
Assam Assembly Election| ಅಸ್ಸಾಂ ಚುನಾವಣೆ: ಬಿಜೆಪಿ 88 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಅಸ್ಸಾಂ ವಿಧಾನಸಭಾ ಚುನಾವಣೆಗೆ ಬಿಜೆಪಿ 88 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಜಲುಕ್ಬಾರಿಯಿಂದ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ತೊರೆದು ಬಂದ ಪ್ರದ್ಯುತ್ ಬೊರ್ಡೊಲೋಯ್ ಮತ್ತು ಭೂಪನ್ ಬೋರಾ ಅವರಿಗೆ ಟಿಕೆಟ್ ನೀಡಲಾಗಿದೆ.
ಅಸ್ಸಾಂ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತನ್ನ 88 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ ಹಾಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಭದ್ರಕೋಟೆಯಾದ ಜಲುಕ್ಬಾರಿ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ.
ಕಾಂಗ್ರೆಸ್ ಬಂಡಾಯಗಾರರಿಗೆ ಭರ್ಜರಿ ಟಿಕೆಟ್
ಈ ಪಟ್ಟಿಯಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಕೇಸರಿ ಪಡೆಗೆ ಸೇರ್ಪಡೆಯಾಗಿದ್ದ ಪ್ರಭಾವಿ ನಾಯಕರಿಗೆ ಆದ್ಯತೆ ನೀಡಲಾಗಿದೆ. ಪ್ರದ್ಯುತ್ ಬೊರ್ಡೊಲೋಯ್ ದಿಶಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಭೂಪನ್ ಕುಮಾರ್ ಬೋರಾ ಕಾಂಗ್ರೆಸ್ ತೊರೆದಿದ್ದ ಇವರಿಗೆ ಬಿಹಪುರ ಕ್ಷೇತ್ರದ ಜವಾಬ್ದಾರಿ ನೀಡಲಾಗಿದೆ.
ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ
ಬಿಜೆಪಿಯ ಮೊದಲ ಪಟ್ಟಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೂ ಆದ್ಯತೆ ನೀಡಲಾಗಿದ್ದು, ಮಾಧವಿ ದಾಸ್ ಅವರು ಬಿರ್ಸಿಂಗ್-ಜರುವ ಕ್ಷೇತ್ರದಿಂದ, ಜ್ಯೋತ್ಸ್ನಾ ಕಲಿತಾ ಅವರು ಚಾಮರಿಯಾ ಕ್ಷೇತ್ರದಿಂದ ಹಾಗೂ ನೀಲಿಮಾ ದೇವಿ ಅವರು ಮಂಗಲ್ದೋಯ್ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ.
ಹೈಕಮಾಂಡ್ ಸಭೆಯಲ್ಲಿ ತೀರ್ಮಾನ
ಬುಧವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ (CEC) ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಮಹತ್ವದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಮತ್ತು ಅಸ್ಸಾಂ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಸೈಕಿಯಾ ಭಾಗವಹಿಸಿದ್ದರು.
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣಕ್ಕೆ ಅಭ್ಯರ್ಥಿಗಳ ಘೋಷಣೆ!
ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ 2026ರ ವಿಧಾನಸಭಾ ಉಪಚುನಾವಣೆಗಳಿಗೆ ಭಾರತೀಯ ಜನತಾ ಪಕ್ಷವು (BJP) ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬುಧವಾರ (ಮಾರ್ಚ್ 18, 2026) ದೆಹಲಿಯಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ (CEC) ಸಭೆಯಲ್ಲಿ ಕರ್ನಾಟಕ, ಗೋವಾ, ನಾಗಾಲ್ಯಾಂಡ್ ಮತ್ತು ತ್ರಿಪುರದ ಉಪ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ದೇಶದ ಉನ್ನತ ನಾಯಕರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ರಾಜಕೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಸಮಿತಿಯು ಕರ್ನಾಟಕದ ಎರಡು ಕ್ಷೇತ್ರಗಳಿಗೆ ಈ ಕೆಳಗಿನ ಹೆಸರುಗಳನ್ನು ಅನುಮೋದಿಸಿದೆ.
ಅಭ್ಯರ್ಥಿಗಳ ವಿವರ
ಬಾಗಲಕೋಟೆ ಕ್ಷೇತ್ರ: ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಶಾಸಕ ವೀರಭದ್ರಯ್ಯ ಚರಂತಿಮಠ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಚರಂತಿಮಠ ಅವರ ಪ್ರಭಾವ ಮತ್ತು ಹಿರಿತನವನ್ನು ಪರಿಗಣಿಸಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರ: ಇಲ್ಲಿ ಹೊಸ ಮುಖಕ್ಕೆ ಮಣೆ ಹಾಕಲಾಗಿದ್ದು, ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.

