
ನಿತೀಶ್ ಕುಮಾರ್ ಪುತ್ರ ನಿಶಾಂತ್ ರಾಜಕೀಯಕ್ಕೆ ಎಂಟ್ರಿ: ಜೆಡಿಯು ಮಹತ್ವದ ನಿರ್ಧಾರ!
Bihar Politics|ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಅಧಿಕೃತವಾಗಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ.
ಬಿಹಾರ ರಾಜಕೀಯದಲ್ಲಿ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅಧಿಕೃತವಾಗಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವುದು ಈಗ ಖಚಿತವಾಗಿದೆ. ಈ ಕುರಿತು ಜನತಾದಳ (ಯುನೈಟೆಡ್) ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದೆ ಎಂದು ರಾಜ್ಯ ಸಚಿವ ಶ್ರವಣ್ ಕುಮಾರ್ ಮಂಗಳವಾರ ತಿಳಿಸಿದ್ದಾರೆ.
ಪಕ್ಷದಲ್ಲಿ ದೊಡ್ಡ ಜವಾಬ್ದಾರಿ
ಮುಖ್ಯಮಂತ್ರಿ ನಿತಿನ್ ಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಿರಿಯ ಜೆಡಿಯು ನಾಯಕ ಶ್ರವಣ್ ಕುಮಾರ್ ಅವರು, ನಿಶಾಂತ್ ಅವರಿಗೆ ಪಕ್ಷದಲ್ಲಿ ದೊಡ್ಡ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದ್ದಾರೆ. "ನಿಶಾಂತ್ ಕುಮಾರ್ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡುವುದು ಈಗ ಅಂತಿಮವಾಗಿದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಪಕ್ಷವು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ. ಕಳೆದ ಹಲವು ವರ್ಷಗಳಿಂದ ಕಾರ್ಯಕರ್ತರು ನಿಶಾಂತ್ ರಾಜಕೀಯಕ್ಕೆ ಬರಬೇಕೆಂದು ಒತ್ತಾಯಿಸುತ್ತಿದ್ದರು. ಹೋಳಿ ಹಬ್ಬದ ಮುನ್ನವೇ ಈ ನಿರ್ಧಾರ ಹೊರಬಿದ್ದಿರುವುದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ," ಎಂದು ಅವರು ಪಿಟಿಐಗೆ ತಿಳಿಸಿದರು.
ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆ?
ನಿಶಾಂತ್ ಅವರಿಗೆ ಯಾವ ರೀತಿಯ ಜವಾಬ್ದಾರಿ ನೀಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಅವರಿಗೆ ದೊಡ್ಡ ಮಟ್ಟದ ಜವಾಬ್ದಾರಿ ಸಿಗಲಿದೆ. ಅದು ಏನೆಂಬುದು ಒಂದೆರಡು ದಿನಗಳಲ್ಲಿ ನಿರ್ಧಾರವಾಗಲಿದೆ" ಎಂದರು. ನಿಶಾಂತ್ ಅವರನ್ನು ರಾಜ್ಯಸಭೆಗೆ ಕಳುಹಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂದು ಮಾರ್ಮಿಕವಾಗಿ ಉತ್ತರಿಸಿದರು.
ದಶಕಕ್ಕೂ ಹೆಚ್ಚು ಕಾಲ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಶ್ರವಣ್ ಕುಮಾರ್ ಅವರು ಸಿಎಂ ನಿತಿನ್ ಕುಮಾರ್ ಅವರ ಅತ್ಯಂತ ಆಪ್ತ ನಾಯಕರಲ್ಲಿ ಒಬ್ಬರು. ಬಿಹಾರದ ಮುಂದಿನ ರಾಜಕೀಯ ಸಮೀಕರಣಗಳಲ್ಲಿ ನಿಶಾಂತ್ ಅವರ ಪ್ರವೇಶ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಖ್ಯಮಂತ್ರಿ ನಿತಿನ್ ಕುಮಾರ್ ಅವರ ಏಕೈಕ ಪುತ್ರ ನಿಶಾಂತ್ ಕುಮಾರ್ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುತ್ತಿರುವುದು ಕೇವಲ ಜೆಡಿಯು ಪಕ್ಷಕ್ಕೆ ಮಾತ್ರವಲ್ಲದೆ, ಇಡೀ ಬಿಹಾರದ ರಾಜಕೀಯ ಸಮೀಕರಣಗಳಿಗೆ ಹೊಸ ತಿರುವು ನೀಡುವ ಮುನ್ಸೂಚನೆ ನೀಡಿದೆ.
ಯಾರು ಈ ನಿಶಾಂತ್ ಕುಮಾರ್?
ನಿಶಾಂತ್ ಕುಮಾರ್ ಅವರು ತಂದೆಯಂತೆಯೇ ಇಂಜಿನಿಯರಿಂಗ್ ಪದವೀಧರರು. ಇವರು ಜಾರ್ಖಂಡ್‌ನ ಪ್ರತಿಷ್ಠಿತ ಬಿಐಟಿ ಮೆಸ್ರಾದಿಂದ ಸಾಫ್ಟ್‌ವೇರ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಿಶಾಂತ್ ಕುಮಾರ್ ಅವರಿಗೆ ಪ್ರಸ್ತುತ ಸುಮಾರು 50 ವರ್ಷ. ಜುಲೈ 20, 1975 ರಂದು ಜನಿಸಿದ ಇವರು, ತಾಯಿ ಮಂಜು ಸಿನ್ಹಾ (2007ರಲ್ಲಿ ನಿಧನ) ಅವರ ನಿವೃತ್ತಿಯ ನಂತರದ ಎಲ್ಲಾ ಆಸ್ತಿಗಳ ವಾರಸುದಾರರೂ ಆಗಿದ್ದಾರೆ.

