
ಉದ್ಯಮಿಯ ಪುತ್ರನ ಅಟ್ಟಹಾಸ-ಪಾದಚಾರಿಗಳ ಮೇಲೆ ಹರಿದ ಲ್ಯಾಂಬೋರ್ಗಿನಿ
ಕಾನ್ಪುರದಲ್ಲಿ ಅತಿ ವೇಗವಾಗಿ ಬಂದ ಕಾರು ಹಲವು ವಾಹನ ಹಾಗೂ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, 6 ಮಂದಿ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಉದ್ಯಮಿಯೊಬ್ಬರ ಮಗ ಅತಿ ವೇಗವಾಗಿ ಚಲಾಯಿಸುತ್ತಿದ್ದ ಲ್ಯಾಂಬೋರ್ಗಿನಿ ಕಾರು ಪಾದಚಾರಿಗಳಿಗೆ ಹಾಗೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಭಾನುವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ..
ಘಟನೆಯ ವಿವರ
ಕಾನ್ಪುರದ ವಿಐಪಿ ರಸ್ತೆಯಲ್ಲಿರುವ ರೇವ್-3 (Rev-3) ಮಾಲ್ ಬಳಿ ಭಾನುವಾರ ಮಧ್ಯಾಹ್ನ ಸುಮಾರು 3:15ಕ್ಕೆ ಈ ಅಪಘಾತ ನಡೆದಿದೆ. ಪ್ರಸಿದ್ಧ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಎಂಬಾತ ಅತಿ ವೇಗವಾಗಿ ಲ್ಯಾಂಬೋರ್ಗಿನಿ ಅವೆಂಟಡಾರ್ ಕಾರನ್ನು ಚಲಾಯಿಸುತ್ತಿದ್ದ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಈ ಐಷಾರಾಮಿ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಪಾದಚಾರಿಗಳಿಗೆ ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.
ಅಪಘಾತದ ಭೀಕರತೆ
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ಮೊದಲು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ನಂತರ ಪಾರ್ಕ್ ಮಾಡಲಾಗಿದ್ದ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಅದರ ಸವಾರ ಸುಮಾರು 10 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾರೆ. ಸುಮಾರು 6 ಕೋಟಿ ರೂಪಾಯಿ ಬೆಲೆಬಾಳುವ ಈ ಕಾರು ಬೈಕ್‌ನ ಮುಂಭಾಗದ ಚಕ್ರವನ್ನು ಹತ್ತಿಸಿ ಸ್ವಲ್ಪ ದೂರ ಎಳೆದೊಯ್ದು, ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಈ ಅಪಘಾತದಲ್ಲಿ ಕನಿಷ್ಠ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಬೌನ್ಸರ್‌ಗಳ ಅಸಭ್ಯ ವರ್ತನೆ
ಅಪಘಾತ ನಡೆದ ಕೂಡಲೇ ಶಿವಂ ಮಿಶ್ರಾ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅವರ ಹಿಂದೆಯೇ ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ಬೌನ್ಸರ್‌ಗಳು, ಜನರನ್ನು ತಡೆದು ಮಿಶ್ರಾರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು. ರೊಚ್ಚಿಗೆದ್ದ ಜನರು ಕಾರಿನ ಗಾಜುಗಳನ್ನು ಒಡೆದು ಮಿಶ್ರಾರನ್ನು ಹೊರಕ್ಕೆ ಎಳೆದಿದ್ದಾರೆ.
ಡ್ರಂಕ್ & ಡ್ರೈವ್ ಕೇಸ್
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ, ಗಾಯಾಳುಗಳನ್ನು ಹಾಗೂ ಶಿವಂ ಮಿಶ್ರಾರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತಕ್ಕೀಡಾದ ಲ್ಯಾಂಬೋರ್ಗಿನಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಕಾರು ದೆಹಲಿಯ ರೋಹಿಣಿಯಲ್ಲಿ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ. ಶಿವಂ ಮಿಶ್ರಾ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದು, ತನಿಖೆ ಮುಂದುವರಿದಿದೆ.

