
ಹೊಸಕೋಟೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಂಪೂರ್ಣ ಜಖಂಗೊಂಡಿರುವ ಕಾರು
Social Media Craze| ರೀಲ್ಸ್, ವಿಡಿಯೋ, ಜಾಲಿರೈಡ್! ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವ ಬಾಲಕರು!
ರಾಷ್ಟ್ರೀಯ ರಸ್ತೆ ಸುರಕ್ಷತಾ ವರದಿಯ ಪ್ರಕಾರ, ಅಪ್ರಾಪ್ತರು ಮಾಡುವ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆಯಲ್ಲಿ ಕರ್ನಾಟಕವು ಮೊದಲ ಐದು ರಾಜ್ಯಗಳ ಪಟ್ಟಿಯಲ್ಲಿದೆ.
ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರ ವಾಹನ ಚಾಲನೆ (Underage Driving) ಪ್ರಕರಣಗಳು ಕೇವಲ ನಿಯಮ ಉಲ್ಲಂಘನೆಯಾಗಿ ಉಳಿಯದೆ, ರಕ್ತಸಿಕ್ತ ಅಪಘಾತಗಳಿಗೆ ದಾರಿಯಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮತ್ತು 'ವೀಲಿಂಗ್', 'ಸ್ಟಂಟ್' ಮಾಡುವುದು ಮತ್ತು ಜಾಲಿರೈಡ್ ಕಾರಣಗಳು ಹದಿಹರೆಯದವರ ಅಕ್ರಮ ಹಾಗೂ ಅತಿವೇಗದ ವಾಹನ ಚಾಲನೆಗೆ ಇಂಬಾಗಿವೆ. ಹೀಗಾಗಿ ಅನೇಕ ಘಟನೆಗಳಲ್ಲಿ ಬಾಲಕರೇ ಅಪಘಾತಗಳಿಗೆ ಬಲಿಯಾಗುವ ಸ್ಥಿತಿಗೆ ಬರುವಂತಾಗಿದೆ!
ಇದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಬೆಂಗಳೂರು ನಗರಿಯಲ್ಲಿಒಂದೇ ದಿನ ಅಂದರೆ ಕಳೆದ ಗುರುವಾರ (ಫೆ.12) ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ವಾಹನ ಚಾಲನೆ ಸಂಬಂಧ 1,800 ಶಾಲಾ ಮಕ್ಕಳ ಪೋಷಕರಿಗೆ ಪೊಲೀಸರು ಎಚ್ಚರಿಕೆ ನೋಟಿಸ್ ನೀಡಿದ್ದಾರೆ. ಈ ಪ್ರಕರಣಗಳಲ್ಲಿ ಕಳೆದ 45 ದಿನಗಳ ಅಂತರದಲ್ಲಿ 66 ಸಾವಿರ ರೂ. ದಂಡ ಸಂಗ್ರಹಿಸಿದ್ದರು.
ಇತ್ತೀಚೆಗೆ ಹೊಸಕೋಟೆ ಬಳಿ ಸಂಭವಿಸಿದ ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದರು. ಇದರಲ್ಲಿ 6 ಮಂದಿ ಅಪ್ರಾಪ್ತರೇ ಇರುವುದು ದುರಂತ. ಈ ದುರಂತಕ್ಕೆ ಕಾರಣನಾಗಿದ್ದ ಹಾಗೂ ಕಾರನ್ನು ಅತಿವೇಗದಿಂದ ಚಲಾಯಿಸುತ್ತಿದ್ದ ವಿದ್ಯಾರ್ಥಿಗೆ ಇನ್ನೂ 18 ವರ್ಷ ತುಂಬಿರಲಿಲ್ಲ. ಹೊಸಕೋಟೆ ಬಿರಿಯಾನಿ ತಿನ್ನಲು ತೆರಳಿ ದೇವನಹಳ್ಳಿ ಕಡೆ ಜಾಲಿರೈಡ್ ಮಾಡುತ್ತಿದ್ದ ವೇಳೆ ಘಟನೆ ನಡೆದಿತ್ತು. ಇಂತಹ ಜಾಲಿ ರೈಡ್‌ನಲ್ಲಿ ಕಾರು ಇಲ್ಲವೆ ಬೈಕ್ ಚಲಾಯಿಸುವ ಹುಮ್ಮಸ್ಸಿನಿಂದಾಗಿ ಅನೇಕ ಅಪ್ರಾಪ್ತರು ರಸ್ತೆ ಅಪಘಾತಗಳಿಗೆ ಬಲಿಯಾಗಿರುವ ಪ್ರಕರಣಗಳು ನೂರಾರಿವೆ.
ದೇಶದಲ್ಲಿ ರಾಜ್ಯಕ್ಕೆ ಐದನೇ ಸ್ಥಾನದ ಕುಖ್ಯಾತಿ
2025ರಲ್ಲಿ ರಾಜ್ಯದಲ್ಲಿ ಅತಿವೇಗ ಮತ್ತು ಅಜಾಗರೂಕ ಚಾಲನೆಗಾಗಿ ಸುಮಾರು 6,872 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದರಲ್ಲಿ ಅಪ್ರಾಪ್ತರ ಪಾಲೂ ದೊಡ್ಡದಿದೆ. ರಾಷ್ಟ್ರೀಯ ರಸ್ತೆ ಸುರಕ್ಷತಾ ವರದಿಯ ಪ್ರಕಾರ, ಅಪ್ರಾಪ್ತರು ಮಾಡುವ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆಯಲ್ಲಿ ಕರ್ನಾಟಕವು ಮೊದಲ ಐದು ರಾಜ್ಯಗಳ ಪಟ್ಟಿಯಲ್ಲಿದೆ.
ವಿಶೇಷವಾಗಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡದಂತಹ ನಗರಗಳಲ್ಲಿ ಅಪ್ರಾಪ್ತ ಚಾಲಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಬೆಂಗಳೂರಿನ ಕನಕಪುರ ರಸ್ತೆ, ತುಮಕೂರು ರಸ್ತೆ ಮತ್ತು ಏರ್‌ಪೋರ್ಟ್ ರಸ್ತೆಗಳಲ್ಲಿ 'ವೀಲಿಂಗ್' ಮಾಡುವಾಗ ಕೆಳಗೆ ಬಿದ್ದು ಕಳೆದ ವರ್ಷ ಸುಮಾರು 12ಕ್ಕೂ ಹೆಚ್ಚು ಅಪ್ರಾಪ್ತರು ಮೃತಪಟ್ಟಿದ್ದರು.
2024ರಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಹೋಲಿಸಿದರೆ, 2025ರಲ್ಲಿ ಪ್ರಕರಣಗಳ ಸಂಖ್ಯೆ ಶೇ. 110ರಷ್ಟು ಹೆಚ್ಚಾಗಿದೆ. ಅಪ್ರಾಪ್ತರ ವಾಹನ ಚಾಲನೆ ಸಂಬಂಧ ಬೆಂಗಳೂರು ನಗರವೊಂದರಲ್ಲಿಯೇ 2023ರಲ್ಲಿ 95, 2024ರಲ್ಲಿ 197 ಹಾಗೂ 2025ರಲ್ಲಿ 414 ಪ್ರಕರಣಗಳನ್ನು ದಾಖಲಿಸಲಾಗಿದೆ.
ವರ್ಷವಾರು ವಿವರ
ಇದರೊಂದಿಗೆ ಬೆಂಗಳೂರು ನಗರವೊಂದರಲ್ಲೇ ಬೈಕ್ ವೀಲಿಂಗ್ ಪ್ರಕರಣಗಳಲ್ಲಿ 2023ರಲ್ಲಿ 242 ಪ್ರಕರಣಗಳನ್ನು ದಾಖಲಿಸಿದ್ದು, 70 ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದೆ. 2024ರಲ್ಲಿ 532 ಪ್ರಕರಣಗಳಲ್ಲಿ ಪೋಷಕರ ವಿರುದ್ಧ 120 ಪ್ರಕರಣಗಳು ದಾಖಲಾಗಿವೆ ಹಾಗೂ 2025ರಲ್ಲಿ ಒಟ್ಟು 642 ಪ್ರಕರಣಗಳಲ್ಲಿ 159 ಪೋಷಕರ ಮೇಲೆ ಪ್ರಕರಣ ದಾಖಲಾಗಿದೆ. ಇಷ್ಟಾದರೂ ಸಹ ಅಪ್ರಾಪ್ತರ ವಾಹನ ಚಾಲನೆಯ ಹಪಾಹಪಿ ಮಾತ್ರ ಕಡಿಮೆಯಾಗಿಲ್ಲ.
ಸಾವಿನ ಸಂಖ್ಯೆಗಳೆಷ್ಟು?
ದೇಶದಲ್ಲಿಪ್ರತಿದಿನ ಸರಾಸರಿ 30 ರಿಂದ 40 ಅಪ್ರಾಪ್ತರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ ಅಪ್ರಾಪ್ತರು ಚಲಾಯಿಸುತ್ತಿದ್ದ ವಾಹನಗಳಿಂದ ಸಂಭವಿಸಿದ ಅಪಘಾತಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ವಾಹನ ಚಲಾಯಿಸುತ್ತಿದ್ದ ಅಪ್ರಾಪ್ತರು ಮತ್ತು ಅವರೊಂದಿಗೆ ಇದ್ದ ಗೆಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಕಳೆದ ವರ್ಷ ಅಪ್ರಾಪ್ತರ ಚಾಲನೆಯಿಂದಾಗಿ ಸುಮಾರು 25 ರಿಂದ 30 ಭೀಕರ ಅಪಘಾತಗಳು ಸಂಭವಿಸಿದ್ದು, ಅನೇಕ ಯುವಕರು ಜೀವ ಕಳೆದುಕೊಂಡಿದ್ದಾರೆ.
ದುರಂತಕ್ಕೆ ಕಾರಣಗಳೇನು?
ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್‌ಗಾಗಿ 'ವೀಲಿಂಗ್' ಹಾಗೂ 'ಸ್ಟಂಟ್' ಮಾಡುವುದು ಹದಿಹರೆಯದವರಲ್ಲಿ ದೊಡ್ಡ ವ್ಯಸನವಾಗಿದೆ. ಮಕ್ಕಳು ಹಠ ಮಾಡುತ್ತಾರೆಂದು ಸುಲಭವಾಗಿ ವಾಹನಗಳ ಕೀ ನೀಡುವ ಪೋಷಕರೇ ಈ ದುರಂತಗಳಿಗೆ ಅಡಿಪಾಯ ಹಾಕುತ್ತಿದ್ದಾರೆ.
"ನನ್ನನ್ನು ಎಲ್ಲರೂ ಗುರುತಿಸಬೇಕೆಂಬʼ ಮನಸ್ಥಿತಿ, 'ಜಾಲಿ ರೈಡ್'ಗಳ ಹೆಸರಿನಲ್ಲಿ ಅತಿವೇಗದ ಚಾಲನೆ, ಅನೇಕ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ರಾಜಾರೋಷವಾಗಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರೂ ಶಾಲಾ ಆಡಳಿತ ಮಂಡಳಿಗಳು ಕಠಿಣ ಕ್ರಮ ಕೈಗೊಳ್ಳದಿರುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ಅಪಘಾತದಂತಹ ದುರಂತಗಳು ಹೆಚ್ಚಾಗುತ್ತಿವೆ ಎಂದು ಖಾಸಗಿ ಸಂಸ್ಥೆಯೊಂದು ಸಮೀಕ್ಷೆ ನಡೆಸಿದೆ.
ಪೋಷಕರಿಗೂ ಜೈಲು
ಮೋಟಾರು ವಾಹನ ಕಾಯ್ದೆ-2019ರ ತಿದ್ದುಪಡಿಯ ನಂತರ ಅಪ್ರಾಪ್ತರು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ ವಾಹನ ಮಾಲೀಕರು ಅಥವಾ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಪೋಷಕರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ನೀಡಲು ಅವಕಾಶವಿದೆ. ಸಂಬಂಧಪಟ್ಟ ವಾಹನದ ನೋಂದಣಿಯನ್ನು (Registration) ಒಂದು ವರ್ಷದವರೆಗೆ ರದ್ದುಗೊಳಿಸಲಾಗುತ್ತದೆ. ಚಾಲನೆ ಮಾಡಿದ ಅಪ್ರಾಪ್ತ ವ್ಯಕ್ತಿಗೆ 25 ವರ್ಷ ವಯಸ್ಸಾಗುವವರೆಗೆ ಚಾಲನಾ ಪರವಾನಗಿ (Driving License) ಸಿಗುವುದಿಲ್ಲ.
ಪರಿಹಾರ ಮಾರ್ಗಗಳು
ಶಾಲಾ-ಕಾಲೇಜುಗಳ ಆರಂಭ ಮತ್ತು ಬಿಡುವಿನ ಸಮಯದಲ್ಲಿ ಪೊಲೀಸರು ಅನಿರೀಕ್ಷಿತ ತಪಾಸಣೆ ನಡೆಸಬೇಕು. ಇಂತಹ ಪ್ರಕರಣಗಳಲ್ಲಿ ಕೇವಲ ದಂಡ ವಿಧಿಸುವುದಲ್ಲದೆ, ಅಪಘಾತದ ದೃಶ್ಯಗಳ ಮೂಲಕ ಮಕ್ಕಳು ಮತ್ತು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ವಿನಾಯಿತಿ ನೀಡದೆ ವಾಹನ ನೀಡಿದ ಪೋಷಕರ ಮೇಲೆ ಎಫ್‌ಐಆರ್ ದಾಖಲಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.
ಅಪಘಾತ ಸಂಭವಿಸಿದರೆ ಪರಿಸ್ಥಿತಿ ಏನು?
ಅಪ್ರಾಪ್ತರು ವಾಹನ ಚಲಾಯಿಸುವಾಗ ಅಪಘಾತವಾದರೆ, ಯಾವುದೇ ವಿಮಾ ಕಂಪನಿಯು ಕ್ಲೈಮ್ ಮೊತ್ತವನ್ನು ನೀಡುವುದಿಲ್ಲ. ಹಾನಿಯ ಸಂಪೂರ್ಣ ವೆಚ್ಚವನ್ನು ಮಾಲೀಕರೇ ಭರಿಸಬೇಕಾಗುತ್ತದೆ. ಅಪಘಾತದಲ್ಲಿ ಸಾವು-ನೋವು ಸಂಭವಿಸಿದರೆ, ಪೋಷಕರ ಮೇಲೆ ಕಠಿಣ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಕೈಗೆ ವಾಹನ ನೀಡುವ ಮುನ್ನ ಅವರ ಭವಿಷ್ಯ ಮತ್ತು ಇತರರ ಪ್ರಾಣದ ಬಗ್ಗೆ ಯೋಚಿಸುವುದು ಉತ್ತಮ.

