
ಕಳೆದ ಎರಡು ದಶಕಗಳಿಂದ ಬಿಹಾರದ ಜನತೆ ತಮ್ಮ ಮೇಲಿಟ್ಟಿರುವ ನಂಬಿಕೆ ಮತ್ತು ಬೆಂಬಲಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ: ರಾಜ್ಯಸಭೆಗೆ ಪ್ರವೇಶ, ಭುಗಿಲೆದ್ದ ಬೆಂಬಲಿಗರ ಆಕ್ರೋಶ
ಕಳೆದ ಎರಡು ದಶಕಗಳಿಂದ ಬಿಹಾರದ ಜನತೆ ತಮ್ಮ ಮೇಲಿಟ್ಟಿರುವ ನಂಬಿಕೆ ಮತ್ತು ಬೆಂಬಲಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಬಿಹಾರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಖಚಿತಪಡಿಸಿದ್ದಾರೆ. ಎರಡು ದಶಕಗಳಿಗೂ ಹೆಚ್ಚು ಕಾಲ ಬಿಹಾರದ ಆಡಳಿತ ಚುಕ್ಕಾಣಿ ಹಿಡಿದಿದ್ದ ಅವರು, ಇದೀಗ ರಾಜ್ಯಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಈ ದಿಢೀರ್ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿ ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ಪೋಸ್ಟ್ ಮಾಡಿರುವ ಜೆಡಿಯು (JDU) ವರಿಷ್ಠ ನಿತೀಶ್ ಕುಮಾರ್, ತಮ್ಮ ಸುದೀರ್ಘ ರಾಜಕೀಯದ ಕನಸೊಂದನ್ನು ಬಿಚ್ಚಿಟ್ಟಿದ್ದಾರೆ. ಸಂಸತ್ತಿನ ಉಭಯ ಸದನಗಳು ಹಾಗೂ ರಾಜ್ಯ ಶಾಸಕಾಂಗದ ಎರಡೂ ಸದನಗಳಲ್ಲಿ ಸೇವೆ ಸಲ್ಲಿಸಬೇಕೆಂಬುದು ತಮ್ಮ ಬಹುಕಾಲದ ಆಸೆಯಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ಲೋಕಸಭಾ ಸಂಸದರಾಗಿ, ಶಾಸಕರಾಗಿ (ಎಂಎಲ್‌ಎ) ಹಾಗೂ ವಿಧಾನ ಪರಿಷತ್ ಸದಸ್ಯರಾಗಿ (ಎಂಎಲ್‌ಸಿ) ಕಾರ್ಯನಿರ್ವಹಿಸಿರುವ ಅವರು, ಮುಂಬರುವ ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯರಾಗುವ ಮೂಲಕ ಶಾಸಕಾಂಗದ ಎಲ್ಲ ಸದನಗಳಲ್ಲೂ ಕಾರ್ಯನಿರ್ವಹಿಸಿದ ಮೈಲುಗಲ್ಲು ತಲುಪಲಿದ್ದಾರೆ.
ಬಿಹಾರದ ಅಭಿವೃದ್ಧಿಗೆ ನಿರಂತರ ಬೆಂಬಲದ ಭರವಸೆ
ಕಳೆದ ಎರಡು ದಶಕಗಳಿಂದ ಬಿಹಾರದ ಜನತೆ ತಮ್ಮ ಮೇಲಿಟ್ಟಿರುವ ನಂಬಿಕೆ ಮತ್ತು ಬೆಂಬಲಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಜನರ ವಿಶ್ವಾಸದಿಂದಾಗಿಯೇ ಬಿಹಾರವು ಅಭಿವೃದ್ಧಿಯಲ್ಲಿ ಹೊಸ ದಾಖಲೆಗಳನ್ನು ಬರೆಯಲು ಸಾಧ್ಯವಾಯಿತು ಎಂದು ಸ್ಮರಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ಜನರೊಂದಿಗಿನ ತಮ್ಮ ಒಡನಾಟ ಮುಂದುವರಿಯಲಿದ್ದು, ಬಿಹಾರದ ಪ್ರಗತಿಗಾಗಿ ಸದಾ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಮುಂಬರುವ ಹೊಸ ಸರ್ಕಾರಕ್ಕೆ ಹಾಗೂ ನಾಯಕತ್ವಕ್ಕೆ ತಮ್ಮ ಸಂಪೂರ್ಣ ಬೆಂಬಲ ಹಾಗೂ ಮಾರ್ಗದರ್ಶನ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಡಿದೆದ್ದ ಜೆಡಿಯು ಕಾರ್ಯಕರ್ತರು, ಪುತ್ರನಿಗೆ ಸ್ಥಾನ ನೀಡಲು ಪಟ್ಟು
ನಿತೀಶ್ ಕುಮಾರ್ ಅವರ ಈ ನಿರ್ಧಾರ ಹೊರಬೀಳುತ್ತಿದ್ದಂತೆ ಪಾಟ್ನಾದಲ್ಲಿರುವ ಅವರ ನಿವಾಸದ ಎದುರು ಜಮಾಯಿಸಿದ ನೂರಾರು ಜೆಡಿಯು ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಬಿಹಾರದ ರಾಜಕಾರಣದಿಂದ ಅವರನ್ನು ಅಳಿಸಿಹಾಕುವ ದೊಡ್ಡ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿರುವ ಕಾರ್ಯಕರ್ತರು, ಜೆಡಿಯು ಶಾಸಕರ ವಾಹನಗಳನ್ನು ತಡೆದು ಆಕ್ರೋಶ ಹೊರಹಾಕಿದ್ದಾರೆ. ನಿತೀಶ್ ಕುಮಾರ್ ಅವರ ಬದಲಿಗೆ ಅವರ ಪುತ್ರ ನಿಶಾಂತ್ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕು ಮತ್ತು ನಿತೀಶ್ ಅವರು ಮುಖ್ಯಮಂತ್ರಿಯಾಗಿಯೇ ಮುಂದುವರಿಯಬೇಕು ಎಂದು ಜೆಡಿಯು ಮುಖಂಡ ರಾಜೀವ್ ರಂಜನ್ ಪಟೇಲ್ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಬೀದಿಗಿಳಿದು ಹೋರಾಡುವ ಎಚ್ಚರಿಕೆ
ಬಿಹಾರದ ಜನತೆ ನಿತೀಶ್ ಕುಮಾರ್ ಅವರ ಹೆಸರಿನಲ್ಲಿ ಮತ ನೀಡಿದ್ದಾರೆ ಹೊರತು ಬೇರೆಯವರಿಗಲ್ಲ ಎಂದು ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿಯನ್ನು ಬದಲಾಯಿಸುವುದೇ ಆದರೆ ಹೊಸದಾಗಿ ಚುನಾವಣೆ ನಡೆಸಿ ಬಹುಮತ ಸಾಬೀತುಪಡಿಸಲಿ, ಬಲವಂತವಾಗಿ ಅವರನ್ನು ರಾಜ್ಯಸಭೆಗೆ ಕಳುಹಿಸಿದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಶಾಸಕ ಸಂಜಯ್ ಸಿಂಗ್ ಸೇರಿದಂತೆ ಜೆಡಿಯು ಪಕ್ಷದ ಹಲವು ಶಾಸಕರು ಮತ್ತು ಸಚಿವರು ಕೂಡ ನಿತೀಶ್ ಕುಮಾರ್ ರಾಜ್ಯಸಭೆಗೆ ತೆರಳುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದು ವರದಿಯಾಗಿದೆ.

