
ಡ್ರಗ್ಸ್ ನೀಡಿ ನಿರಂತರ ಅತ್ಯಾಚಾರ- 58 ಮಹಿಳೆಯ ಅಶ್ಲೀಲ ವಿಡಿಯೊ ರೆಕಾರ್ಡ್- ಖ್ಯಾತ ಜ್ಯೋತಿಷಿ ಅರೆಸ್ಟ್
Nashik Astrologer Arrest| ಮಹಾರಾಷ್ಟ್ರದ ನಾಸಿಕ್‌ನಲ್ಲಿ ಜ್ಯೋತಿಷ್ಯದ ಹೆಸರಿನಲ್ಲಿ 58 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 'ಕ್ಯಾಪ್ಟನ್' ಅಶೋಕ್ ಖರಾತ್ ಬಂಧಿಸಲಾಗಿದೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರಭಾವಿ ಜ್ಯೋತಿಷಿ ಎಂದು ಗುರುತಿಸಿಕೊಂಡಿದ್ದ 67 ವರ್ಷದ ಅಶೋಕ್ ಖರಾತ್ ಎಂಬಾತನನ್ನು ಅತ್ಯಾಚಾರ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಮಹಿಳೆಯೊಬ್ಬರು ನೀಡಿದ ದೂರು ಈ ಭೀಕರ ಪ್ರಕರಣವನ್ನು ಬೆಳಕಿಗೆ ತಂದಿದೆ. ದೂರಿನ ಪ್ರಕಾರ, ಪೂಜೆ ಮತ್ತು ವಿಧಿವಿಧಾನಗಳ ನೆಪದಲ್ಲಿ ಆರೋಪಿಯು ತನಗೆ ಮಾದಕ ದ್ರವ್ಯ ನೀಡಿ, ಸಮ್ಮೋಹನಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಕ್ಯಾಪ್ಟನ್ ಎಂದು ಕರೆಸಿಕೊಳ್ಳುತ್ತಿದ್ದ ಆರೋಪಿ
ಪೊಲೀಸ್ ತನಿಖೆಯು ಅತ್ಯಂತ ಭಯಾನಕ ಸತ್ಯಗಳನ್ನು ಹೊರಹಾಕಿದೆ. ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಖರಾತ್, ತನ್ನನ್ನು 'ಕ್ಯಾಪ್ಟನ್' ಎಂದು ಕರೆದುಕೊಳ್ಳುತ್ತಿದ್ದ. ತನಗೆ ದೈವಿಕ ಶಕ್ತಿ ಇದೆ ಎಂದು ಸಮಾಜವನ್ನು ನಂಬಿಸಿದ್ದ. ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವ ಆಮಿಷವೊಡ್ಡಿ ಮಹಿಳೆಯರನ್ನು ತನ್ನ ಕಚೇರಿಗೆ ಕರೆಯಿಸಿಕೊಳ್ಳುತ್ತಿದ್ದ. ಅಲ್ಲಿ ಅವರಿಗೆ ಮಾದಕ ದ್ರವ್ಯ ನೀಡಿ ಸಮ್ಮೋಹನಗೊಳಿಸುತ್ತಿದ್ದ. ನಂತರ, "ನಿಮ್ಮ ಪತಿ ಸಾಯುತ್ತಾರೆ" ಅಥವಾ "ಮಾಟಮಂತ್ರದ ಪ್ರಭಾವವಿದೆ" ಎಂದು ಭಯ ಹುಟ್ಟಿಸಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ.
58 ಮಹಿಳೆಯರ ಅಶ್ಲೀಲ ವಿಡಿಯೋ
ನಾಸಿಕ್‌ನ ಕೆನಡಾ ಕಾರ್ನರ್‌ನಲ್ಲಿರುವ ತನ್ನ 'ಓಕಸ್ ಪ್ರಾಪರ್ಟಿ ಡೀಲರ್ಸ್' ಕಚೇರಿಯಲ್ಲಿ ಗುಪ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ. ಲೈಂಗಿಕ ಕೃತ್ಯಗಳನ್ನು ಚಿತ್ರೀಕರಿಸಿ ಪೆನ್ ಡ್ರೈವ್‌ಗಳಲ್ಲಿ ಸಂಗ್ರಹಿಸಿಡುತ್ತಿದ್ದ. ತನಿಖೆಯ ವೇಳೆ ಲಭ್ಯವಾದ ಪೆನ್ ಡ್ರೈವ್‌ನಲ್ಲಿ 58 ವಿವಿಧ ಮಹಿಳೆಯರ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.
ಸಿನಿಮೀಯ ಮಾದರಿಯ ಬಂಧನ
ಆರೋಪಿಯು ಪ್ರಭಾವಿ ರಾಜಕೀಯ ಸಂಪರ್ಕ ಹೊಂದಿದ್ದರಿಂದ, ಮಾಹಿತಿ ಸೋರಿಕೆಯಾಗದಂತೆ ತಡೆಯಲು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಕತ್ತಲಲ್ಲಿ ಆತನ ಫಾರ್ಮ್‌ಹೌಸ್ ಮುಂದೆ ಪೊಲೀಸರು "ಕಳ್ಳ, ಕಳ್ಳ" ಎಂದು ಕೂಗುತ್ತಾ ಗದ್ದಲ ಸೃಷ್ಟಿಸಿದರು. ಏನಾಗುತ್ತಿದೆ ಎಂದು ತಿಳಿಯಲು ಮನೆಯವರು ಬಾಗಿಲು ತೆರೆದಾಗ, ಪೊಲೀಸರು ನೇರವಾಗಿ ಬೆಡ್‌ರೂಮ್‌ಗೆ ನುಗ್ಗಿ ಖರಾತ್‌ನನ್ನು ಬಂಧಿಸಿದರು. ಅದಾಳಿಯ ವೇಳೆ ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಅನೇಕ ಅನುಮಾನಾಸ್ಪದ ದಾಖಲೆಗಳು ಪತ್ತೆಯಾಗಿವೆ.
ಪ್ರಭಾವಿ ಸಂಪರ್ಕ ಮತ್ತು ರಾಜಕೀಯ ಬಿರುಗಾಳಿ
ಅಶೋಕ್ ಖರಾತ್ ನಾಸಿಕ್‌ನ ಸಿನ್ನಾರ್‌ನಲ್ಲಿರುವ 'ಶ್ರೀ ಈಶಾನ್ಯೇಶ್ವರ ದೇವಾಲಯ ಟ್ರಸ್ಟ್' ಅಧ್ಯಕ್ಷನಾಗಿದ್ದ. ದೆಹಲಿಯಿಂದ ಮಹಾರಾಷ್ಟ್ರದವರೆಗೂ ಆತನಿಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳ ಸಂಪರ್ಕವಿತ್ತು. ಈ ಘಟನೆಯು ಈಗ ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ. "ಮಹಿಳೆಯರನ್ನು ಶೋಷಿಸುವ ಇಂತಹ ಕಾಮುಕರ ಪಾದ ಪೂಜೆ ಮಾಡುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು" ಎಂದು ಉದ್ಧವ್ ಠಾಕ್ರೆ ಪಕ್ಷದ ಸುಷ್ಮಾ ಅಂಧಾರೆ ಆಗ್ರಹಿಸಿದ್ದಾರೆ.
SIT ತನಿಖೆಗೆ ಆದೇಶ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರವು ಐಪಿಎಸ್ ಅಧಿಕಾರಿ ತೇಜಸ್ವಿನಿ ಸತ್ಪುತೆ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ನಾಸಿಕ್ ಕ್ರೈಮ್ ಬ್ರಾಂಚ್ ಘಟಕವು ಈ ವಿಡಿಯೋಗಳು ಮತ್ತು ಆಸ್ತಿ ದಾಖಲೆಗಳ ಬಗ್ಗೆ ಆಳವಾದ ತನಿಖೆ ನಡೆಸುತ್ತಿದೆ.

