
ಸಾಂದರ್ಭಿಕ ಚಿತ್ರ
JOB News | 1358 ವೈದ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, MBBS ಪದವೀಧರರಿಗೆ ಸುವರ್ಣಾವಕಾಶ!
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿರಬೇಕು. ಆಗಸ್ಟ್ 1 ರ ವೇಳೆಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 32 ವರ್ಷ ಮೀರಿರಬಾರದು.
ಕೇಂದ್ರ ಲೋಕಸೇವಾ ಆಯೋಗವು 2026ನೇ ಸಾಲಿನ ಸಂಯೋಜಿತ ವೈದ್ಯಕೀಯ ಸೇವೆಗಳ (CMS) ಪರೀಕ್ಷೆಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ಮೂಲಕ ಅಖಿಲ ಭಾರತ ಮಟ್ಟದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 1,358 ವೈದ್ಯಕೀಯ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸರ್ಕಾರಿ ವೃತ್ತಿಜೀವನವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾ. 31ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ
ಒಟ್ಟು 1,358 ಹುದ್ದೆಗಳಲ್ಲಿ ವೈದ್ಯಕೀಯ ಅಧಿಕಾರಿ 864 ಹುದ್ದೆಗಳು, ಸಹಾಯಕ ವಿಭಾಗೀಯ ವೈದ್ಯಕೀಯ ಅಧಿಕಾರಿ (ರೈಲ್ವೆ) 450 ಹುದ್ದೆಗಳು, ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿ 14 ಹುದ್ದೆಗಳು ಹಾಗೂ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿ ಗ್ರೇಡ್-II 30 ಹುದ್ದೆಗಳನ್ನು ವಿಂಗಡಿಸಲಾಗಿದೆ.
ಅರ್ಹತೆ ಮತ್ತು ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿರಬೇಕು. ಆಗಸ್ಟ್ 1 ರ ವೇಳೆಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 32 ವರ್ಷ ಮೀರಿರಬಾರದು. ನಿಯಮಾನುಸಾರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 200 ರೂ. ಪರೀಕ್ಷಾ ಶುಲ್ಕವಿದ್ದು, ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕವಿನಾಯಿತಿ ನೀಡಲಾಗಿದೆ.
ನೇಮಕಾತಿ ಪ್ರಕ್ರಿಯೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯು ಆಗಸ್ಟ್ 2, 2026 ರಂದು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತರು ಯುಪಿಎಸ್ ಅಧಿಕೃತ ವೆಬ್‌ಸೈಟ್ upsconline.nic.in ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.
- ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಇರಬೇಕು. ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
- ಯುಪಿಎಸ್‌ಸಿ ವೈದ್ಯಕೀಯ ಅಧಿಕಾರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಯುಪಿಎಸ್‌ಸಿ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- ಕೊನೆಯದಾಗಿ ಯುಪಿಎಸ್‌ಸಿ ನೇಮಕಾತಿ 2026 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ. ಅಭ್ಯರ್ಥಿಗಳು ಅರ್ಜಿ ಸಂಖ್ಯೆ ಬರೆದಿಟ್ಟುಕೊಳ್ಳುವುದು ಅಗತ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

