
ಪ್ರೇಮಿಗಳ ದಿನದಂದೇ ಗರ್ಭಿಣಿ ಪತ್ನಿಯ ಹತ್ಯೆ: ದರೋಡೆ ನಾಟಕವಾಡಿದ ಪತಿ ಪೊಲೀಸರ ವಶಕ್ಕೆ
ಹರಿಯಾಣದಲ್ಲಿ ಪತ್ನಿಯ ನಡವಳಿಕೆ ಶಂಕಿಸಿ ಪತಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ದರೋಡೆ ನಾಟಕವಾಡಿದ ಪತಿಯನ್ನು ಪೊಲೀಸರು ಬಂಧಿಸಿದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಪ್ರೇಮಿಗಳ ದಿನದಂದು ಪ್ರೀತಿಯಿಂದ ಸಂಜೆ ಕಳೆಯಲು ತನ್ನ ಗರ್ಭಿಣಿ ಪತ್ನಿಯನ್ನು ಊಟಕ್ಕೆ ಕರೆದೊಯ್ದ ಪತಿಯೊಬ್ಬ, ಕೊನೆಗೆ ಆಕೆಯ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಬಹದ್ದೂರ್‌ಗಢದಲ್ಲಿ ನಡೆದಿದೆ. ಹತ್ಯೆಯ ನಂತರ ದರೋಡೆಯ ಕಟ್ಟುಕಥೆ ಹೇಳಿ ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ ಆರೋಪಿ ಪತಿ ಅನ್ಶುಲ್ ಧವನ್‌ನನ್ನು ಪೊಲೀಸರು ಕೇವಲ 18 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದರೋಡೆಯ ನಾಟಕವಾಡಿದ ಪತಿ!
ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಅನ್ಶುಲ್ ಪೊಲೀಸರಿಗೆ ಕರೆ ಮಾಡಿ, "ಕೆಲವು ವ್ಯಕ್ತಿಗಳು ನಮ್ಮ ಕಾರನ್ನು ತಡೆದು, ಹಲ್ಲೆ ನಡೆಸಿ, ಹೆಂಡತಿಯನ್ನು ಕೊಂದು ಕಾರನ್ನು ಕದ್ದೊಯ್ದಿದ್ದಾರೆ" ಎಂದು ಆತಂಕದಿಂದ ತಿಳಿಸಿದ್ದನು. ಆದರೆ, ಸ್ಥಳಕ್ಕೆ ಧಾವಿಸಿದ ಝಜ್ಜರ್ ಪೊಲೀಸರು ಪರಿಶೀಲನೆ ನಡೆಸಿದಾಗ ಅನ್ಶುಲ್‌ನ ಹೇಳಿಕೆಗಳಲ್ಲಿ ಹೊಂದಾಣಿಕೆಯಿಲ್ಲದಿರುವುದು ಕಂಡುಬಂದಿತು. ದಾಳಿಕೋರರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಆತ ತಡಬಡಾಯಿಸತೊಡಗಿದ್ದರಿಂದ ಪೊಲೀಸರಿಗೆ ಅನುಮಾನ ಶುರುವಾಯಿತು.
ಕೊಲೆಗೆ ಕಾರಣವೇನು?
ಪೊಲೀಸರ ಬಿಗಿ ತನಿಖೆ ಮತ್ತು ಕಠಿಣ ಪ್ರಶ್ನೆಗಳ ಎದುರು ಅನ್ಶುಲ್ ಅಂತಿಮವಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ಮೃತ ಮಹಾಕ್ ಗುರುಗ್ರಾಮದ ಎಚ್‌ಡಿಎಫ್‌ಸಿ (HDFC) ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ನಡವಳಿಕೆಯ ಬಗ್ಗೆ ಅನ್ಶುಲ್ ಮೊದಲಿನಿಂದಲೂ ಅನುಮಾನ ಇತ್ತು. ಈ ವಿಚಾರವಾಗಿ ದಂಪತಿಗಳ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಇದೇ ಅನುಮಾನವೇ ಅಂತಿಮವಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ಹತ್ಯೆ ಮಾಡಿದ್ದು ಹೇಗೆ?
ಆರೋಪಿ ಅನ್ಶುಲ್ ಅತ್ಯಂತ ವ್ಯವಸ್ಥಿತವಾಗಿ ಈ ಹತ್ಯೆಗೆ ಸಂಚು ರೂಪಿಸಿದ್ದನು. ಬೆರಳಚ್ಚುಗಳು ಸಿಗದಂತೆ ತಡೆಯಲು ಆತ ಕೈಗವಸು ಧರಿಸಿದ್ದನು. ಮೊದಲು ಮಹಾಕ್‌ಳ ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾನೆ. ನಂತರ ಕತ್ತರಿಯಿಂದ ಆಕೆಯ ಗಂಟಲನ್ನು ಸೀಳಿ ಕ್ರೂರವಾಗಿ ಕೊಂದಿದ್ದಾನೆ.
ಹಿಸಾರ್ ನಿವಾಸಿ ಅನ್ಶುಲ್ ಮತ್ತು ಹನ್ಸಿ ನಿವಾಸಿ ಮಹಾಕ್ ಅವರ ವಿವಾಹವು ಕಳೆದ ವರ್ಷ ಸೆಪ್ಟೆಂಬರ್ 25ರಂದು ನಡೆದಿತ್ತು. ಮೊದಲಿನಿಂದಲೂ ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಮಹಾಕ್ ಅವರ ತಂದೆ ಕೃಷ್ಣ ಕಥುರಿಯಾ, ಇದೀಗ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
18 ಗಂಟೆಯಲ್ಲಿ ಭೇದಿಸಿದ ಪೊಲೀಸರು
ದರೋಡೆಕೋರರ ಮೇಲೆ ಗೂಬೆ ಕೂರಿಸಿ ತಪ್ಪಿಸಿಕೊಳ್ಳುವ ಅನ್ಶುಲ್‌ನ ಯೋಜನೆ ಪೊಲೀಸರ ಚಾಕಚಕ್ಯತೆಯಿಂದ ವಿಫಲವಾಗಿದೆ. ಈ ಘಟನೆಯಿಂದ ಹರಿಯಾಣದಲ್ಲಿ ಸಂಚಲನ ಮೂಡಿದ್ದು, ಪ್ರೇಮಿಗಳ ದಿನದ ಸಂಜೆ ಇಂತಹ ದುರಂತದಲ್ಲಿ ಅಂತ್ಯಗೊಂಡಿರುವುದು ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

