೇಶದ ಕೈಗಾರಿಕಾ ಹಬ್ ಆಗಿರುವ ನೋಯ್ಡಾದಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಾರ್ಮಿಕರು ನಡೆಸಿದ ಪ್ರತಿಭಟನೆ ಈಗ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಸುಮಾರು 45,000 ಕಾರ್ಮಿಕರು ಬೀದಿಗಿಳಿದ ಬೆನ್ನಲ್ಲೇ ನಡೆದ ಈ ಅರಾಜಕತೆಯ ಹಿಂದೆ ಅಂತರಾಷ್ಟ್ರೀಯ ಪಿತೂರಿ ಇರುವ ಶಂಕೆಯನ್ನು ಉತ್ತರ ಪ್ರದೇಶ ಸರ್ಕಾರ ವ್ಯಕ್ತಪಡಿಸಿದೆ. ಈ ಹಿಂಸಾಚಾರದಲ್ಲಿ ಪಾಕಿಸ್ತಾನದ ನಂಟು ಇರುವ ಬಗ್ಗೆ ಮತ್ತು ರಾಜ್ಯದ ಅಸ್ಥಿರತೆಗೆ ನಡೆದ 'ಸುಸಜ್ಜಿತ ಸಂಚು' ಇದಾಗಿರಬಹುದು ಎಂದು ಕಾರ್ಮಿಕ ಸಚಿವ ಅನಿಲ್ ರಾಜ್‌ಭರ್ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 300ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ನೋಯ್ಡಾದ ಹಲವು ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಪಾಕಿಸ್ತಾನದ ನಂಟು?

ಸೋಮವಾರ ರಾತ್ರಿ ಹೇಳಿಕೆ ನೀಡಿದ ಸಚಿವ ರಾಜ್‌ಭರ್, "ರಾಜ್ಯದ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕದಡುವ ಉದ್ದೇಶದಿಂದ ಈ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ಸಂಶೋಧನೆಗಳು ಸೂಚಿಸುತ್ತಿವೆ. ಇತ್ತೀಚೆಗಷ್ಟೇ ನೋಯ್ಡಾ ಮತ್ತು ಮೀರತ್‌ನಲ್ಲಿ ಪಾಕಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಸ್ಥಿರತೆ ಸೃಷ್ಟಿಸಲು ನಡೆದ ಪಿತೂರಿಯ ಸಾಧ್ಯತೆ ದಟ್ಟವಾಗಿದೆ," ಎಂದು ಹೇಳಿದ್ದಾರೆ.

300 ಜನರ ಬಂಧನ, 100 ಮಂದಿ ವಶಕ್ಕೆ

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಸುಮಾರು 300 ಜನರನ್ನು ಬಂಧಿಸಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅರಾಜಕತೆ ಸೃಷ್ಟಿಸಿದವರನ್ನು ಗುರುತಿಸುವ ಪ್ರಕ್ರಿಯೆ ಮುಂದುವರಿದಿದೆ. ಮುಜಾಫರ್‌ನಗರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಉದ್ದೇಶವೂ ಈ ಪ್ರತಿಭಟನೆಯ ಹಿಂದೆ ಇತ್ತು ಎಂದು ಸಚಿವರು ಆರೋಪಿಸಿದ್ದಾರೆ.

ಹಿಂಸಾಚಾರಕ್ಕೆ ಕಾರಣವೇನು?

ನೆರೆಯ ಹರಿಯಾಣ ರಾಜ್ಯದಲ್ಲಿ ವೇತನ ಹೆಚ್ಚಳವಾದ ಬೆನ್ನಲ್ಲೇ, ನೋಯ್ಡಾದ ಕಾರ್ಮಿಕರೂ ಸಹ ಸಮಾನ ವೇತನ ಮತ್ತು ಹಣದುಬ್ಬರದಿಂದ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದರು. ಏಪ್ರಿಲ್ 13 ರಂದು ನಾಲ್ಕನೇ ದಿನಕ್ಕೆ ಕಾಲಿಟ್ಟ ಈ ಪ್ರತಿಭಟನೆಯಲ್ಲಿ ಸುಮಾರು 40,000 ರಿಂದ 45,000 ಕಾರ್ಮಿಕರು ನೋಯ್ಡಾದ 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಮಾಯಿಸಿದ್ದರು.

ಉಲ್ಬಣಗೊಂಡ ಪರಿಸ್ಥಿತಿ

ಸೆಕ್ಟರ್ 60, 62, 84 ಮತ್ತು ಫೇಸ್-2 ಪ್ರದೇಶಗಳಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತು. ಕಿಡಿಗೇಡಿಗಳು ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಲ್ಲದೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಅಶ್ರುವಾಯು ಪ್ರಯೋಗಿಸಬೇಕಾಯಿತು.

"ಕಾರ್ಮಿಕರು ಶಾಂತಿಯುತವಾಗಿ ಚದುರಿದ ನಂತರ, ನೆರೆಯ ಜಿಲ್ಲೆಗಳಿಂದ ಬಂದ ಹೊರಗಿನ ಗುಂಪೊಂದು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ. ಅಂತಹ ಕೆಲವರನ್ನು ನಾವು ಈಗಾಗಲೇ ವಶಕ್ಕೆ ಪಡೆದಿದ್ದೇವೆ," ಎಂದು ಗೌತಮ್ ಬುದ್ಧ ನಗರ ಪೊಲೀಸ್ ಕಮಿಷನರ್ ಲಕ್ಷ್ಮಿ ಸಿಂಗ್ ತಿಳಿಸಿದ್ದಾರೆ.

ಸರ್ಕಾರದ ಭರವಸೆ

ಕಾರ್ಮಿಕರು ಯಾವುದೇ ಪ್ರಚೋದನೆ ಅಥವಾ ತಪ್ಪು ಮಾಹಿತಿಗೆ ಬಲಿಯಾಗಬಾರದು ಎಂದು ಸಚಿವರು ಮನವಿ ಮಾಡಿದ್ದಾರೆ. "ಕಾರ್ಮಿಕರ ಐದು ಬೇಡಿಕೆಗಳಲ್ಲಿ ನಾಲ್ಕನ್ನು ಈಗಾಗಲೇ ಅಂಗೀಕರಿಸಲಾಗಿದೆ. ಉಳಿದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಸರ್ಕಾರವು ಕಾರ್ಮಿಕರ ಹಿತರಕ್ಷಣೆಗೆ ಬದ್ಧವಾಗಿದೆ," ಎಂದು ಅನಿಲ್ ರಾಜ್‌ಭರ್ ಭರವಸೆ ನೀಡಿದ್ದಾರೆ.

Read More
Next Story