
ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮನೆಯ ಮೇಲೆ ಬಾಂಬ್ ದಾಳಿ, ಇಬ್ಬರು ಮುಗ್ಧ ಮಕ್ಕಳ ದಾರುಣ ಸಾವು
ಬಿಷ್ಣುಪುರ ಜಿಲ್ಲೆಯ ಮೋಯಿರಾಂಗ್ ಟ್ರೊಂಗ್ಲಾವೊಬಿ ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಶಂಕಿತ ಉಗ್ರರು ಏಕಾಏಕಿ ಮನೆಯೊಂದರ ಮೇಲೆ ಸ್ಫೋಟಕಗಳನ್ನು ಎಸೆದಿದ್ದಾರೆ.
ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದ ಕೆನ್ನಾಲಿಗೆ ಇನ್ನೂ ತಣ್ಣಗಾಗಿಲ್ಲ. ಬಿಷ್ಣುಪುರ ಜಿಲ್ಲೆಯಲ್ಲಿ ಶಂಕಿತ ಉಗ್ರರು ಮಧ್ಯರಾತ್ರಿ ಮನೆಯೊಂದರ ಮೇಲೆ ನಡೆಸಿದ ಭೀಕರ ಬಾಂಬ್ ದಾಳಿಗೆ ಇಬ್ಬರು ಮುಗ್ಧ ಮಕ್ಕಳು ಬಲಿಯಾಗಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಅಮಾನವೀಯ ಘಟನೆ ವರದಿಯಾಗಿದೆ. ಘಟನೆ ಖಂಡಿಸಿ ಸ್ಥಳೀಯರು ರೊಚ್ಚಿಗೆದ್ದಿದ್ದು, ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಷ್ಣುಪುರ ಜಿಲ್ಲೆಯ ಮೋಯಿರಾಂಗ್ ಟ್ರೊಂಗ್ಲಾವೊಬಿ ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಶಂಕಿತ ಉಗ್ರರು ಏಕಾಏಕಿ ಮನೆಯೊಂದರ ಮೇಲೆ ಸ್ಫೋಟಕಗಳನ್ನು ಎಸೆದಿದ್ದಾರೆ. ಪರಿಣಾಮ, ಗಾಢ ನಿದ್ರೆಯಲ್ಲಿದ್ದ 5 ವರ್ಷದ ಬಾಲಕ ಹಾಗೂ ಕೇವಲ ಆರು ತಿಂಗಳ ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟಿವೆ. ಗಂಭೀರವಾಗಿ ಗಾಯಗೊಂಡಿರುವ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಂಗಳವಾರ ಇದೇ ಪ್ರದೇಶದ ಸಮೀಪ ಮತ್ತೊಂದು ಸ್ಫೋಟಕ ಸಾಧನವನ್ನು ಭದ್ರತಾ ಪಡೆಗಳು ಪತ್ತೆಹಚ್ಚಿ ವಶಪಡಿಸಿಕೊಂಡಿವೆ.
ಭುಗಿಲೆದ್ದ ಆಕ್ರೋಶ; ವಾಹನಗಳಿಗೆ ಬೆಂಕಿ, ಪೊಲೀಸ್ ಚೌಕಿ ಧ್ವಂಸ
ಮುಗ್ಧ ಮಕ್ಕಳ ಸಾವಿನಿಂದ ರೊಚ್ಚಿಗೆದ್ದ ಸ್ಥಳೀಯರು ಮಂಗಳವಾರ ಬೆಳಿಗ್ಗೆಯಿಂದಲೇ ಬೃಹತ್ ಪ್ರತಿಭಟನೆಗೆ ಇಳಿದಿದ್ದಾರೆ. ಆಕ್ರೋಶಗೊಂಡ ಗುಂಪು ಪೆಟ್ರೋಲ್ ಬಂಕ್ ಬಳಿಯಿದ್ದ ಒಂದು ಟ್ರಕ್ ಹಾಗೂ ಎರಡು ತೈಲ ಟ್ಯಾಂಕರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಮೋಯಿರಾಂಗ್ ಪೊಲೀಸ್ ಠಾಣೆಯ ಮುಂದೆ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಡಳಿತದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಸಮೀಪದ ಪೊಲೀಸ್ ಚೌಕಿಯೊಂದನ್ನು ಧ್ವಂಸಗೊಳಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಹತೋಟಿಗೆ ತರಲು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಶಾಸಕರಿಂದ ತೀವ್ರ ಖಂಡನೆ
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸ್ಥಳೀಯ ಎನ್‌ಪಿಪಿ (NPP) ಶಾಸಕ ಥಾ. ಶಾಂತಿ ಸಿಂಗ್, "ಇದು ಕುಕಿ ಭಯೋತ್ಪಾದಕರು ನಡೆಸಿದ ಅತ್ಯಂತ ಕ್ರೂರ ಹಾಗೂ ಅಮಾನವೀಯ ಕೃತ್ಯ. ಇಂತಹ ರಾಕ್ಷಸೀಯ ಕೃತ್ಯಗಳಿಗೆ ನಮ್ಮ ಸಮಾಜದಲ್ಲಿ ಜಾಗವಿಲ್ಲ," ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಂಘರ್ಷದ ಕೇಂದ್ರಬಿಂದು: 260ಕ್ಕೂ ಹೆಚ್ಚು ಬಲಿ
ಬಾಂಬ್ ದಾಳಿ ನಡೆದ ಮೋಯಿರಾಂಗ್ ಟ್ರೊಂಗ್ಲಾವೊಬಿ ಪ್ರದೇಶವು ಚುರಾಚಂದ್‌ಪುರದ ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿದೆ. 2023ರ ಮೇ ತಿಂಗಳಿನಿಂದ ಮೈತೇಯಿ (Meitei) ಮತ್ತು ಕುಕಿ (Kuki) ಸಮುದಾಯಗಳ ನಡುವೆ ಭುಗಿಲೆದ್ದಿರುವ ಜನಾಂಗೀಯ ಹಿಂಸಾಚಾರದಲ್ಲಿ ಈ ಭಾಗವು ಅತಿ ಹೆಚ್ಚು ಗುಂಡಿನ ಚಕಮಕಿಗೆ ಸಾಕ್ಷಿಯಾಗಿದೆ. ಈ ಸುದೀರ್ಘ ಹಿಂಸಾಚಾರದಲ್ಲಿ ಇದುವರೆಗೆ 260ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಮಂದಿ ತಮ್ಮ ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

