ಕರ್ನಾಟಕದ ಅಭ್ಯರ್ಥಿಯ ರ್‍ಯಾಂಕ್‌ ತನ್ನದೆಂದು ನಂಬಿಸಿ ಚಳ್ಳೆಹಣ್ಣು ತಿನ್ನಿಸಿದ ನಕಲಿ UPSC ಸಾಧಕ
x
ಬಿಹಾರದ ನಕಲಿ ಯುಪಿಎಸ್‌ಸಿ ಅಭ್ಯರ್ಥಿ

ಕರ್ನಾಟಕದ ಅಭ್ಯರ್ಥಿಯ ರ್‍ಯಾಂಕ್‌ ತನ್ನದೆಂದು ನಂಬಿಸಿ ಚಳ್ಳೆಹಣ್ಣು ತಿನ್ನಿಸಿದ ನಕಲಿ UPSC ಸಾಧಕ

Fake UPSC candidate| ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯ 440ನೇ ರ್‍ಯಾಂಕ್ ತನ್ನದೆಂದು ಬಿಹಾರದ ಶೇಖ್‌ಪುರದ ರಂಜಿತ್ ಕುಮಾರ್ ಎಂಬಾತ ಇಡೀ ಊರನ್ನೇ ನಂಬಿಸಿ ಸನ್ಮಾನ ಮಾಡಿಸಿಕೊಂಡಿದ್ದ. ಆದರೆ ಅಸಲಿ ಸಂಗತಿ ಬೇರೆಯೇ ಇದೆ.


Click the Play button to hear this message in audio format

ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಹಾರದ ಶೇಖ್‌ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕರ್ನಾಟಕದ ಅಭ್ಯರ್ಥಿಯೊಬ್ಬರು ಪಡೆದ ರ್‍ಯಾಂಕ್ ತನ್ನದೆಂದು ಸುಳ್ಳು ಹೇಳಿ, ಇಡೀ ಊರನ್ನೇ ನಂಬಿಸಿ ಸನ್ಮಾನ ಮಾಡಿಸಿಕೊಂಡಿದ್ದ ಯುವಕನ ಬಣ್ಣ ಈಗ ಬಯಲಾಗಿದೆ.

ಭರ್ಜರಿ ಸನ್ಮಾನ, ಸ್ಫೂರ್ತಿದಾಯಕ ಭಾಷಣ!

ಮಾರ್ಚ್ 6 ರಂದು ಫಲಿತಾಂಶ ಬಂದಾಗ ಬಿಹಾರದ ರಂಜಿತ್ ಕುಮಾರ್ ಎಂಬಾತ ತನಗೆ 440ನೇ ರ್‍ಯಾಂಕ್ ಬಂದಿದೆ ಎಂದು ಹಬ್ಬಿಸಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಹಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸರು ಆತನಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಅದ್ಧೂರಿಯಾಗಿ ಸನ್ಮಾನಿಸಿದ್ದರು. ತನ್ನ ಸನ್ಮಾನ ಸಮಾರಂಭದಲ್ಲಿ ಭಾಷಣ ಮಾಡಿದ್ದ ರಂಜಿತ್, "ಇತರರು 18 ಗಂಟೆ ಓದಿದರೆ, ನಾನು ಕೇವಲ 4 ಗಂಟೆ ಓದಿ ಈ ಸಾಧನೆ ಮಾಡಿದ್ದೇನೆ" ಎಂದು ಎಪಿಜೆ ಅಬ್ದುಲ್ ಕಲಾಂ ಅವರ ಮಾತುಗಳನ್ನು ಉಲ್ಲೇಖಿಸಿ ಯುವಕರಿಗೆ ಸ್ಫೂರ್ತಿ ತುಂಬಿದ್ದ.

ಬಣ್ಣ ಬಯಲಾಗಿದ್ದು ಹೇಗೆ?

ಮಾರ್ಚ್ 10 ರಂದು ಗ್ರಾಮಸ್ಥರು ಯುಪಿಎಸ್‌ಸಿ ಮೆರಿಟ್ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅನುಮಾನ ಮೂಡಿದೆ. ಹೆಚ್ಚಿನ ತನಿಖೆ ನಡೆಸಿದಾಗ, 440ನೇ ರ್‍ಯಾಂಕ್ ಪಡೆದ ರಂಜಿತ್ ಕುಮಾರ್ ಆರ್. ಎಂಬುವವರು ಕರ್ನಾಟಕದವರು ಎಂಬ ಸತ್ಯ ಹೊರಬಂದಿದೆ. ಕೂಡಲೇ ಪೊಲೀಸರು ರಂಜಿತ್‌ನನ್ನು ವಿಚಾರಣೆಗೆ ಕರೆದಿದ್ದಾರೆ. ಅಂದಿನಿಂದ ಆತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.

ಏಮ್ಸ್‌ ವೈದ್ಯೆಯ ಹೆಸರಲ್ಲೂ ವಂಚನೆ?

ಇದೇ ವೇಳೆ ಗಾಜಿಪುರದ ಆಕಾಂಕ್ಷಾ ಎಂಬ ವೈದ್ಯೆ ವಿಡಿಯೋ ಒಂದನ್ನು ರಿಲೀಸ್‌ ಮಾಡಿದ್ದಾರೆ. "ನಾನು ಪಾಟ್ನಾ ಐಮ್ಸ್‌ನಲ್ಲಿ ಸ್ತ್ರೀರೋಗ ತಜ್ಞೆಯಾಗಿ ಕೆಲಸ ಮಾಡುತ್ತಿದ್ದೇನೆ. ಯುಪಿಎಸ್‌ಸಿಯಲ್ಲಿ ನಾನು 301ನೇ ರ್‍ಯಾಂಕ್ ಪಡೆದಿದ್ದೇನೆ. ಆದರೆ ಮತ್ತೊಬ್ಬ ಯುವತಿ ಇದೇ ರ್‍ಯಾಂಕ್ ತನ್ನದು ಎಂದು ಹೇಳಿಕೊಳ್ಳುತ್ತಿದ್ದಾಳೆ. ಅಡ್ಮಿಟ್ ಕಾರ್ಡ್‌ನಲ್ಲಿರುವ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿದರೆ ಸತ್ಯ ಏನೆಂದು ತಿಳಿಯುತ್ತದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತರಬೇತಿ ಕೇಂದ್ರಕ್ಕೂ ನಕಲಿ ಅಭ್ಯರ್ಥಿ ಲಗ್ಗೆ!

ಇಂತಹ ವಂಚನೆ ಪ್ರಕರಣಗಳು ಇಷ್ಟಕ್ಕೇ ನಿಂತಿಲ್ಲ. ಕಳೆದ ಜನವರಿಯಲ್ಲಿ ವ್ಯಕ್ತಿಯೊಬ್ಬ ನಕಲಿ ಅಂಕಪಟ್ಟಿ ಹಿಡಿದು ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (LBSNAA) ಗೆ ತರಬೇತಿಗಾಗಿ ತೆರಳಿದ್ದ. ತನಿಖೆ ನಡೆಸಿದಾಗ ಆತನೇ ಒಂದು ವಂಚಕ ಜಾಲದ ಬಲಿಪಶು ಎಂಬುದು ತಿಳಿದುಬಂದಿದೆ. ಆತನಿಂದ 27,000 ರೂಪಾಯಿ ಪಡೆದಿದ್ದ ವಂಚಕರು, ವಾಟ್ಸಾಪ್‌ನಲ್ಲಿ ನಕಲಿ ಫಲಿತಾಂಶ ಕಳುಹಿಸಿ ಆತನನ್ನು ನಂಬಿಸಿದ್ದರು. ಯುಪಿಎಸ್‌ಸಿ ಪರೀಕ್ಷೆಯಂತಹ ಉನ್ನತ ಮಟ್ಟದ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ ಮೂಲಕವೇ ಖಚಿತಪಡಿಸಿಕೊಳ್ಳುವುದು ಒಳಿತು. ಕೇವಲ ವೈಯಕ್ತಿಕ ಹೇಳಿಕೆಗಳನ್ನು ನಂಬಿ ಸನ್ಮಾನ ಮಾಡುವುದು ಅಧಿಕಾರಿಗಳಿಗೂ ಈಗ ಮುಜುಗರ ತಂದಿಟ್ಟಿದೆ.

Read More
Next Story