Harish Rana| 13 ವರ್ಷಗಳ ಜೀವನ್ಮರಣ ಹೋರಾಟ ಅಂತ್ಯ;  ಕೊನೆಯುಸಿರೆಳೆದ ಹರೀಶ್‌ ರಾಣಾ
x

ಹರೀಶ್‌ ರಾಣಾ ಅವರ ಅಂತ್ಯಕ್ರಿಯೆ ದೆಹಲಿಯ ಗ್ರೀನ್ ಪಾರ್ಕ್ ಚಿತಾಗಾರದಲ್ಲಿ ನೆರವೇರಿತು. 

Harish Rana| 13 ವರ್ಷಗಳ ಜೀವನ್ಮರಣ ಹೋರಾಟ ಅಂತ್ಯ; ಕೊನೆಯುಸಿರೆಳೆದ ಹರೀಶ್‌ ರಾಣಾ

ಸುಮಾರು 13 ವರ್ಷಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 32 ವರ್ಷದ ಹರೀಶ್ ರಾಣಾ ಅವರ ಸುದೀರ್ಘ ಹೋರಾಟ ಅಂತ್ಯಗೊಂಡಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.


13 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 32 ವರ್ಷದ ಹರೀಶ್ ರಾಣಾ ಅವರು ಮಂಗಳವಾರ ಮಧ್ಯಾಹ್ನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಭಾರತದ ನ್ಯಾಯಾಂಗ ಇತಿಹಾಸದಲ್ಲಿ 'ದಯಾಮರಣ'ಕ್ಕೆ ಅಧಿಕೃತವಾಗಿ ಅನುಮತಿ ಪಡೆದ ಮೊದಲ ವ್ಯಕ್ತಿ ಎಂಬ ನೋವಿನ ಇತಿಹಾಸದೊಂದಿಗೆ ಇಹಲೋಕ ತ್ಯಜಿಸಿದ್ದಾರೆ.

ಮೂಲತಃ ದೆಹಲಿಯವರಾದ ಹರೀಶ್ ರಾಣಾ ಅವರು 2013 ರಲ್ಲಿ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಓದುತ್ತಿದ್ದರು. ಆ ವರ್ಷದ ರಕ್ಷಾಬಂಧನದ ದಿನದಂದು ಅವರು ವಾಸವಿದ್ದ ಪಿಜಿ ಕಟ್ಟಡದ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದರು. ಈ ಭೀಕರ ಅಪಘಾತದಲ್ಲಿ ಅವರ ಮೆದುಳಿಗೆ ತೀವ್ರ ಪೆಟ್ಟಾಗಿದ್ದರಿಂದ ಸಂಪೂರ್ಣ ಪಾರ್ಶ್ವವಾಯುವಿಗೆ ತುತ್ತಾಗಿ ಕೋಮಾ ಸ್ಥಿತಿಗೆ ತಲುಪಿದ್ದರು. ಅಂದಿನಿಂದ ಸತತ 13 ವರ್ಷಗಳ ಕಾಲ ಅವರು ಪೈಪ್‌ಗಳ ಮೂಲಕ ಆಹಾರ ಮತ್ತು ನೀರನ್ನು ಪಡೆಯುತ್ತಾ ಹಾಸಿಗೆಯಲ್ಲೇ ಕಾಲ ಕಳೆದಿದ್ದರು.

ನ್ಯಾಯಾಲಯದ ಐತಿಹಾಸಿಕ ತೀರ್ಪು

ಮಗನ ಚಿಕಿತ್ಸೆಗಾಗಿ ತಮ್ಮ ಆಸ್ತಿಯನ್ನೆಲ್ಲಾ ಮಾರಿಕೊಂಡಿದ್ದ ವೃದ್ಧ ಪೋಷಕರು, ಹರೀಶ್ ಅನುಭವಿಸುತ್ತಿದ್ದ ನರಕಯಾತನೆ ಕೊನೆಗಾಣಿಸಲು ದಯಾಮರಣ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು, ಹರೀಶ್ ಅವರ ಸ್ಥಿತಿ ಸುಧಾರಿಸಲು ಸಾಧ್ಯವೇ ಇಲ್ಲ ಎಂಬ ವೈದ್ಯಕೀಯ ವರದಿ ಆಧರಿಸಿ ಮಾರ್ಚ್ 11 ರಂದು ಐತಿಹಾಸಿಕ ತೀರ್ಪು ನೀಡಿತ್ತು.

ಸಂವಿಧಾನದ 21ನೇ ವಿಧಿಯಡಿ "ಗೌರವಯುತವಾಗಿ ಸಾಯುವ ಹಕ್ಕು" ಪ್ರತಿಯೊಬ್ಬರಿಗೂ ಇದೆ ಎಂದು ತಿಳಿಸಿದ ನ್ಯಾಯಾಲಯ, ಹರೀಶ್ ಅವರಿಗೆ ನೀಡಲಾಗುತ್ತಿದ್ದ ಕೃತಕ ಜೀವಧಾರಕ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಅನುಮತಿ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಹರೀಶ್ ಅವರನ್ನು ಏಮ್ಸ್ ಆಸ್ಪತ್ರೆಯ ಉಪಶಾಮಕ ಆರೈಕೆ ವಿಭಾಗಕ್ಕೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಅವರಿಗೆ ನೀಡಲಾಗುತ್ತಿದ್ದ ಕೃತಕ ಆಹಾರ ಮತ್ತು ನೀರನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲಾಯಿತು.

ಅಂತಿಮವಾಗಿ ಮಾರ್ಚ್ 24ರಂದು ಹರೀಶ್ ರಾಣಾ ಅವರು ಶಾಂತಿಯುತವಾಗಿ ಕೊನೆಯುಸಿರೆಳೆದರು. ಸಾವಿನ ನಂತರವೂ ಅವರ ಪೋಷಕರು ಮಾನವೀಯತೆ ಮೆರೆದಿದ್ದು, ಹರೀಶ್ ಅವರ ಕಣ್ಣುಗಳು ಮತ್ತು ಹೃದಯದ ಕವಾಟಗಳನ್ನು ದಾನ ಮಾಡಿದ್ದಾರೆ. ದೆಹಲಿಯ ಗ್ರೀನ್ ಪಾರ್ಕ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.

Read More
Next Story