ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರನ ಬಂಧನ
x
ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಬಂಧನ

ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರನ ಬಂಧನ

ಕಾನ್ಪುರದ ವಿಐಪಿ ರಸ್ತೆಯಲ್ಲಿ ನಡೆದ ಭೀಕರ ಲಂಬೋರ್ಗಿನಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರ ಶಿವಂ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದಾರೆ.


ಉತ್ತರ ಪ್ರದೇಶದ ಪ್ರಮುಖ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾನನ್ನು ಭಾನುವಾರ ನಡೆದ ಹೈಪ್ರೊಫೈಲ್ ಲ್ಯಾಂಬೋರ್ಗಿನಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಅಪಘಾತ ಸಂಭವಿಸಿದ ನಾಲ್ಕು ದಿನಗಳ ನಂತರ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತನನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಭಾನುವಾರ ಮಧ್ಯಾಹ್ನ ಕಾನ್ಪುರದ ವಿಐಪಿ ರಸ್ತೆಯಲ್ಲಿ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಇಟಾಲಿಯನ್ ಐಷಾರಾಮಿ ಸ್ಪೋರ್ಟ್ಸ್ ಕಾರ್ 'ಲ್ಯಾಂಬೋರ್ಗಿನಿ ರೆವ್ಯುಯೆಲ್ಟೋ', ನಿಯಂತ್ರಣ ತಪ್ಪಿ ಪಾದಚಾರಿಗಳು ಹಾಗೂ ಇತರ ವಾಹನಗಳಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು.

ಬಂಧಿತ ಶಿವಂ ಮಿಶ್ರಾ, ಉತ್ತರ ಪ್ರದೇಶದ ಪ್ರಖ್ಯಾತ ತಂಬಾಕು ಉದ್ಯಮಿ ಮತ್ತು 'ಡಿಎಸ್ ಗ್ರೂಪ್' ಮಾಲೀಕ ಕೆ.ಕೆ. ಮಿಶ್ರಾ ಅವರ ಪುತ್ರ. ಇವರು ಕಾನ್ಪುರ ಮೂಲದ ಪ್ರಬಲ ಉದ್ಯಮಿ ಕುಟುಂಬಕ್ಕೆ ಸೇರಿದವ. ಅಪಘಾತಕ್ಕೀಡಾದ ಕಾರು ಲ್ಯಾಂಬೋರ್ಗಿನಿ ರೆವ್ಯುಯೆಲ್ಟೋ. ಇದು ಇಟಾಲಿಯನ್ ಮೂಲದ ಹೈಬ್ರಿಡ್ ಸ್ಪೋರ್ಟ್ಸ್ ಕಾರಾಗಿದ್ದು, ಭಾರತದಲ್ಲಿ ಇದರ ಆನ್-ರೋಡ್ ಬೆಲೆ ಸುಮಾರು 10 ಕೋಟಿ ರೂಪಾಯಿಯಿಂದ 11 ಕೋಟಿ ರೂಪಾಯಿ ವರೆಗಿದೆ. ಈ ಕಾರು ಅತ್ಯಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಘಟನೆ ಹಿನ್ನೆಲೆ

ಕಳೆದ ಭಾನುವಾರ ಮಧ್ಯಾಹ್ನ ಕಾನ್ಪುರದ ವಿಐಪಿ ರಸ್ತೆಯಲ್ಲಿ ಶಿವಂ ಮಿಶ್ರಾ ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಪಾದಚಾರಿಗಳಿಗೆ ಮತ್ತು ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ.

ತಲೆಮರೆಸಿಕೊಂಡಿದ್ದ ಆರೋಪಿ

ಅಪಘಾತ ನಡೆದ ತಕ್ಷಣ ಶಿವಂ ಮಿಶ್ರಾ ಸ್ಥಳದಿಂದ ಪರಾರಿಯಾಗಿದ್ದ. ನಂತರ ಆತ ಆಸ್ಪತ್ರೆಗೆ ದಾಖಲಾಗಿದ್ದ ಎಂದು ತಿಳಿದುಬಂದಿದೆ. ಪೊಲೀಸರು ತೀವ್ರ ಶೋಧ ನಡೆಸಿದ ನಾಲ್ಕು ದಿನಗಳ ನಂತರ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಘಾತದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶ್ರೀಮಂತ ಉದ್ಯಮಿಗಳ ಮಕ್ಕಳು ರಸ್ತೆಯಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪೊಲೀಸರು ಉದ್ಯಮಿಯ ಪುತ್ರನ ಮೇಲೆ ಮೃದು ಧೋರಣೆ ತೋರುತ್ತಿದ್ದಾರೆ ಎಂಬ ಟೀಕೆಗಳೂ ಕೇಳಿಬಂದಿದ್ದವು.

Read More
Next Story