
ಸರ್ಕಾರದ ಈ ಆದೇಶಕ್ಕೆ ಇಂಡಿಗೋ, ಏರ್ ಇಂಡಿಯಾ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್‌ನಂತಹ ಪ್ರಮುಖ ಸಂಸ್ಥೆಗಳನ್ನು ಪ್ರತಿನಿಧಿಸುವ ಫೆಡರೇಶನ್ ಆಫ್ ಇಂಡಿಯನ್ ಏರ್‌ಲೈನ್ಸ್ (FIA) ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ವಿಮಾನಗಳಲ್ಲಿ ಶೇ. 60ರಷ್ಟು ಆಸನಗಳ ಉಚಿತ ಆಯ್ಕೆ: ಆದೇಶಕ್ಕೆ ತಡೆ ನೀಡಿದ ಕೇಂದ್ರ
ಸರ್ಕಾರದ ಈ ಆದೇಶಕ್ಕೆ ಇಂಡಿಗೋ, ಏರ್ ಇಂಡಿಯಾ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್‌ನಂತಹ ಪ್ರಮುಖ ಸಂಸ್ಥೆಗಳನ್ನು ಪ್ರತಿನಿಧಿಸುವ ಫೆಡರೇಶನ್ ಆಫ್ ಇಂಡಿಯನ್ ಏರ್‌ಲೈನ್ಸ್ (FIA) ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ವಿಮಾನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ ಶೇಕಡಾ 60ರಷ್ಟು ಆಸನಗಳನ್ನು ಉಚಿತವಾಗಿ ಆಯ್ಕೆ ಮಾಡಿಕೊಳ್ಳುವ ನಿಯಮಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಕಳೆದ ಮಾರ್ಚ್ 18 ರಂದು ನಾಗರಿಕ ವಿಮಾನಯಾನ ಸಚಿವಾಲಯವು, ಪ್ರತಿ ವಿಮಾನದಲ್ಲಿ ಕನಿಷ್ಠ ಶೇ. 60ರಷ್ಟು ಆಸನಗಳನ್ನು ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಆಯ್ಕೆ ಮಾಡಲು ಅವಕಾಶ ನೀಡಬೇಕು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ಸೂಚಿಸಿತ್ತು.
ಏಪ್ರಿಲ್ 20 ರಿಂದ ಜಾರಿಗೆ ಬರಬೇಕಿದ್ದ ಈ ನಿಯಮವನ್ನು, ಹೆಚ್ಚಿನ ಪರಿಶೀಲನೆಗಾಗಿ ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ವಿಮಾನಯಾನ ಸಂಸ್ಥೆಗಳ ವಿರೋಧ ಹಾಗೂ ಕಳವಳ
ಸರ್ಕಾರದ ಈ ಆದೇಶಕ್ಕೆ ಇಂಡಿಗೋ, ಏರ್ ಇಂಡಿಯಾ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್‌ನಂತಹ ಪ್ರಮುಖ ಸಂಸ್ಥೆಗಳನ್ನು ಪ್ರತಿನಿಧಿಸುವ ಫೆಡರೇಶನ್ ಆಫ್ ಇಂಡಿಯನ್ ಏರ್‌ಲೈನ್ಸ್ (FIA) ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ನಿಯಮ ಜಾರಿಗೆ ಬಂದರೆ ವಿಮಾನಯಾನ ಸಂಸ್ಥೆಗಳ ವಾಣಿಜ್ಯ ಮತ್ತು ಕಾರ್ಯಾಚರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅವು ಆತಂಕ ವ್ಯಕ್ತಪಡಿಸಿದ್ದವು.
ಉಚಿತ ಆಸನಗಳ ನಿಯಮದಿಂದಾಗಿ ನಷ್ಟವನ್ನು ಸರಿದೂಗಿಸಲು ವಿಮಾನ ಪ್ರಯಾಣ ದರವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂಬುದು ಸಂಸ್ಥೆಗಳ ವಾದವಾಗಿತ್ತು. ಅಲ್ಲದೆ, ಇದು ಹಾಲಿ ಇರುವ ಮುಕ್ತ ದರ ನೀತಿಗೆ ವಿರುದ್ಧವಾಗಿದೆ ಎಂದೂ ಅವು ವಾದಿಸಿದ್ದವು. ವ
ಪ್ರಸ್ತುತ ಇರುವ ಆಸನ ಆಯ್ಕೆ ನಿಯಮಗಳು
ಪ್ರಸ್ತುತ, ವಿಮಾನದಲ್ಲಿ ಕೇವಲ 5 ರಿಂದ 15 ಪ್ರತಿಶತದಷ್ಟು (ಕೆಲವು ವರದಿಗಳ ಪ್ರಕಾರ ಶೇ.20) ಆಸನಗಳನ್ನು ಮಾತ್ರ ವೆಬ್ ಚೆಕ್-ಇನ್ ಸಮಯದಲ್ಲಿ ಉಚಿತವಾಗಿ ಆಯ್ಕೆ ಮಾಡಿಕೊಳ್ಳಬಹುದು. ಉಳಿದ ಆಸನಗಳಿಗೆ ವಿಮಾನಯಾನ ಸಂಸ್ಥೆಗಳು 200 ರೂಪಾಯಿಯಿಂದ ಹಿಡಿದು 2,100 ರೂಪಾಯಿವರೆಗೆ ಹೆಚ್ಚುವರಿ ಶುಲ್ಕ ವಿಧಿಸುತ್ತವೆ. ವಿಶೇಷವಾಗಿ ಮುಂಭಾಗದ ಸಾಲುಗಳು ಮತ್ತು ಕಿಟಕಿ ಪಕ್ಕದ ಸೀಟುಗಳಿಗೆ ಹೆಚ್ಚಿನ ದರ ನಿಗದಿಪಡಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ತಂದಿದ್ದ ಹೊಸ ನಿಯಮಕ್ಕೆ ಇದೀಗ ಬ್ರೇಕ್ ಬಿದ್ದಂತಾಗಿದ್ದು, ಹಳೆಯ ಶುಲ್ಕ ಪದ್ಧತಿಯೇ ಮುಂದುವರಿಯಲಿದೆ. ಆದಾಗ್ಯೂ, ಕುಟುಂಬದ ಸದಸ್ಯರಿಗೆ ಅಕ್ಕಪಕ್ಕದಲ್ಲಿ ಸೀಟು ನೀಡುವುದು, ಪಾರದರ್ಶಕ ಆಸನ ಹಂಚಿಕೆ ಸೇರಿದಂತೆ ಇತರ ಪ್ರಯಾಣಿಕ ಸ್ನೇಹಿ ಕ್ರಮಗಳು ಮುಂದುವರಿಯಲಿವೆ ಎಂದು ಡಿಜಿಸಿಎ ತಿಳಿಸಿದೆ.

