Tahsildar, who won Rs 50 lakh, arrested in Rs 2.5 crore flood relief scam
x

ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್

50 ಲಕ್ಷ ರೂ. ಗೆದ್ದಿದ್ದ ಕರೋಡ್​ಪತಿ ಖ್ಯಾತಿಯ ತಹಶೀಲ್ದಾರ್ 2.5 ಕೋಟಿ ರೂ. ನೆರೆ ಪರಿಹಾರ ಹಗರಣದಲ್ಲಿ ಬಂಧನ

ಬರೋಡಾ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDOP) ಅವ್ನೀತ್ ಶರ್ಮಾ ನೇತೃತ್ವದ ತಂಡವು ಅಮಿತಾ ಸಿಂಗ್ ತೋಮರ್ ಅವರನ್ನು ಗುರುವಾರ ಗ್ವಾಲಿಯರ್‌ನ ಚಂದ್ರವದನಿ ನಾಕಾದಲ್ಲಿರುವ ಅವರ ನಿವಾಸದಲ್ಲಿ ಬಂಧಿಸಿದೆ.


Click the Play button to hear this message in audio format

ಜನಪ್ರಿಯ ಟಿವಿ ಶೋ 'ಕೌನ್ ಬನೇಗಾ ಕರೋಡ್‌ಪತಿ'ಯಲ್ಲಿ ಭಾಗವಹಿಸಿ 50 ಲಕ್ಷ ರೂ. ಗೆದ್ದು ದೇಶಾದ್ಯಂತ ಖ್ಯಾತಿ ಗಳಿಸಿದ್ದ ಮಧ್ಯಪ್ರದೇಶದ ಮಹಿಳಾ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ಅವರನ್ನು 2.5 ಕೋಟಿ ರೂ.ಗಳ ಬೃಹತ್ ನೆರೆ ಪರಿಹಾರ ಹಗರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

2021ರಲ್ಲಿ ನಡೆದ ಈ ಹಗರಣಕ್ಕೆ ಸಂಬಂಧಿಸಿದಂತೆ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳು ವಜಾಗೊಂಡ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.

ಗ್ವಾಲಿಯರ್‌ನಲ್ಲಿ ಬಂಧನ, ಜೈಲಿಗೆ ರವಾನೆ

ಬರೋಡಾ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDOP) ಅವ್ನೀತ್ ಶರ್ಮಾ ನೇತೃತ್ವದ ತಂಡವು ಅಮಿತಾ ಸಿಂಗ್ ತೋಮರ್ ಅವರನ್ನು ಗುರುವಾರ ಗ್ವಾಲಿಯರ್‌ನ ಚಂದ್ರವದನಿ ನಾಕಾದಲ್ಲಿರುವ ಅವರ ನಿವಾಸದಲ್ಲಿ ಬಂಧಿಸಿದೆ. ಕರ್ತವ್ಯಕ್ಕೆ ಗೈರಾಗಿದ್ದ ಅವರ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಪತ್ತೆಹಚ್ಚಿ ಈ ಬಂಧನ ಮಾಡಿದ್ದಾರೆ. ವಿಜಯಪುರ ತಹಶೀಲ್ದಾರ್ ಆಗಿದ್ದ ಅವರನ್ನು ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ಅವರು ಬುಧವಾರವಷ್ಟೇ ಹುದ್ದೆಯಿಂದ ವಜಾಗೊಳಿಸಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅವರನ್ನು ನೆರೆಯ ಶಿವಪುರಿ ಜಿಲ್ಲೆಯ ಮಹಿಳಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ

ಈ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಅಮಿತಾ ಸಿಂಗ್ ತೋಮರ್ ಅವರು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಯಾವುದೇ ಮೇಲ್ಮನವಿಗಳು ಪುರಸ್ಕೃತಗೊಳ್ಳದೆ ಎಲ್ಲಾ ಅರ್ಜಿಗಳು ತಿರಸ್ಕೃತಗೊಂಡಿದ್ದವು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಏನಿದು 2.5 ಕೋಟಿ ರೂ.ಗಳ ನೆರೆ ಪರಿಹಾರ ಹಗರಣ?

ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಬರೋಡಾ ತಾಲೂಕಿನಲ್ಲಿ 2021ರಲ್ಲಿ ಸಂಭವಿಸಿದ ಭೀಕರ ಪ್ರವಾಹದ ಸಂತ್ರಸ್ತರಿಗೆ ನೀಡಬೇಕಿದ್ದ ಪರಿಹಾರ ನಿಧಿಯಲ್ಲಿ ಈ ಭಾರಿ ಗೋಲ್‌ಮಾಲ್ ನಡೆದಿದೆ. ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಬರೋಬ್ಬರಿ 2.5 ಕೋಟಿ ರೂಪಾಯಿಗಳನ್ನು ವರ್ಗಾಯಿಸಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ. ತನಿಖೆಯ ವೇಳೆ ತೋಮರ್ ಅವರ ಕುಟುಂಬ ಸದಸ್ಯರ ಖಾತೆಗಳಿಗೂ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಈ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 22 ಪಟ್ವಾರಿಗಳು (ಕಂದಾಯ ಅಧಿಕಾರಿಗಳು) ಹಾಗೂ ಓರ್ವ ತಹಶೀಲ್ದಾರ್ ಅವರನ್ನು ಬಂಧಿಸಲಾಗಿದ್ದು, ಎಫ್‌ಐಆರ್‌ನಲ್ಲಿ 110ಕ್ಕೂ ಹೆಚ್ಚು ಜನರ ಹೆಸರು ಉಲ್ಲೇಖಿಸಲಾಗಿದೆ.

Read More
Next Story