
Noida Violence| ನೋಯ್ಡಾದಲ್ಲಿ ಭಾರೀ ಹಿಂಸಾಚಾರ: ಕಾರ್ಮಿಕರ ಕೋಪಕ್ಕೆ ವಾಹನಗಳು ಧ್ವಂಸ, ಕಲ್ಲುತೂರಾಟ
ಉತ್ತರ ಪ್ರದೇಶದ ನೋಯ್ಡಾದಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಕಲ್ಲುತೂರಾಟ, ಅಶ್ರುವಾಯು ಪ್ರಯೋಗ ಹಾಗೂ ಜಿಲ್ಲಾಧಿಕಾರಿಗಳು ಘೋಷಿಸಿದ ಹೊಸ ಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ.
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಪ್ರದೇಶದ ನೋಯ್ಡಾ ಫೇಸ್ 2ರಲ್ಲಿ ಕಾರ್ಮಿಕರು ನಡೆಸಿದ ಪ್ರತಿಭಟನೆ ಭಾರಿ ಹಿಂಸಾಚಾರಕ್ಕೆ ತಿರುಗಿದೆ. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ.
ಪೊಲೀಸರಿಂದ ಲಘು ಲಾಠಿ ಪ್ರಹಾರ
ಕಾರ್ಮಿಕ ಸಂಘಟನೆಗಳು ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಹಿಂಸೆ ಸ್ಫೋಟಗೊಂಡಿದ್ದು, ಪ್ರತಿಭಟನಾಕಾರರು ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆಗಳು, ಗುಂಪನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದವು. ಪ್ರಸ್ತುತ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
*जिलाधिकारी की श्रमिकों से अपील*
— DM NOIDA Gautam Buddha Nagar (@dmgbnagar) April 12, 2026
सभी श्रमिक भाई एवं बहन शांतिपूर्वक कार्यस्थल पर पहुंचकर कार्य करें तथा जिले में सौहार्द व कानून-व्यवस्था बनाए रखने में करें सहयोग। अफवाहों पर ध्यान न दें। श्रमिकों सहायता हेतु कंट्रोल रूम नम्बर: 120-2978231,120-2978232,120-2978862,120-2978702 pic.twitter.com/VVphIVaNpl
ಕಾರ್ಮಿಕರ ಪ್ರಮುಖ ಬೇಡಿಕೆಗಳೇನು?
ಪ್ರತಿಭಟನಾಕಾರರು ಕೇವಲ ವೇತನ ಹೆಚ್ಚಳಕ್ಕೆ ಮಾತ್ರವಲ್ಲದೆ, ಕೆಲಸದ ಅವಧಿಯ ಸುರಕ್ಷತೆ ಮತ್ತು ಸೌಲಭ್ಯಗಳಿಗಾಗಿಯೂ ಪಟ್ಟು ಹಿಡಿದಿದ್ದಾರೆ:
• ಬಾಕಿ ಇರುವ ಬೋನಸ್ ಪಾವತಿ ಮತ್ತು ಸಕಾಲಕ್ಕೆ ವೇತನ ಬಿಡುಗಡೆ.
• ವಾರಕ್ಕೊಂದು ದಿನ ಕಡ್ಡಾಯ ರಜೆ ಮತ್ತು ಹೆಚ್ಚುವರಿ ಕೆಲಸಕ್ಕೆ ಡಬಲ್ ವೇತನ.
• ಲೈಂಗಿಕ ಕಿರುಕುಳ ತಡೆ ಸಮಿತಿ ಮತ್ತು ಕುಂದುಕೊರತೆ ನಿವಾರಣಾ ಕೋಶದ ಸ್ಥಾಪನೆ.
• ಪ್ರತಿ ತಿಂಗಳು ಅಧಿಕೃತ ವೇತನ ಚೀಟಿ ನೀಡುವುದು.
ಜಿಲ್ಲಾಧಿಕಾರಿಗಳ ಭರವಸೆ ಮತ್ತು ಕ್ರಮಗಳು
ಹಿಂಸಾಚಾರದ ಹಿನ್ನೆಲೆಯಲ್ಲಿ ನೋಯ್ಡಾ ಜಿಲ್ಲಾಧಿಕಾರಿಗಳು ತುರ್ತು ಸಭೆ ನಡೆಸಿ ಕೈಗಾರಿಕಾ ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಲ್ಲದೆ, ಕಾರ್ಮಿಕರ ಹಿತದೃಷ್ಟಿಯಿಂದ ಪ್ರಮುಖ ಕ್ರಮಗಳನ್ನು ಘೋಷಿಸಿದ್ದಾರೆ. ಈ ಹೊಸ ನಿಯಮಗಳ ಪ್ರಕಾರ, ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಕಾರ್ಮಿಕರ ಬ್ಯಾಂಕ್ ಖಾತೆಗೆ ವೇತನ ಜಮೆಯಾಗಲಿದೆ ಹಾಗೂ ನವೆಂಬರ್ 30ರ ಒಳಗಾಗಿ ಬಾಕಿ ಇರುವ ಎಲ್ಲಾ ಬೋನಸ್ ಪಾವತಿಸಲು ಗಡುವು ನೀಡಲಾಗಿದೆ. ಕೆಲಸದ ಸ್ಥಳದಲ್ಲಿ ಸುರಕ್ಷತೆ ಕಾಪಾಡಲು ಎಲ್ಲಾ ಸಂಸ್ಥೆಗಳಲ್ಲಿ ಮಹಿಳೆಯರ ನೇತೃತ್ವದಲ್ಲೇ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚಿಸುವುದು ಕಡ್ಡಾಯವಾಗಿದೆ. ಕಾರ್ಮಿಕರ ದೂರುಗಳನ್ನು ಆಲಿಸಲು ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ನೆರವಿಗಾಗಿ 120-2978231 ಅಥವಾ 120-2978232 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಪೊಲೀಸರ ಮನವಿ
ಗೌತಮ್ ಬುದ್ಧ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಮಿಕರಲ್ಲಿ ವಿನಂತಿಸಿದ್ದಾರೆ. ಹಿಂಸಾಚಾರದಲ್ಲಿ ತೊಡಗಿರುವವರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

