ಕ್ಷಮೆ ಇಲ್ಲವೇ ಇಲ್ಲ….ನನಗಿದ್ದ ಆಸರೆ ಅವನೊಬ್ಬನೇ- ಅಪ್ರಾಪ್ತನ ಕಾರಿಗೆ ಬಲಿಯಾದ ಯುವಕನ ತಾಯಿಯ ಗೋಳಾಟ
x
ದ್ವಾರಕಾದಲ್ಲಿ ಅಪ್ರಾಪ್ತ ಚಲಾಯಿಸಿದ ಕಾರು ಡಿಕ್ಕಿಯಾಗಿ ಮೃತಪಟ್ಟ ಸಾಹಿಲ್ ಧನೇಷ್ರಾ

ಕ್ಷಮೆ ಇಲ್ಲವೇ ಇಲ್ಲ….ನನಗಿದ್ದ ಆಸರೆ ಅವನೊಬ್ಬನೇ- ಅಪ್ರಾಪ್ತನ ಕಾರಿಗೆ ಬಲಿಯಾದ ಯುವಕನ ತಾಯಿಯ ಗೋಳಾಟ

ದೆಹಲಿಯ ದ್ವಾರಕಾದಲ್ಲಿ ಅಪ್ರಾಪ್ತ ಚಲಾಯಿಸಿದ ಕಾರು ಡಿಕ್ಕಿಯಾಗಿ ಮೃತಪಟ್ಟ ಸಾಹಿಲ್ ಧನೇಷ್ರಾ ತಾಯಿಯನ್ನು ಆರೋಪಿಯ ಪೋಷಕರು ಭೇಟಿಯಾಗಿ ಕ್ಷಮೆಯಾಚಿಸಿದ್ದಾರೆ.


Click the Play button to hear this message in audio format

"ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಅವನು ನನಗಿದ್ದಒಬ್ಬನೇ ಆಸರೆ...ನನ್ನ ಮಗನ ದುರಂತ ಸಾವು ಜನರಿಗೆ ಬುದ್ಧಿ ಕಲಿಸಲಿ". ಇದು, ದೆಹಲಿಯ ದ್ವಾರಕಾದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಸಾಹಿಲ್ ಧನೇಷ್ರಾ (23) ಅವರ ತಾಯಿ ಇನ್ಮಾ ಮಾಕನ್ ಅವರ ಆಕ್ರಂದನ. ಅಪ್ರಾಪ್ತ ಬಾಲಕನೊಬ್ಬ ಚಲಾಯಿಸುತ್ತಿದ್ದ ಅತಿವೇಗದ ಎಸ್‌ಯುವಿ (SUV) ಕಾರೊಂದು ಸಾಹಿಲ್‌ ಅವರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಾಹಿಲ್‌ ಮೃತ ಪಟ್ಟಿದ್ದ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದಂತೆ ತಮ್ಮ ಒಬ್ಬನೆ ಮಗನನ್ನು ಕಳೆದುಕೊಂಡ ತಾಯಿ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೋ ಮನಕಲಕುವಂತಿದೆ.

ಏನಿದೆ ವಿಡಿಯೋದಲ್ಲಿ?

ತನ್ನ ಮಗನ ನೆನಪುಗಳಿಂದ ಕಣ್ಣೀರು ಹಾಕುತ್ತಿರುವ ಇನ್ಮಾ ಮಾಕನ್, ಈ ಘಟನೆ "ಎಲ್ಲಾ ಪೋಷಕರಿಗೆ ಒಂದು ಪಾಠವಾಗಲಿ. ಪರವಾನಗಿ ಪಡೆಯಲು ಅರ್ಹತೆ ಇಲ್ಲದ ನಿಮ್ಮ ಮಕ್ಕಳಿಗೆ ದಯವಿಟ್ಟು ವಾಹನಗಳ ಕೀ ನೀಡಬೇಡಿ. ನನ್ನ ಮಗನ ಬಲಿದಾನವಾದರೂ ಜನರಿಗೆ ಬುದ್ಧಿ ಕಲಿಸಲಿ. ಮಾಧ್ಯಮಗಳಲ್ಲಿ ಅಪಘಾತದ ಬಗ್ಗೆ ಕೇಳುವುದು ಸುಲಭ, ಆದರೆ ಅದು ನಮಗೆ ಸಂಭವಿಸಿದಾಗ ಅದರ ನೋವು ಏನು ಎಂಬುದು ತಿಳಿಯುತ್ತದೆ" ಎಂದು ಅವರು ಎಚ್ಚರಿಸಿದ್ದಾರೆ.

"ನನಗೆ ಬೇರೆ ಕುಟುಂಬವಿಲ್ಲ, ಮತ್ತೊಬ್ಬ ಮಗನಿಲ್ಲ, ಬದುಕಲು ಬೇರೆ ಕಾರಣವೂ ಇಲ್ಲ. ಎಲ್ಲವೂ ಮುಗಿದುಹೋಗಿದೆ. ಈಗ ನನ್ನ ಮುಂದಿರುವ ಏಕೈಕ ಗುರಿ ನನ್ನ ಮಗನಿಗೆ ನ್ಯಾಯ ಕೊಡಿಸುವುದು" ಎಂದು ಅವರು ಬಿಕ್ಕಳಿಸುತ್ತಾ ಕಣ್ಣಿರಿಟ್ಟಿದ್ದಾರೆ. ಸಾಹಿಲ್ ನನ್ನು ಒಬ್ಬಂಟಿಯಾಗಿ ಸಾಕಿ ಬೆಳೆಸಿದ್ದೆ. ಮಗನ ವಿದ್ಯಾಭ್ಯಾಸಕ್ಕಾಗಿ ಹಗಲಿರುಳು ಶ್ರಮಿಸಿದ್ದೆ. ಆದರೀಗ, ಆತನ ಮಗನ ಚಿತಾಭಸ್ಮವನ್ನು ತಾವೇ ವಿಸರ್ಜಿಸಿದ ಆ ಕ್ಷಣವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಕಮರಿದ ಸುಂದರ ಕನಸು

ನಾನು ವಿಮಾನ ಖರೀದಿಸುತ್ತೆನೆ" ಎಂಬ ಪೋಸ್ಟರ್ ಸಾಹೀಲ್‌ ಅವರ ಕೋಣೆಯಲ್ಲಿತ್ತು. "2025 ನನ್ನ ವರ್ಷವಾಗಲಿದೆ. 1 ಮಿಲಿಯನ್ ಡಾಲರ್ (ಸುಮಾರು 8 ಕೋಟಿ ರೂ.) ಗಳಿಸುವುದು ನನ್ನ ಗುರಿ" ಎಂದು ಅವರು ಸೀಲಿಂಗ್ ಮೇಲೆ ಬರೆದುಕೊಂಡಿದ್ದರು. ಅವರ ಐಪ್ಯಾಡ್ ವಾಲ್‌ಪೇಪರ್‌ನಲ್ಲಿ ದೊಡ್ಡ ಬಂಗಲೆ ಮತ್ತು ಸೂಪರ್ ಕಾರ್ ಚಿತ್ರವಿತ್ತು. "ಅಮ್ಮ, ನಾವು ಇಂತಹ ಮನೆಯಲ್ಲಿ ವಾಸಿಸೋಣ" ಎಂದು ಅವರು ತಾಯಿಗೆ ಆಗಾಗ ಹೇಳುತ್ತಿದ್ದರಂತೆ. ಆದರೆ ಆ ಎಲ್ಲಾ ಕನಸುಗಳು ರಸ್ತೆಯ ಮೇಲೆ ರಕ್ತಸಿಕ್ತವಾಗಿ ಅಂತ್ಯಗೊಂಡಿವೆ.

"ಇದು ನನ್ನ ಮಗನ ತಪ್ಪು, ನಾನು ಕ್ಷಮೆಯಾಚಿಸುತ್ತೇನೆ"

ದೆಹಲಿಯ ದ್ವಾರಕಾದಲ್ಲಿ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಎಸ್‌ಯುವಿ (SUV) ಡಿಕ್ಕಿಯಾಗಿ 23 ವರ್ಷದ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯ ತಂದೆ ಮಾಧ್ಯಮಗಳ ಮುಂದೆ ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ

"ಇದು ನನ್ನ ಮಗನ ತಪ್ಪು, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಕಾನೂನು ಪ್ರಕ್ರಿಯೆ ಏನೇ ಇದ್ದರೂ ನಾನು ಅದನ್ನು ಪಾಲಿಸುತ್ತೇನೆ. ನನಗೆ ಈ ಬಗ್ಗೆ ಏನೇ ಮಾಹಿತಿ ಸಿಕ್ಕಿದ್ದರೂ ಅದು ಪೊಲೀಸರಿಂದಲೇ ಸಿಕ್ಕಿದೆ. ಅಪಘಾತದ ಸಮಯದಲ್ಲಿ ಕಾರಿನಲ್ಲಿ ನನ್ನ ಮಗ ಮತ್ತು ಮಗಳು ಇದ್ದರು. ನಾನು ವಾಣಿಜ್ಯ ವಾಹನಗಳ ಉದ್ಯಮವನ್ನು ನಡೆಸುತ್ತಿದ್ದೇನೆ. ಅಪಘಾತವಾದ ವಾಹನವನ್ನು ನಮ್ಮ ಉದ್ಯಮಕ್ಕೆ ಬಳಸಲಾಗುತ್ತದೆ. ಆ ವಾಹನದ ಮೇಲಿರುವ ಹಳೆಯ ಚಲನ್‌ಗಳು (Challans) ನಮ್ಮ ಚಾಲಕರಿಂದ ಆಗಿರುವಂಥವು, ನನ್ನ ಮಗನಿಂದ ಅಲ್ಲ. ಇದೊಂದು ಅತ್ಯಂತ ಹೃದಯವಿದ್ರಾವಕ ಘಟನೆ. ನನ್ನ ಮಗ ತುಂಬಾ ಅಸ್ವಸ್ಥನಾಗಿದ್ದಾನೆ (Disturbed). ಆ ಕುಟುಂಬದ ಬಗ್ಗೆ ನಮಗೂ ಅತೀವ ದುಃಖವಿದೆ, ನಮ್ಮ ಕುಟುಂಬವೂ ಶೋಕದಲ್ಲಿದೆ.

ನಾವು ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಪೊಲೀಸರು ಕೇಳಿದ ಎಲ್ಲಾ ದಾಖಲೆಗಳನ್ನು ನಾವು ಒದಗಿಸಿದ್ದೇವೆ. ನನ್ನ ಮಗಳು ವಿಡಿಯೋ (ರೀಲ್‌) ಮಾಡುತ್ತಿದ್ದ ಬಗ್ಗೆ ನನಗೆ ತಿಳಿದಿರಲಿಲ್ಲ. ಅದು ರೀಲ್‌ ಆಗಿರಲಿಲ್ಲ, ಬದಲಿಗೆ ಒಂದು ಸಣ್ಣ ವಿಡಿಯೋ ಆಗಿತ್ತು ಅಷ್ಟೆ ಎಂದಿದ್ದಾರೆ. ಆದರೆ ಈ ಬಗ್ಗೆ ಸಾಹಿಲ್‌ ತಾಯಿ ಪ್ರತಿಕ್ರಿಯಿಸಿದ್ದು, "ಆರೋಪಿಯ ತಂದೆ ಯಾವುದಕ್ಕಾಗಿ ಕ್ಷಮೆ ಕೇಳುತ್ತಿದ್ದಾರೆ? ನನ್ನ ಜೀವನವನ್ನೇ ಅಂತ್ಯಗೊಳಿಸಿದ್ದಕ್ಕಾ? ನಾನು ಮಾಧ್ಯಮಗಳ ಮುಂದೆ ಬಂದು ಮಾತನಾಡಿದ ನಂತರ ಅವರಿಗೆ ಈಗ ಕ್ಷಮೆ ಕೇಳುವ ನೆನಪಾಯಿತೇ? ಅವರ ಕ್ಷಮಾಪಣೆಯನ್ನು ಸ್ವೀಕರಿಸದೇ ಇರುವುದಕ್ಕಾಗಿ ನಾನು 'ಸಾರಿ' ಎಂದು ಹೇಳುತ್ತೇನೆ!" ಎಂದು ಅಳಲು ತೋಡಿಕೊಂಡಿದ್ದಾರೆ.

ಏನಿದು ಘಟನೆ?

ಫೆಬ್ರವರಿ 3 ರಂದು ದ್ವಾರಕಾದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜ್ ಬಳಿ ಈ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಬಂದ ಎಸ್‌ಯುವಿ ಕಾರು ಸಾಹಿಲ್ ಅವರ ಬೈಕ್‌ಗೆ ಮತ್ತು ನಂತರ ಟ್ಯಾಕ್ಸಿಯೊಂದಕ್ಕೆ ಡಿಕ್ಕಿ ಹೊಡೆದಿತ್ತು. ಅತಿವೇಗದ ಚಾಲನೆಗೆ ಈ ಕಾರಿನ ಮೇಲೆ 9 ಬಾರಿ ದಂಡ ವಿಧಿಸಲಾಗಿತ್ತು. ಅಪಘಾತದ ನಂತರ 16 ವರ್ಷದ ಬಾಲಕ ತನಗೆ 19 ವರ್ಷ ಎಂದು ಪೊಲೀಸರಿಗೆ ಸುಳ್ಳು ಹೇಳಿದ್ದ. ಆದರೆ ಆತನ ಜನ್ಮ ದಾಖಲೆಗಳ ಪ್ರಕಾರ ಆತ 2009ರಲ್ಲಿ ಜನಿಸಿದ್ದಾನೆ. ಪ್ರಸ್ತುತ, ಬಾಲಕನಿಗೆ 10ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಲು ಮಾ.7ರವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ.

"ನನ್ನ ಮಗನ ದೇಹವನ್ನು ನೀಡುವಂತೆ ನಾನು ನಾಲ್ಕು ಗಂಟೆಗಳ ಕಾಲ ಪೊಲೀಸರನ್ನು ಬೇಡಿಕೊಂಡೆ. ಆದರೆ ಅವರು ಫಾರ್ಮಾಲಿಟಿ ಪೂರೈಸುವುದರಲ್ಲಿ ಬ್ಯುಸಿಯಾಗಿದ್ದರು. ಸ್ಥಳದಲ್ಲಿ ಆಂಬ್ಯುಲೆನ್ಸ್ ನಿಂತಿದ್ದರೂ, ಮಗನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲು ಪೊಲೀಸರು ಅಥವಾ ಸಿಬ್ಬಂದಿ ಸಹಕರಿಸಲಿಲ್ಲ. ತಕ್ಷಣದ ವೈದ್ಯಕೀಯ ನೆರವು ಸಿಕ್ಕಿದ್ದರೆ ಮಗ ಬದುಕುತ್ತಿದ್ದನೇನೋ. ಪ್ರಾರಂಭದಲ್ಲಿ ಪೊಲೀಸರು ನನ್ನ ಮಗನೆ ತಪ್ಪು ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದ ಎಂದು ವಾದಿಸುತ್ತಿದ್ದರು. ಬಳಿಕ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿ, ಈಗ ಕಾರು ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕನ ತಪ್ಪು ಒಪ್ಪಿಕೊಂಡಿದ್ದಾರೆ. ಈಗಲಾದರೂ ಸರಕಾರ ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಬೇಕು" ಎಂದು ಎನ್ಮಾ ಕಣ್ಣಿರಿಟ್ಟಿದ್ದಾರೆ.

Read More
Next Story