
Euthanasia| ದೇಶದ ಮೊದಲ ದಯಾಮರಣ- ಹರೀಶ್ ರಾಣಾಗೆ ಕುಟುಂಬದ ಕಣ್ಣೀರಿನ ವಿದಾಯ
Harish Rana Euthanasia| 2013 ರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹರೀಶ್ ರಾಣಾಗೆ ಭಾರತದ ಮೊದಲ 'ನಿಷ್ಕ್ರಿಯ ದಯಾಮರಣ ನೀಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
"ಇನ್ನು ಹೋಗುವ ಸಮಯ ಬಂದಿದೆ, ಎಲ್ಲರನ್ನೂ ಕ್ಷಮಿಸಿಬಿಡು..." ಇದು ಗಾಜಿಯಾಬಾದ್‌ನ ಶಾಂತವಾದ ಗಲ್ಲಿಯೊಂದರಲ್ಲಿ 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಹರೀಶ್ ರಾಣಾಗೆ ಆತನ ಕುಟುಂಬ ಮತ್ತು ಬ್ರಹ್ಮಕುಮಾರಿ ಸಹೋದರಿಯೊಬ್ಬರು ನೀಡಿದ ಕಣ್ಣೀರಿನ ವಿದಾಯದ ಮಾತುಗಳು. ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ನಿಷ್ಕ್ರಿಯ ದಯಾಮರಣ ಅನುಮತಿ ಪಡೆದ ನಂತರ, ಹರೀಶ್ ಅವರನ್ನು ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಹಂತ ಹಂತವಾಗಿ ಅವರ ಜೀವ ರಕ್ಷಕ ವ್ಯವಸ್ಥೆಯನ್ನು ಹಿಂಪಡೆಯುತ್ತಿದ್ದಾರೆ.
ಹೃದಯ ವಿದ್ರಾವಕ ವಿದಾಯದ ವಿಡಿಯೋ
ಹರೀಶ್ ರಾಣಾ ಅವರ ಕೊನೆಯ ಕ್ಷಣಗಳ 22 ಸೆಕೆಂಡ್‌ಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಕಣ್ಣಾಲಿಗಳು ಒದ್ದೆಯಾಗುತ್ತಿವೆ. ವಿಡಿಯೋದಲ್ಲಿ ಹರೀಶ್ ತಾಯಿ ತನ್ನ ಮಗನ ಮಗ್ಗುಲಲ್ಲೇ ಕುಳಿತು ದುಃಖತಪ್ತರಾಗಿರುವುದನ್ನು ಕಾಣಬಹುದು. ಬ್ರಹ್ಮಕುಮಾರಿ ಸಂಸ್ಥೆಯ ಸಹೋದರಿಯೊಬ್ಬರು ಹರೀಶ್ ಹಣೆಗೊಂದು ತಿಲಕವಿಟ್ಟು, "ಎಲ್ಲರನ್ನೂ ಕ್ಷಮಿಸು, ಎಲ್ಲರ ಬಳಿ ಕ್ಷಮೆ ಕೇಳು. ಈಗ ಹೋಗುವ ಸಮಯ ಬಂದಿದೆ, ಸರಿನಾ?" ಎಂದು ತಲೆ ಸವರುತ್ತಾ ಹೇಳುವ ದೃಶ್ಯ ಮನಕಲಕುವಂತಿದೆ.
13 ವರ್ಷಗಳ ಸುದೀರ್ಘ ಹೋರಾಟ
ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ, 2013 ರಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಮೆದುಳಿಗೆ ತೀವ್ರವಾಗಿ ಪೆಟ್ಟು ಮಾಡಿಕೊಂಡಿದ್ದರು. ಅಂದಿನಿಂದ ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಮತ್ತು ಆಹಾರಕ್ಕಾಗಿ ಗ್ಯಾಸ್ಟ್ರೋಜೆಜುನೊಸ್ಟೊಮಿ ಟ್ಯೂಬ್‌ಗಳ ನೆರವಿನೊಂದಿಗೆ ಹಾಸಿಗೆಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಮಗನ ಚೇತರಿಕೆಯ ಎಲ್ಲಾ ಭರವಸೆಗಳು ಅಳಿದ ಮೇಲೆ, ಆತನ ನೋವನ್ನು ನೋಡಲಾಗದ ಪೋಷಕರು ದಯಾಮರಣಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
"Forgive everyone… apologize to everyone… it’s time to go now, okay?"
— BALA (@erbmjha) March 15, 2026
Harish Rana has been brought to AIIMS, Delhi. His life support will now be removed.
13 yrs of a family’s hope, prayers and sacrifice ending today 💔 pic.twitter.com/qZt4RYtA3x
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಈ ಸಂದರ್ಭದಲ್ಲಿ ನ್ಯಾಯಾಲಯ ಹೇಳಿದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ. "ಯಾರನ್ನಾದರೂ ಪ್ರೀತಿಸುವುದು ಎಂದರೆ ಕೇವಲ ಸಂತೋಷದ ಸಮಯದಲ್ಲಿ ಮಾತ್ರವಲ್ಲ, ಅವರ ಅತ್ಯಂತ ಕರಾಳ ಮತ್ತು ದುಃಖದ ಕ್ಷಣಗಳಲ್ಲೂ ಜೊತೆಗಿರುವುದು" ಎಂದು ಪೋಷಕರ ತ್ಯಾಗವನ್ನು ಕೋರ್ಟ್ ಶ್ಲಾಘಿಸಿದೆ.
ಅರುಣಾ ಶಾನ್‌ಬಾಗ್ ಕೇಸ್ ಮತ್ತು ಹರೀಶ್ ರಾಣಾ ಕೇಸ್
ಭಾರತದಲ್ಲಿ ದಯಾಮರಣ ಚರ್ಚೆ ಮೊದಲು ಶುರುವಾಗಿದ್ದು 1973 ರಲ್ಲಿ ಅತ್ಯಾಚಾರಕ್ಕೊಳಗಾಗಿ 42 ವರ್ಷಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನರ್ಸ್ ಅರುಣಾ ಶಾನ್‌ಬಾಗ್ ಪ್ರಕರಣದಲ್ಲಿ. ಅಂದು ಸುಪ್ರೀಂ ಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ನೀಡಿತ್ತಾದರೂ, ಅರುಣಾ ಅವರಿಗೆ ಕರುಣಾಮರಣ ನಿರಾಕರಿಸಲಾಗಿತ್ತು. ಆದರೆ, ಈಗ ಹರೀಶ್ ರಾಣಾ ಪ್ರಕರಣದಲ್ಲಿ ದೇಶದ ಮೊದಲ ಪ್ಯಾಸಿವ್ ದಯಾಮರಣ ಜಾರಿಯಾದಂತಾಗಿದೆ.
ಪ್ಯಾಸಿವ್ ದಯಾಮರಣ ಅಂದರೇನು?
ಒಬ್ಬ ವ್ಯಕ್ತಿಯು ಗುಣಪಡಿಸಲಾಗದ ಕಾಯಿಲೆಯಿಂದ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಗ, ಆತನಿಗೆ ನೀಡಲಾಗುತ್ತಿರುವ ಕೃತಕ ಜೀವ ರಕ್ಷಕ ವ್ಯವಸ್ಥೆಗಳನ್ನು (ವೆಂಟಿಲೇಟರ್, ಫೀಡಿಂಗ್ ಟ್ಯೂಬ್ ಇತ್ಯಾದಿ) ಸ್ಥಗಿತಗೊಳಿಸುವ ಮೂಲಕ ಘನತೆಯಿಂದ ಸಾಯಲು ಅವಕಾಶ ನೀಡುವುದೇ ನಿಷ್ಕ್ರಿಯ ದಯಾಮರಣ.

