Gang Rape|ಗುಲಾಬಿ ಕೊಕೇನ್‌ ಬಳಸಿ ಪ್ರಜ್ಞೆ ತಪ್ಪಿಸಿ ವಿದ್ಯಾರ್ಥಿನಿ ಅತ್ಯಾಚಾರ! ಐಪಿಎಸ್‌ ಅಧಿಕಾರಿ ವಿಲ್ಲಾ ಬಳಕೆ!
x
ಪ್ರಕರಣದ ಪ್ರಮುಖ ಆರೋಪಿ ನಿಖಿಲ್‌ ಹಾಗೂ ಡಿಕ್ಷನ್‌ ಸ್ಯಾಂತ್ರಾ

Gang Rape|ಗುಲಾಬಿ ಕೊಕೇನ್‌ ಬಳಸಿ ಪ್ರಜ್ಞೆ ತಪ್ಪಿಸಿ ವಿದ್ಯಾರ್ಥಿನಿ ಅತ್ಯಾಚಾರ! ಐಪಿಎಸ್‌ ಅಧಿಕಾರಿ ವಿಲ್ಲಾ ಬಳಕೆ!

ಪ್ರಕರಣದ ಸಂಬಂಧ ಐವರು ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ. ಅತ್ಯಾಚಾರ ನಡೆಸಲು ಬಳಸಿದ ವಿಲ್ಲಾ ಐಪಿಎಸ್ ಅಧಿಕಾರಿಯೊಬ್ಬರಿಗೆ ಸೇರಿದ್ದು ಎನ್ನಲಾಗಿರುವುದು ಆಘಾತಕಾರಿ ಅಂಶವಾಗಿದೆ.


Click the Play button to hear this message in audio format

ಸಿಲಿಕಾನ್ ಸಿಟಿಯ ಗದ್ದಲದಿಂದ ದೂರವಿರುವ ನಗರದ ಹೊರವಲಯದ ಐಷಾರಾಮಿ ವಿಲ್ಲಾಗಳು ಈಗ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿವೆಯೇ? ಗುಲಾಬಿ ಬಣ್ಣದ ಕೊಕೇನ್‌ ಎಂಬ ಮಾದಕ ದ್ರವ್ಯವನ್ನು ಬಳಸಿ ಲೈಂಗಿಕ ದೌರ್ಜನ್ಯಗಳನ್ನು ನಡೆಸಲಾಗುತ್ತಿದೆಯೇ?

ಜಕ್ಕೂರಿನ ವಿಲ್ಲಾವೊಂದರಲ್ಲಿ ಪ್ರೇಮಿಗಳ ದಿನದಂದು ನಡೆದ ಘಟನೆ ಈ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. 19 ವರ್ಷದ ತಮಿಳುನಾಡು ಮೂಲದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಆರೋಪವು ನಗರದ 'ವಿಲ್ಲಾ ಪಾರ್ಟಿ' ಮತ್ತು 'ರೇವ್ ಸಂಸ್ಕೃತಿ'ಯ ಕರಾಳ ಮುಖವನ್ನು ಅನಾವರಣಗೊಳಿಸಿದೆ.

ಈ ಅವ್ಯವಹಾರದಲ್ಲಿ ಭಾಗಿಯಾದ ಅರೋಪಿ ಅನಿರುದ್ಧ್‌, ದಾವಣಗೆರೆಯ ರಾಜಕಾರಣಿ ಶಿವಣ್ಣ ಎಂಬವರ ಪುತ್ರನಾಗಿದ್ದಾನೆ. ನಿಖಿಲ್‌ ಎಂಬಾತ ಪಂಚತಾರಾ ಹೋಟೆಲ್‌ಗಳಲ್ಲಿ ಯುವತಿಯರನ್ನು ನಂಬಿಸಿ ದೌರ್ಜನ್ಯ ನಡೆಸಿರುವ ಅರೋಪಗಳನ್ನು ಎದುರಿಸುತ್ತಿದ್ದಾನೆ ಎನ್ನಲಾಗಿದೆ.

ಮೂಲತಹ ತಮಿಳುನಾಡಿನ, ಬೆಂಗಳೂರು ಕಾಲೇಜೊಂದರ ಬಿಎ ವಿದ್ಯಾರ್ಥಿನಿಯೊಬ್ಬಳು ಇನ್‌ಸ್ಟಾಗ್ರಾಮ್ ಪರಿಚಯವಾಗಿದ್ದ ಡಿಕ್ಷನ್‌ ಸ್ಯಾಂತ್ರಾ ಎಂಬಾತನ ಆಹ್ವಾನದ ಮೇರೆಗೆ ಜಕ್ಕೂರಿನ 'ವಿಲ್ಲಾ' ಪಾರ್ಟಿಗೆ ತೆರಳಿದ್ದಳು. ಅಲ್ಲಿ ಆಕೆಗೆ ಬಲವಂತವಾಗಿ ಮಾದಕ ದ್ರವ್ಯ (ಗುಲಾಬಿ ಬಣ್ಣದ ಮಾತ್ರೆ) ನೀಡಿ ಪ್ರಜ್ಞೆ ತಪ್ಪಿಸಿ, ನಿಖಿಲ್ ಮತ್ತು ಡಿಕ್ಷನ್‌ ಸ್ಯಾಂತ್ರಾ ಎಂಬುವವರಿಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಮೃತಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ದೂರು, ಈಗ ಈಶಾನ್ಯ ವಿಭಾಗದ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಗುಲಾಬಿ ಬಣ್ಣದ ಮಾತ್ರೆ ಅಂದರೆ ಗುಲಾಬಿ ಬಣ್ಣದ ಕೊಕೇನ್‌ ಎಂಬ ಮಾದಕವಸ್ತುವಾಗಿದ್ದು, ಅದನ್ನು ಎಂಡಿಎಂಎ (Methyl​enedioxy​methamphetamine) ಮಾತ್ರೆ ಎಂದೂ ಪರಿಗಣಿಸಲಾಗುತ್ತದೆ.

ಈ ಪ್ರಕರಣ ಕೇವಲ ಲೈಂಗಿಕ ದೌರ್ಜನ್ಯಕ್ಕೆ ಸೀಮಿತವಾಗಿಲ್ಲ. ದಾವಣಗೆರೆಯ ರಾಜಕಾರಣಿಯ ಪುತ್ರ ಅನಿರುದ್ದ್ ಈ ಪಾರ್ಟಿಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಮತ್ತು ವಿಲ್ಲಾ ಬುಕ್ ಮಾಡಲು ಸಹಕರಿಸಿದ್ದು ತನಿಖೆಯ ದಿಕ್ಕನ್ನು ಬದಲಿಸಿದೆ. ಇನ್ನು ಪ್ರಕರಣ ನಡೆದ ವಿಲ್ಲಾ, ಹಿರಿಯ ಐಪಿಎಸ್ ಅಧಿಕಾರಿಯೊಬ್ಬರಿಗೆ ಸೇರಿದ್ದು ಎನ್ನಲಾಗಿರುವುದುಮತ್ತೊಂದು ಆಘಾತಕಾರಿ ಅಂಶ. ಪ್ರಭಾವಿಗಳು ಇಂತಹ ತಡರಾತ್ರಿಯ ಪಾರ್ಟಿಗಳಲ್ಲಿ ಭಾಗಿಯಾಗುತ್ತಿರುವುದು ಮತ್ತು ರಕ್ಷಣಾತ್ಮಕವಾಗಿ ವಿಲ್ಲಾಗಳನ್ನು ಬಳಸಿಕೊಳ್ಳುತ್ತಿರುವುದು ಪೊಲೀಸರಿಗೆ ನುಂಗಲಾರದ ತುತ್ತಾಗಿದೆ.

ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ನಿಖಿಲ್, ರಾಜಕೀಯ ವಲಯದ ಪ್ರಭಾವಿಗಳೊಂದಿಗೆ ನಿಕಟ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಈತ ನಿರಂತರವಾಗಿ ಇಂತಹ ಪಾರ್ಟಿಗಳನ್ನು ಆಯೋಜಿಸುತ್ತಿದ್ದನೇ ಮತ್ತು ಅದಕ್ಕೆ ಪ್ರಭಾವಿಗಳನ್ನು ಆಹ್ವಾನಿಸುತ್ತಿದ್ದನೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಪಾರ್ಟಿಯಲ್ಲಿ ಮಾದಕ ವಸ್ತುಗಳ ಬಳಕೆ ಆಗಿರುವ ದಟ್ಟ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪಾರ್ಟಿಯಲ್ಲಿದ್ದ ನಿಖಿಲ್, ಪಶ್ಚಿಮ ಬಂಗಾಳದ ರೂಪದರ್ಶಿ ಡಿಕ್ಸನ್ ಸ್ಯಾಂತ್ರಾ, ಸಂತ್ರಸ್ತೆ ಸೇರಿದಂತೆ ಒಟ್ಟು ಎಂಟು ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಈ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ವರದಿ ಪಾಸಿಟಿವ್ ಬಂದರೆ, ಮಾದಕ ವಸ್ತು ಜಾಲದ (Drug Peddling) ಬಗ್ಗೆ ಪ್ರತ್ಯೇಕ ತನಿಖೆ ಆರಂಭವಾಗಲಿದೆ.

ಐವರ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 6 ರಿಂದ 7 ಸಾಕ್ಷಿದಾರರನ್ನು ವಿಚಾರಣೆ ನಡೆಸಿದ್ದು, ಪ್ರಕರಣದಲ್ಲಿ ಓಟ್ಟು 5 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದವನಾದ ಡಿಕ್ಸನ್‌ ಸ್ಯಾಂತ್ರಾ (21), ಹಾಸನ ಜಿಲ್ಲೆಯ ಸಕಲೇಶಪುರ ಮೂಲದವನಾದ ನಿಖಿಲ್‌ (34), ಶಿವಮೊಗ್ಗದ ಮೂಲದ ಶ್ರವಣ್ (21 ), ದಾವಣಗೆರೆ ಮೂಲದ ಅನಿರುದ್ಧ್ (33 ), ಗುಜರಾತ್‌ ಮೂಲದ ಮೋಹಿತ್ ಜೈನ್ (23 ) ಅವರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದರಲ್ಲಿ ಪ್ರಮುಖ ಆರೋಪಿಗಳಾದ ಡಿಕ್ಸನ್ ಮತ್ತು ನಿಖಿಲ್ ಅವರುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕೃತ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಆರೋಪದ ಮೇಲೆ ಇನ್ನುಳಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ವಿಲ್ಲಾ ಮಾಲೀಕತ್ವದ ಗೊಂದಲ

ಘಟನೆ ನಡೆದ ವಿಲ್ಲಾ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಈ ಅಧಿಕಾರಿಯು ಮೂರು ವರ್ಷಗಳ ಹಿಂದೆಯೇ ವಿಲ್ಲಾವನ್ನು ಒಂದು ಕಂಪನಿಗೆ ಗುತ್ತಿಗೆ ನೀಡಿದ್ದರು ಆ ಕಂಪನಿಯ ಮೂಲಕ ಆರೋಪಿಗಳು ವಿಲ್ಲಾವನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ರೇವ್ ಪಾರ್ಟಿ ಸಂಸ್ಕೃತಿ

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಜಕ್ಕೂರು, ಯಲಹಂಕ, ಹೆಣ್ಣೂರು ಮತ್ತು ಹೊರವಲಯದ ಫಾರ್ಮ್‌ಹೌಸ್‌ಗಳಲ್ಲಿ ರೇವ್ ಪಾರ್ಟಿಗಳ ಹಾವಳಿ ಹೆಚ್ಚಾಗಿದೆ. ಈ ಪಾರ್ಟಿಗಳಲ್ಲಿ ಮದ್ಯದ ಜೊತೆಗೆ ಸಿಂಥೆಟಿಕ್ ಡ್ರಗ್ಸ್ (MDMA, ಮಾತ್ರೆಗಳು) ಮುಕ್ತವಾಗಿ ಹರಿಯುತ್ತಿವೆ ಎಂಬ ಶಂಕೆಯಿದೆ. ಜಕ್ಕೂರು ಪ್ರಕರಣದಲ್ಲೂ ಪಾರ್ಟಿಯಲ್ಲಿಂದ 8 ಮಂದಿಯ ರಕ್ತದ ಮಾದರಿಯನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗಿದ್ದು, ಡ್ರಗ್ ಪೆಡ್ಲಿಂಗ್ ಜಾಲದ ಸುಳಿವಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ವೈರಲ್ ವಿಡಿಯೋ

ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದರಲ್ಲಿ ರೂಪದರ್ಶಿಗಳು ನೃತ್ಯ ಮಾಡುತ್ತಿರುವುದು ಮತ್ತು ಆರೋಪಿಗಳು ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. "ನಾವು ಸ್ವಯಂ ಇಚ್ಛೆಯಿಂದ ಪಾರ್ಟಿಗೆ ಬಂದಿದ್ದೆವು, ಆದರೆ ಸಂತ್ರಸ್ತೆಯ ಮೇಲೆ ನಡೆದ ದೌರ್ಜನ್ಯದ ಬಗ್ಗೆ ನಮಗೆ ಮಾಹಿತಿ ಇಲ್ಲ" ಎಂದು ಪಾರ್ಟಿಯಲ್ಲಿದ್ದ ಇತರ ಯುವತಿಯರು ಪೊಲೀಸರೆದುರು ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪಾರ್ಟಿಯ ವಿಡಿಯೋಗಳು ತನಿಖೆಗೆ ಪೂರಕವಾಗಿದ್ದರೂ, ಇತರ ಯುವತಿಯರ "ನಮಗೆ ದೌರ್ಜನ್ಯದ ಬಗ್ಗೆ ತಿಳಿದಿಲ್ಲ" ಎಂಬ ಹೇಳಿಕೆಗಳು ತನಿಖೆಯನ್ನು ಸಂಕೀರ್ಣಗೊಳಿಸಿವೆ.

ಘಟನೆ ಹಿನ್ನಲೆ

19 ವರ್ಷದ ಕಾಲೇಜು ವಿದ್ಯಾರ್ಥಿನಿ ತನ್ನ ದೂರಿನಲ್ಲಿ, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯ ಖಾಸಗಿ ವಿಲ್ಲಾದಲ್ಲಿ ಬಲವಂತವಾಗಿ ಮಾದಕ ದ್ರವ್ಯ ಸೇವಿಸುವಂತೆ ಮಾಡಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಳು.

ಮೂಲತಃ ತಮಿಳುನಾಡಿನವಳಾದ ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿ, ವ್ಯಾಸಂಗಕ್ಕಾಗಿ ಸುಮಾರು ಐದು ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸವಿದ್ದಾಳೆ. ಎಫ್‌ಐಆರ್ ಪ್ರಕಾರ, ಜನವರಿಯಲ್ಲಿ ಇನ್‌ಸ್ಟಾಗ್ರಾಮ್ ಮೂಲಕ 21 ವರ್ಷದ ಡಿಕ್ಸನ್ ಸ್ಯಾಂತ್ರಾ ಪರಿಚಯವಾಗಿತ್ತು ಮತ್ತು ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು.

ಫೆಬ್ರವರಿ 14 ರ ರಾತ್ರಿ ಕಾಲೇಜು ಮುಗಿಸಿ ಸ್ನೇಹಿತೆಯೊಂದಿಗೆ ಊಟ ಮಾಡಿದ ನಂತರ, ಉತ್ತರ ಬೆಂಗಳೂರಿನ 'ರೆಕ್ಸ್ ವಿಲ್ಲಾ'ದಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಬರುವಂತೆ ಡಿಕ್ಸನ್ ಕರೆ ಮಾಡಿದ್ದ. ಅದರಂತೆ ಫೆಬ್ರವರಿ 15 ರ ಮುಂಜಾನೆ ಆಕೆ ಸ್ನೇಹಿತೆಯೊಂದಿಗೆ ಅಲ್ಲಿಗೆ ತಲುಪಿದ್ದಳು. ಪಾರ್ಟಿಯಲ್ಲಿ ಡಿಕ್ಸನ್ ಆಕೆಗೆ 35 ವರ್ಷದ ನಿಖಿಲ್‌ನನ್ನು ಪರಿಚಯಿಸಿದ್ದ. ಆನಂತರ ಅವರಿಬ್ಬರು ತನಗೆ ಬಲವಂತವಾಗಿ ಗುಲಾಬಿ ಬಣ್ಣದ ಮಾತ್ರೆಯೊಂದನ್ನು ನುಂಗಿಸಿದರು. ಅದಾದ ಬಳಿಕ ‌ ಪ್ರಜ್ಞೆ ತಪ್ಪಿತ್ತು. ತನ್ನನ್ನು ಅಮಲಿನಲ್ಲಿರಿಸಿ ನಿಖಿಲ್ ಮತ್ತು ಆತನ ಸ್ನೇಹಿತ ಡಿಕ್ಸನ್ ಸ್ಯಾಂಡೋ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಪ್ರತಿದೂರು

ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಆಗಿರುವ ನಿಖಿಲ್, ಯುವತಿಯು ತನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ (Extortion) ಮತ್ತು ಹನಿ ಟ್ರ್ಯಾಪ್ ಮಾಡಲು ಯತ್ನಿಸಿದ್ದಾಳೆ ಎಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಹೀಗಾಗಿ ಸಂತ್ರಸ್ತೆ ವಿದ್ಯಾರ್ಥಿನಿ ಮೇಲೂ ಪ್ರಕರಣ ದಾಖಲಾಗಿದೆ.

Read More
Next Story