ದೆಹಲಿ AI ಶೃಂಗಸಭೆಯಲ್ಲಿ ಅರೆನಗ್ನ ಪ್ರತಿಭಟನೆ: ಯೂತ್ ಕಾಂಗ್ರೆಸ್ ಅಧ್ಯಕ್ಷ ಅರೆಸ್ಟ್‌
x
ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಬಂಧನಕ್ಕೊಳಗಾಗಿದ್ದಾರೆ.

ದೆಹಲಿ AI ಶೃಂಗಸಭೆಯಲ್ಲಿ 'ಅರೆನಗ್ನ' ಪ್ರತಿಭಟನೆ: ಯೂತ್ ಕಾಂಗ್ರೆಸ್ ಅಧ್ಯಕ್ಷ ಅರೆಸ್ಟ್‌

ದೇಶದ ರಾಜಧಾನಿಯಲ್ಲಿ ನಡೆದ ವಿಶ್ವ ಎಐ ಶೃಂಗಸಭೆಯ ವೇಳೆ ಭಾರತ್ ಮಂಟಪದ ಮುಂದೆ ನಡೆದ ಶರ್ಟ್‌ ಇಲ್ಲದೇ ಪ್ರತಿಭಟನೆಗೆ ಸಂಬಂಧಿಸಿದಂತೆ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ಬಂಧಿಸಿದ್ದಾರೆ.


ದೇಶದ ರಾಜಧಾನಿಯಲ್ಲಿ ನಡೆದ ವಿಶ್ವ ಎಐ (AI) ಶೃಂಗಸಭೆಯ ವೇಳೆ ಭಾರತ್ ಮಂಟಪದ ಮುಂದೆ ಅರೆನಗ್ನ ಪ್ರತಿಭಟನೆ ಮೂಲಕ ನಡೆದ ಹೈಡ್ರಾಮಾಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ಬಂಧಿಸಿದ್ದಾರೆ. ಈ ಪ್ರತಿಭಟನೆಯ ಹಿಂದೆ ಉದಯ್ ಭಾನು ಅವರೇ ಪ್ರಮುಖ ಸಂಚುಗಾರ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ

ಸೋಮವಾರವಷ್ಟೇ ವಿಚಾರಣೆಗಾಗಿ ಉದಯ್ ಭಾನು ಅವರಿಗೆ ತಿಲಕ್ ಮಾರ್ಗ್ ಪೊಲೀಸ್ ಠಾಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿತ್ತು. ಪೊಲೀಸರ ಪ್ರಕಾರ, ಪ್ರತಿಭಟನೆಯ ಸಂಪೂರ್ಣ ಯೋಜನೆ ಮತ್ತು ಮಾಹಿತಿಯು ಇವರ ಬಳಿಯಿತ್ತು. ಆದರೆ ವಿಚಾರಣೆಯ ಸಮಯದಲ್ಲಿ ಉದಯ್ ಭಾನು ಪೊಲೀಸರಿಗೆ ಸರಿಯಾಗಿ ಸಹಕರಿಸದೆ, ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಅವರ ಪ್ರಕಾರ, ಪೊಲೀಸರು ಚಿಬ್ ಅವರನ್ನು ಮುಂಜಾನೆ 4:30ಕ್ಕೆ ವಶಕ್ಕೆ ಪಡೆದಿದ್ದು, ಸುಮಾರು 20 ಗಂಟೆಗಳ ಕಾಲ ಕಸ್ಟಡಿಯಲ್ಲಿದ್ದಾರೆ.

ಪ್ರತಿಭಟನೆಯ ಹಿನ್ನೆಲೆ

ದೆಹಲಿಯ ಭಾರತ್ ಮಂಟಪದಲ್ಲಿ ನಡೆದ 'ಎಐ ಇಂಪ್ಯಾಕ್ಟ್ ಇಂಡಿಯಾ ಶೃಂಗಸಭೆ'ಯ ವೇಳೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶರ್ಟ್‌ಗಳನ್ನು ಬಿಚ್ಚಿ ಅರೆನಗ್ನರಾಗಿ ಪ್ರತಿಭಟನೆ ನಡೆಸಿದ್ದರು. ತಮ್ಮ ಮೈಮೇಲೆ "Compromised PM" (ರಾಜಿ ಮಾಡಿಕೊಂಡ ಪ್ರಧಾನಿ) ಎಂದು ಬರೆದುಕೊಂಡು ಘೋಷಣೆಗಳನ್ನು ಕೂಗಿದ್ದರು. "ಪ್ರಧಾನಿಯವರು ಎಐ ಶೃಂಗಸಭೆಯಲ್ಲಿ ದೇಶದ ಅಸ್ಮಿತೆಯನ್ನು ಮಾರಾಟ ಮಾಡಿದ್ದಾರೆ" ಎಂದು ಯೂತ್ ಕಾಂಗ್ರೆಸ್ ಈ ಸಂದರ್ಭದಲ್ಲಿ ಆರೋಪಿಸಿತ್ತು.

ಬಿಜೆಪಿ ಆಕ್ರೋಶ

ಈ ಬಂಧನದ ಬೆನ್ನಲ್ಲೇ ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿರುವ ಅವರು, "ರಾಹುಲ್ ಗಾಂಧಿಯವರ ಭಾರತ್ ವಿರೋಧಿ 'ಬಬ್ಬರ್ ಶೇರ್' ಈಗ ಬಂಧನಕ್ಕೊಳಗಾಗಿದ್ದಾರೆ. ದೇಶದ ಬೆಳವಣಿಗೆಯನ್ನು ವಿರೋಧಿಸುವ ಮತ್ತು ಅರೆನಗ್ನ ಪ್ರತಿಭಟನೆಯ ಮೂಲಕ ದೇಶಕ್ಕೆ ಅವಮಾನ ಮಾಡುವ ಕಾಂಗ್ರೆಸ್ ಅನ್ನು ಯುವ ಭಾರತ ದ್ವೇಷಿಸುತ್ತದೆ. ಜೈಲಿನಲ್ಲಿ ಇವರಿಗೆ ತಕ್ಕ ಚಿಕಿತ್ಸೆ ಸಿಗಲಿದೆ" ಎಂದು ಕಿಡಿಕಾರಿದ್ದಾರೆ.

ಈ ಪ್ರತಿಭಟನೆಯ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ರಾಹುಲ್ ಗಾಂಧಿ ಅವರು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

Read More
Next Story