Banglore Police| ಬೆಂಗಳೂರು ಪೊಲೀಸರ ಸಮಯಪ್ರಜ್ಞೆ: ನಾಪತ್ತೆಯಾಗಿದ್ದ ಬಾಲಕರ ಪತ್ತೆ, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ
x

ಎಎಸ್‌ಐ ಮಂಜುನಾಥ್ ಮತ್ತು ಹೆಚ್‌ಸಿ ನಿರಂಜನ್ ಅವರು ಬಾಲಕನನ್ನು ಸಂತೈಸಿ, ಸಮೀಪದ ಪ್ರದೇಶಗಳಲ್ಲಿ ವಿಚಾರಣೆ ನಡೆಸಿ ಪೋಷಕರನ್ನು ಪತ್ತೆಹಚ್ಚಿ ಬಾಲಕನನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.

Banglore Police| ಬೆಂಗಳೂರು ಪೊಲೀಸರ ಸಮಯಪ್ರಜ್ಞೆ: ನಾಪತ್ತೆಯಾಗಿದ್ದ ಬಾಲಕರ ಪತ್ತೆ, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ

ಸಿಲಿಕಾನ್ ಸಿಟಿ ಪೊಲೀಸರ ಕಾರ್ಯಕ್ಷಮತೆಗೆ ಸಾಕ್ಷಿಯಾದ ಮೂರು ಪ್ರತ್ಯೇಕ ಘಟನೆಗಳು ಕಳೆದ ಎರಡು ದಿನಗಳಲ್ಲಿ ವರದಿಯಾಗಿವೆ.


Click the Play button to hear this message in audio format

ಸಿಲಿಕಾನ್ ಸಿಟಿಯ ಪೊಲೀಸರು ಕಳೆದ ಎರಡು ದಿನಗಳಲ್ಲಿ ನಡೆಸಿದ ಸರಣಿ ಕಾರ್ಯಾಚರಣೆಗಳಲ್ಲಿ ಇಬ್ಬರು ಪುಟ್ಟ ಬಾಲಕರನ್ನು ಪೋಷಕರೊಂದಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರಲ್ಲದೆ, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರ ಪ್ರಾಣ ಉಳಿಸಿರುವ ಘಟನೆ ನಡೆದಿದೆ. ಸಾರ್ವಜನಿಕರ ಜಾಗೃತಿ ಮತ್ತು 'ನಮ್ಮ-112' ತುರ್ತು ಸೇವೆಯ ತ್ವರಿತ ಸ್ಪಂದನೆಯಿಂದಾಗಿ ಈ ಮೂರು ಜೀವಗಳು ಸುರಕ್ಷಿತವಾಗಿವೆ.

ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಮಾಹಿತಿ ಹಂಚಿಕೊಂಡಿದೆ. ಮೊದಲ ಘಟನೆಯಲ್ಲಿ, ಏಪ್ರಿಲ್ 6ರಂದು ರಾತ್ರಿ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಬಾಣಸವಾಡಿಯ ನ್ಯೂ ಬಾಲ್ವಿನ್ ಶಾಲೆ ಸಮೀಪ 11 ವರ್ಷದ ಬಾಲಕನೊಬ್ಬ ದಿಕ್ಕುತಪ್ಪಿ ಅಸಹಾಯಕ ಸ್ಥಿತಿಯಲ್ಲಿರುವುದನ್ನು ಸಾರ್ವಜನಿಕರು ಗಮನಿಸಿದ್ದರು. ತಕ್ಷಣವೇ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ ಕೇವಲ 10 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಹೊಯ್ಸಳ-54ರ ಎಎಸ್‌ಐ ಮಂಜುನಾಥ್ ಮತ್ತು ಹೆಚ್‌ಸಿ ನಿರಂಜನ್ ಅವರು ಬಾಲಕನನ್ನು ಸಂತೈಸಿ, ಸಮೀಪದ ಪ್ರದೇಶಗಳಲ್ಲಿ ವಿಚಾರಣೆ ನಡೆಸಿ ಪೋಷಕರನ್ನು ಪತ್ತೆಹಚ್ಚಿ ಬಾಲಕನನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.

ನ್ಯೂ ಬಾಲ್ವಿನ್ ಶಾಲೆ ಸಮೀಪ 11 ವರ್ಷದ ಬಾಲಕನೊಬ್ಬ ದಿಕ್ಕುತಪ್ಪಿ ಅಸಹಾಯಕ ಸ್ಥಿತಿಯಲ್ಲಿರುವುದನ್ನು ಸಾರ್ವಜನಿಕರು ಗಮನಿಸಿದ್ದರು.

3 ವರ್ಷದ ಕಂದಮ್ಮನ ರಕ್ಷಿಸಿದ ಹೊಯ್ಸಳ ಸಿಬ್ಬಂದಿ

ಇದೇ ರೀತಿಯ ಮತ್ತೊಂದು ಘಟನೆ ಏಪ್ರಿಲ್ 7ರಂದು ಮಧ್ಯಾಹ್ನ ಕೆ.ಆರ್.ಪುರಂ ವ್ಯಾಪ್ತಿಯ ಅಯ್ಯಪ್ಪನಗರದ ವಿಶಾಲ್ ಮಾರ್ಟ್ ಬಳಿ ನಡೆದಿದೆ. ಸುಮಾರು 3 ವರ್ಷದ ಪುಟ್ಟ ಬಾಲಕ ಒಂಟಿಯಾಗಿರುವುದನ್ನು ಕಂಡ ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ಹೊಯ್ಸಳ-219ರ ಎಎಸ್‌ಐ ನಾಗರಾಜ್ ಮತ್ತು ಪಿಸಿ ಚಂದ್ರಶೇಖರ್ ಕೇವಲ 22 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಅವರು ಬಾಲಕನ ಪೋಷಕರನ್ನು ಪತ್ತೆಹಚ್ಚಿ ಮಗುವನ್ನು ಒಪ್ಪಿಸುವ ಮೂಲಕ ಪೋಷಕರ ಆತಂಕ ದೂರ ಮಾಡಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸರು

ಮತ್ತೊಂದೆಡೆ, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಎಂ.ವಿ ಲೇಔಟ್‌ನಲ್ಲಿ 30 ವರ್ಷದ ಮಹಿಳೆಯೊಬ್ಬರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತಿಯಾದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಏಪ್ರಿಲ್ 7ರಂದು ಮುಂಜಾನೆ 5.56ಕ್ಕೆ ಈ ಕುರಿತು ಮಾಹಿತಿ ಪಡೆದ ಹೊಯ್ಸಳ-65ರ ಎಎಸ್‌ಐ ಚಂದ್ರಶೇಖರ್ ಮತ್ತು ಪಿಸಿ ರಾಮಪ್ಪ ಹೊಸಮನಿ ಅವರು 12 ನಿಮಿಷಗಳಲ್ಲೇ ಸ್ಥಳಕ್ಕೆ ಧಾವಿಸಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಮಹಿಳೆಯನ್ನು ಸ್ಥಳೀಯರ ನೆರವಿನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ದಾಖಲಿಸಿ ಸಕಾಲಕ್ಕೆ ಚಿಕಿತ್ಸೆ ಕೊಡಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಮಹಿಳೆಯೊಬ್ಬರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತಿಯಾದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಪೊಲೀಸರ ಈ ತ್ವರಿತ ಸ್ಪಂದನೆ ಮತ್ತು ಸಮುದಾಯಮುಖಿ ಕಾರ್ಯವೈಖರಿಯನ್ನು ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯಾವುದೇ ತುರ್ತು ಸಂದರ್ಭದಲ್ಲಿ 'ನಮ್ಮ-112' ಗೆ ಕರೆ ಮಾಡುವ ಮೂಲಕ ಜೀವ ಮತ್ತು ಆಸ್ತಿ ರಕ್ಷಣೆಗೆ ಕೈಜೋಡಿಸುವಂತೆ ಬೆಂಗಳೂರು ನಗರ ಪೊಲೀಸರು ಈ ಮೂಲಕ ಮನವಿ ಮಾಡಿದ್ದಾರೆ.

(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್‌: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

Read More
Next Story