
ದೇಶದಲ್ಲಿ ನಿರುದ್ಯೋಗ ಪ್ರಮಾಣ ಏರಿಕೆ: ಶೇ. 5ಕ್ಕೆ ತಲುಪಿದ ಉದ್ಯೋಗಾಕಾಂಕ್ಷಿಗಳ ಸಂಖ್ಯೆ
ಭಾರತದ ನಿರುದ್ಯೋಗ ದರ ಜನವರಿ 2026 ರಲ್ಲಿ ಶೇ. 5ಕ್ಕೆ ಏರಿಕೆಯಾಗಿದೆ. NSO ಬಿಡುಗಡೆ ಮಾಡಿದ PLFS ದತ್ತಾಂಶದ ಪ್ರಕಾರ ಗ್ರಾಮೀಣ ಮತ್ತು ಮಹಿಳಾ ನಿರುದ್ಯೋಗದಲ್ಲಿ ಏರಿಕೆ ಕಂಡುಬಂದಿದೆ.
ದೇಶದಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ನಿರುದ್ಯೋಗ ಪ್ರಮಾಣ ಜನವರಿ ತಿಂಗಳಿನಲ್ಲಿ ಶೇ. 5ಕ್ಕೆ ಏರಿಕೆಯಾಗಿದೆ. ಕಳೆದ ಡಿಸೆಂಬರ್ 2025 ರಲ್ಲಿ ಈ ಪ್ರಮಾಣವು ಶೇ. 4.8 ರಷ್ಟಿತ್ತು ಎಂದು ಸರ್ಕಾರದ ಇತ್ತೀಚಿನ ಸಮೀಕ್ಷೆ ತಿಳಿಸಿದೆ. ಸೋಮವಾರ ಬಿಡುಗಡೆಯಾದ 'ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ' (PLFS) ದತ್ತಾಂಶದ ಪ್ರಕಾರ, ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ನಿರುದ್ಯೋಗ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.
ಗ್ರಾಮೀಣ ಭಾಗದಲ್ಲೇ ಹೆಚ್ಚಿನ ಪರಿಣಾಮ
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಈ ಕುರಿತು ವರದಿ ನೀಡಿದ್ದು, ಜನವರಿಯಲ್ಲಿ ಕಂಡುಬಂದ ಈ ಬದಲಾವಣೆಗೆ ಮುಖ್ಯವಾಗಿ ಗ್ರಾಮೀಣ ಭಾಗದ ಚಟುವಟಿಕೆಗಳ ಕುಸಿತವೇ ಕಾರಣ ಎಂದು ತಿಳಿಸಿದೆ.
ಪ್ರಮುಖ ಕಾರಣಗಳು
ದೇಶದಲ್ಲಿ ನಿರುದ್ಯೋಗ ದರ ಏರಿಕೆಯಾಗಲು ಪ್ರಮುಖವಾಗಿ ಹವಾಮಾನ ವೈಪರೀತ್ಯ ಮತ್ತು ಚಳಿಗಾಲದ ತೀವ್ರ ಪ್ರಭಾವವೇ ಕಾರಣವಾಗಿದೆ. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಸುಗ್ಗಿಯ ನಂತರದ ಅವಧಿಯಲ್ಲಿ ಕೆಲಸದ ಲಭ್ಯತೆ ಕಡಿಮೆಯಾಗಿರುವುದು ಹಾಗೂ ಚಳಿಗಾಲದ ಕಾರಣದಿಂದಾಗಿ ನಿರ್ಮಾಣ ಕಾಮಗಾರಿಗಳು, ಕೃಷಿ ಸಂಬಂಧಿತ ಚಟುವಟಿಕೆಗಳು, ಸಾರಿಗೆ ಮತ್ತು ಸಣ್ಣ ಪ್ರಮಾಣದ ವ್ಯಾಪಾರ ವಹಿವಾಟುಗಳು ಮಂದಗತಿಯಲ್ಲಿ ಸಾಗಿರುವುದು ಈ ಏರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಮಹಿಳಾ ನಿರುದ್ಯೋಗಿಗಳ ಪ್ರಮಾಣ ಹೆಚ್ಚು
ವರದಿಯ ಪ್ರಕಾರ, 15 ವರ್ಷ ಮೇಲ್ಪಟ್ಟ ಪುರುಷರಲ್ಲಿ ನಿರುದ್ಯೋಗ ದರವು ಸ್ಥಿರವಾಗಿದೆ. ಆದರೆ, ಮಹಿಳೆಯರಲ್ಲಿ ಉದ್ಯೋಗದ ಕೊರತೆ ಜನವರಿಯಲ್ಲಿ ತುಸು ಹೆಚ್ಚಾಗಿದೆ. ಆದರೂ, ಇದು ಕೇವಲ ಅಲ್ಪಾವಧಿಯ ಏರಿಕೆಯಾಗಿದ್ದು, ಮಹಿಳಾ ಕಾರ್ಮಿಕ ಮಾರುಕಟ್ಟೆಯಲ್ಲಿ ಯಾವುದೇ ದೊಡ್ಡ ಕುಸಿತದ ಮುನ್ಸೂಚನೆಯಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಜನವರಿ ತಿಂಗಳಿನಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ದರವು ಶೇ. 35.1 ರಷ್ಟಿದೆ. ಇದರಲ್ಲಿ ಗ್ರಾಮೀಣ ಭಾಗದ ಮಹಿಳೆಯರ ಪಾಲು ಶೇ. 39.7 ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಇದು ಶೇ. 25.5 ರಷ್ಟಿದೆ. ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಮಹಿಳೆಯರಲ್ಲಿ ನಿರುದ್ಯೋಗ ದರವು ಸ್ವಲ್ಪ ಹೆಚ್ಚಾಗಿದೆಯಾದರೂ, ಇದು ಕಳೆದ ಒಂಬತ್ತು ತಿಂಗಳ ಸಾಮಾನ್ಯ ಮಿತಿಯೊಳಗೇ ಇರುವುದರಿಂದ ಆತಂಕಕಾರಿ ಬದಲಾವಣೆಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಸಮೀಕ್ಷೆಯನ್ನು ದೇಶಾದ್ಯಂತ ಒಟ್ಟು 3,73,158 ಜನರನ್ನು ಸಂದರ್ಶಿಸಿ ಸಿದ್ಧಪಡಿಸಲಾಗಿದೆ. ಜನವರಿ 2025 ರಿಂದ ಜಾರಿಗೆ ಬಂದ ಹೊಸ ಸಮೀಕ್ಷಾ ವಿಧಾನದ ಅಡಿಯಲ್ಲಿ ಬಿಡುಗಡೆಯಾದ 10ನೇ ಮಾಸಿಕ ಬುಲೆಟಿನ್ ಇದಾಗಿದೆ.

