
ಫೇರ್‌ವೆಲ್ ಪಾರ್ಟಿ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿಯಿಂದ ಹಿಟ್ &ರನ್- ಮಗು ಸಾವು
12ನೇ ತರಗತಿ ವಿದ್ಯಾರ್ಥಿಯ ಕಾರು ನಿಯಂತ್ರಣ ತಪ್ಪಿ ಪಾದಚಾರಿಗಳ ಮೇಲೆ ನುಗ್ಗಿದೆ. ಈ ಭೀಕರ ಅಪಘಾತದಲ್ಲಿ 6 ವರ್ಷದ ಮಗು ಮೃತಪಟ್ಟಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಇತ್ತೀಚೆಗೆ ತಂಬಾಕು ಉದ್ಯಮಿಯ ಪುತ್ರನೋರ್ವ ಚಲಾಯಿಸುತ್ತಿದ್ದ ಲ್ಯಾಂಬೋರ್ಗಿನಿ ಕಾರು ಪಾದಾಚಾರಿಗಳ ಮೇಲೆ ಹರಿದು ಆರು ಜನ ಗಂಭೀರವಾಗಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಲಕ್ನೋದಲ್ಲೂಇಂತಹದ್ದೇ ಒಂದು ವರದಿಯಾಗಿದೆ. 12ನೇ ತರಗತಿಯ ವಿದ್ಯಾರ್ಥಿಯೊಬ್ಬನ ಹುಚ್ಚಾಟಕ್ಕೆ 6 ವರ್ಷದ ಪುಟ್ಟ ಬಾಲಕ ಬಲಿಯಾಗಿದ್ದಾನೆ.
ಶಾಲೆಯ ಬೀಳ್ಕೊಡುಗೆ ಪಾರ್ಟಿ ಮುಗಿಸಿ ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ 12ನೇ ತರಗತಿಯ ವಿದ್ಯಾರ್ಥಿ, ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದವರ ಮೇಲೆ ವಾಹನ ಹರಿಸಿದ್ದಾನೆ. ಈ ದುರಂತದಲ್ಲಿ 6 ವರ್ಷದ ಪುಟ್ಟ ಬಾಲಕ ಪ್ರಾಣ ಕಳೆದುಕೊಂಡಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಘಟನೆಯ ವಿವರ
ಲಕ್ನೋದ ಬಂಥ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ್ಪುರ ರಸ್ತೆಯ ಹನುಮಾನ್ ದೇವಸ್ಥಾನದ ಬಳಿ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. 21 ವರ್ಷದ ವಿದ್ಯಾರ್ಥಿ ಗೌರವ್ ಸಿಂಗ್, ತನ್ನ ಶಾಲೆಯ ಫೇರ್‌ವೆಲ್ ಪಾರ್ಟಿ ಮುಗಿಸಿ ಗೆಳತಿಯೊಂದಿಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಅತಿ ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿದ್ದಾನೆ.
ಅಪಘಾತ ನಡೆದ ರೀತಿ
ವೇಗವಾಗಿ ಬಂದ ಕಾರು ಮೊದಲು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಮೇಲೆ ಕುಳಿತಿದ್ದ ವ್ಯಕ್ತಿ ಕೆಳಗೆ ಬಿದ್ದಿದ್ದಾರೆ. ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಟೈರ್ ಸಿಡಿದು, ವಾಹನವು ರಸ್ತೆ ಬದಿಯಲ್ಲಿದ್ದ ಜನರತ್ತ ನುಗ್ಗಿದೆ. ಕಾರು ರಸ್ತೆ ಬದಿಯಲ್ಲಿದ್ದ ಅರ್ಮಾನ್, ಸಾಧನಾ ಪಟೇಲ್, ಮೀನಾ ದೇವಿ ಮತ್ತು 6 ವರ್ಷದ ಬಾಲಕ ದೀಕ್ಷಾಂತ್ ಎಂಬುವವರಿಗೆ ಡಿಕ್ಕಿ ಹೊಡೆದಿದೆ. ನಂತರ ಇ-ರಿಕ್ಷಾ ಮತ್ತು ಆಟೋರಿಕ್ಷಾಗೂ ಡಿಕ್ಕಿ ಹೊಡೆದಿದೆ.
ಬಾಲಕನ ಸಾವು
ಗಂಭೀರವಾಗಿ ಗಾಯಗೊಂಡಿದ್ದ 6 ವರ್ಷದ ಬಾಲಕ ದೀಕ್ಷಾಂತ್ ಅಲ್ಪಕಾಲದಲ್ಲೇ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈತ ಕೇಂದ್ರೀಯ ವಿದ್ಯಾಲಯದ 2ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಉಳಿದ ನಾಲ್ವರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯ ಬಂಧನ
ಅಪಘಾತದ ನಂತರ ಕಾರಿನಲ್ಲಿದ್ದ ವಿದ್ಯಾರ್ಥಿ ಗೌರವ್ ಸಿಂಗ್ ಮತ್ತು ಆತನ ಗೆಳತಿ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಕಾರನ್ನು ವಶಪಡಿಸಿಕೊಂಡು ಆರೋಪಿ ಗೌರವ್ ಸಿಂಗ್‌ನನ್ನು ಬಂಧಿಸಿದ್ದಾರೆ.
"ಸಂತ್ರಸ್ತರ ಕುಟುಂಬದವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ," ಎಂದು ಲಕ್ನೋ ಎಸಿಪಿ ರಜನೀಶ್ ವರ್ಮಾ ತಿಳಿಸಿದ್ದಾರೆ.

