
ಅಜಿತ್ ಪವಾರ್ ಉತ್ತರಾಧಿಕಾರಿ ಯಾರು? ಸುನೇತ್ರಾ ಪವಾರ್ ಅಥವಾ ಪ್ರಫುಲ್ ಪಟೇಲ್?
ಅಜಿತ್ ಪವಾರ್ ನಿಧನದ ನಂತರ NCP ನಾಯಕತ್ವಕ್ಕಾಗಿ ತೀವ್ರ ಕುತೂಹಲ ಮೂಡಿದೆ. ಸುನೇತ್ರಾ ಪವಾರ್ ಮತ್ತು ಪ್ರಫುಲ್ ಪಟೇಲ್ ನಡುವೆ ಯಾರು ಸಾರಥ್ಯ ವಹಿಸುತ್ತಾರೆಯೇ? ಇಲ್ಲಿದೆ ಸಂಪೂರ್ಣ ವಿವರ.
ಭೀಕರ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಧಿವಶರಾದ ಬೆನ್ನಲ್ಲೇ ಅವರ ಎನ್‌ಸಿಪಿ (NCP) ಪಕ್ಷದ ಮುಂದಿನ ಸಾರಥಿ ಯಾರು ಎಂಬ ಬಗ್ಗೆ ಭಾರೀ ಚರ್ಚೆಗಳು ಭುಗಿಲೆದ್ದಿವೆ. ಅಜಿತ್ ಅಗಲಿಕೆ ನಂತರ ಪಕ್ಷವು ಗಂಭೀರವಾದ ನಾಯಕತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಕ್ಷದ ಸಾರಥ್ಯವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದು ಈಗ ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.
ಸುನೇತ್ರಾ ಪವಾರ್ ಅವರ ಪರ ಹಲವರ ಒಲವು
ಪ್ರಸ್ತುತ ಪಕ್ಷದ ಒಳಗೆ ಕೇಳಿಬರುತ್ತಿರುವ ಮೊದಲ ಹೆಸರು ಅಜಿತ್ ಪವಾರ್ ಅವರ ಪತ್ನಿ ಮತ್ತು ರಾಜ್ಯಸಭಾ ಸಂಸದರಾದ ಸುನೇತ್ರಾ ಪವಾರ್. ಪಕ್ಷದ ಕಾರ್ಯಕರ್ತರು ಮತ್ತು ಬಹುಪಾಲು ಶಾಸಕರು ಸುನೇತ್ರಾ ಅವರೇ ಪಕ್ಷದ ಅಧ್ಯಕ್ಷತೆ ಮತ್ತು ಶಾಸಕಾಂಗ ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಜಿತ್ ಪವಾರ್ ಅವರ ಉತ್ತರಾಧಿಕಾರಿಯಾಗಿ ಅವರ ಕುಟುಂಬದವರೇ ಇರಬೇಕು ಎಂಬುದು ಬೆಂಬಲಿಗರ ಆಶಯ. ಕೆಲವು ಮೂಲಗಳ ಪ್ರಕಾರ, ಅವರನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೂ ಪರಿಗಣಿಸುವಂತೆ ಒತ್ತಡವಿದೆ.
ಪ್ರಫುಲ್ ಪಟೇಲ್
ಒಂದು ವೇಳೆ ಕಾರಣಾಂತರಗಳಿಂದ ಸುನೇತ್ರಾ ಅವರಿಗೆ ನಾಯಕತ್ವ ನೀಡಲು ಸಾಧ್ಯವಾಗದಿದ್ದರೆ, ಪಕ್ಷದ ಎರಡನೇ ಆಯ್ಕೆ ಪ್ರಫುಲ್ ಪಟೇಲ್. ಪಟೇಲ್ ಅವರು ಕೇವಲ ಮಹಾರಾಷ್ಟ್ರಕ್ಕೆ ಸೀಮಿತವಾಗದೆ ದೆಹಲಿಯ ರಾಜಕಾರಣದಲ್ಲಿಯೂ ದೊಡ್ಡ ಪ್ರಭಾವ ಹೊಂದಿದ್ದಾರೆ. ಅವರ ಸುದೀರ್ಘ ರಾಜಕೀಯ ಜೀವನದಲ್ಲಿ 4 ಬಾರಿ ಲೋಕಸಭಾ ಸಂಸದರಾಗಿ ಮತ್ತು 6 ಬಾರಿ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿರುವ ಅಪಾರ ಅನುಭವವಿದೆ.
ಪಟೇಲ್ ಅವರ ನಾಯಕತ್ವಕ್ಕೆ ಪೂರಕವಾಗಿರುವ ಅಂಶಗಳೆಂದರೆ ಅವರಿಗೆ ದೆಹಲಿ ಜೊತೆ ಇರುವ ನಂಟು. ಯುಪಿಎ ಸರ್ಕಾರದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದ ಅವರಿಗೆ ಆಡಳಿತ ಮತ್ತು ವಿರೋಧ ಪಕ್ಷದ ಉನ್ನತ ನಾಯಕರೊಂದಿಗೆ ನೇರ ಸಂಪರ್ಕವಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಅಜಿತ್ ಪವಾರ್ ಬಣವು ಪ್ರಾಮುಖ್ಯತೆ ಉಳಿಸಿಕೊಳ್ಳಲು ಬಿಜೆಪಿಯ ಉನ್ನತ ನಾಯಕರೊಂದಿಗೆ ಪಟೇಲ್ ಹೊಂದಿರುವ ಬಾಂಧವ್ಯವೇ ಪ್ರಮುಖ ಕಾರಣ.
ಎನ್‌ಸಿಪಿ ಬಿರುಕುಗೊಂಡು ಕಾನೂನು ಸಂಘರ್ಷಗಳನ್ನು ಮತ್ತು ಚುನಾವಣಾ ಆಯೋಗದ ಮುಂದಿನ ಹೋರಾಟಗಳನ್ನು ತೆರೆಯ ಮರೆಯಲ್ಲಿ ನಿಂತು ಯಶಸ್ವಿಯಾಗಿ ನಿಭಾಯಿಸಿದ್ದು ಇದೇ ಪ್ರಫುಲ್ ಪಟೇಲ್. ಶರದ್ ಪವಾರ್ ಅವರ ನಿಕಟವರ್ತಿಯಾಗಿದ್ದ ಕಾರಣ, ಅವರ ರಾಜಕೀಯ ತಂತ್ರಗಳನ್ನು ಅರಿತಿರುವ ಏಕೈಕ ನಾಯಕ ಇವರಾಗಿದ್ದಾರೆ.
ಮಹಾರಾಷ್ಟ್ರದ ಸಂಕೀರ್ಣ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷವನ್ನು ಒಗ್ಗಟ್ಟಾಗಿ ಮುನ್ನಡೆಸಲು ಪಟೇಲ್ ಅವರ ಅನುಭವ ಮತ್ತು ಸುನೇತ್ರಾ ಪವಾರ್ ಅವರ ಭಾವನಾತ್ಮಕ ಬೆಂಬಲ ಎರಡೂ ಪಕ್ಷಕ್ಕೆ ಅಗತ್ಯವಾಗಿದೆ. ಅಂತಿಮವಾಗಿ, ಅನುಭವಕ್ಕೆ ಮನ್ನಣೆ ನೀಡುತ್ತಾರೋ ಅಥವಾ ಕುಟುಂಬದ ಪರಂಪರೆಗೆ ಪ್ರಾಮುಖ್ಯತೆ ನೀಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ಬಾರಾಮತಿಯಲ್ಲಿ ನಡೆದಿದ್ದು, ಈಗ ಎಲ್ಲರ ಕಣ್ಣು ಪವಾರ್ ಕುಟುಂಬದ ಮುಂದಿನ ನಡೆಯ ಮೇಲಿದೆ.

