Lucknow High Court| ಹೈಕೋರ್ಟ್ ಆವರಣದಲ್ಲಿ ಹೈಡ್ರಾಮಾ-ಆತ್ಮಹತ್ಯೆಗೆ ಯತ್ನಿಸಿದ ಗ್ಯಾಂಗ್ ರೇಪ್ ಸಂತ್ರಸ್ತೆ!
x
ಆತ್ಮಹತ್ಯೆಗೆ ಯತ್ನಿಸಿದ ಲಕ್ನೋ ಮಹಿಳೆ

Lucknow High Court| ಹೈಕೋರ್ಟ್ ಆವರಣದಲ್ಲಿ ಹೈಡ್ರಾಮಾ-ಆತ್ಮಹತ್ಯೆಗೆ ಯತ್ನಿಸಿದ ಗ್ಯಾಂಗ್ ರೇಪ್ ಸಂತ್ರಸ್ತೆ!

ನ್ಯಾಯಕ್ಕಾಗಿ ಆಗ್ರಹಿಸಿ ಮಹಿಳೆ ಲಕ್ನೋ ಹೈಕೋರ್ಟ್ ಛಾವಣಿ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದರು. ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಮತಾಂತರ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.


ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಆವರಣದಲ್ಲಿ ಏಪ್ರಿಲ್ 10ರಂದು ಅತ್ಯಂತ ನಾಟಕೀಯ ಘಟನೆಯೊಂದು ಜರುಗಿದೆ. ನ್ಯಾಯಕ್ಕಾಗಿ ಆಗ್ರಹಿಸಿ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಕಟ್ಟಡದ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗಂಭೀರ ಆರೋಪಗಳ ಸುರಿಮಳೆ

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನಿವಾಸಿಯಾದ ಈ ಮಹಿಳೆ, ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಮತ್ತು ಬಲವಂತದ ಮತಾಂತರ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮದುವೆಯ ಆಮಿಷವೊಡ್ಡಿ ತನ್ನನ್ನು ಅಪಹರಿಸಿ, ಹಲವರು ಸೇರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ಬಲವಂತವಾಗಿ ಮತಾಂತರ ಮಾಡಿ ಮದುವೆಯಾಗುವಂತೆ ಒತ್ತಡ ಹೇರಲಾಗಿತ್ತು ಎಂದು ಅವರು ದೂರಿದ್ದಾರೆ.

ಮಗುವಿನ ಜೀವಕ್ಕೆ ಬೆದರಿಕೆ

ಸಂತ್ರಸ್ತ ಮಹಿಳೆಯ ಹೇಳಿಕೆಯ ಪ್ರಕಾರ, ಆಕೆಗೆ ಒಂದು ಮಗುವಿದ್ದು, ಆರೋಪಿಗಳು ಮಗುವಿನ ಜವಾಬ್ದಾರಿ ಹೊರಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಪ್ರಕರಣದ ಬಗ್ಗೆ ದೂರು ನೀಡಿದರೆ ಮಗುವನ್ನು ಎತ್ತರದ ಪ್ರದೇಶದಿಂದ ಕೆಳಕ್ಕೆ ಎಸೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಗ್ರಾಮದ ಮುಖಂಡ ಸೇರಿದಂತೆ ಹಲವು ಪ್ರಭಾವಿಗಳು ಆರೋಪಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ದೂರನ್ನು ಹಿಂಪಡೆಯುವಂತೆ ತನ್ನ ಮೇಲೆ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

ಹೈಕೋರ್ಟ್‌ನಲ್ಲಿ ನಡೆದಿದ್ದೇನು?

ನ್ಯಾಯ ಸಿಗದಿದ್ದಕ್ಕೆ ಬೇಸತ್ತ ಮಹಿಳೆ ಬುಧವಾರ ಹೈಕೋರ್ಟ್ ಆವರಣಕ್ಕೆ ಆಗಮಿಸಿ, ಕಟ್ಟಡದ ಛಾವಣಿಯ ಮೇಲೆ ಏರಿದ್ದರು. ಅಲ್ಲಿಂದ ಜಿಗಿಯುವುದಾಗಿ ಬೆದರಿಕೆ ಹಾಕುತ್ತಾ ಜೋರಾಗಿ ಅಳತೊಡಗಿದರು. ಈ ಸಂದರ್ಭದಲ್ಲಿ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅಲ್ಲಿನ ವಕೀಲರು ಮತ್ತು ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಮಹಿಳೆ ಮತ್ತು ಮಗುವನ್ನು ರಕ್ಷಿಸಿದ್ದಾರೆ.

ತನಿಖೆಗೆ ಮಹಿಳೆಯ ಆಗ್ರಹ

ತನ್ನ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಮಹಿಳೆ ಆಗ್ರಹಿಸಿದ್ದಾರೆ. ಪ್ರಸ್ತುತ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಮಹಿಳೆ ಮತ್ತು ಮಗುವಿಗೆ ಭದ್ರತೆ ಒದಗಿಸಲಾಗಿದೆ.

Read More
Next Story