Karnataka By-Election| ನಾಳೆ ಬೆಂಗಳೂರಿಗೆ ಸುರ್ಜೇವಾಲಾ ಆಗಮನ; ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು
x

Karnataka By-Election| ನಾಳೆ ಬೆಂಗಳೂರಿಗೆ ಸುರ್ಜೇವಾಲಾ ಆಗಮನ; ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು

ಅಂತಿಮ ಪಟ್ಟಿ ತಯಾರಿಕೆಗೂ ಮುನ್ನ ಸುರ್ಜೇವಾಲಾ ಅವರು ಟಿಕೆಟ್ ಆಕಾಂಕ್ಷಿಗಳೊಂದಿಗೂ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.


ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ದಾವಣಗೆರೆ ದಕ್ಷಿಣ ಹಾಗು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೈ ಪಾಳಯದಲ್ಲಿ ಕಗ್ಗಂಟಾಗಿದ್ದು, ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲು ಹೈಕಮಾಂಡ್ ಮುಂದಾಗಿದೆ.

ಈ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಾಳೆ (ಮಾ.20) ಬೆಂಗಳೂರಿಗೆ ಆಗಮಿಸುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.

ಪ್ರಮುಖ ನಾಯಕರೊಂದಿಗೆ ಸಭೆ

ಬೆಂಗಳೂರಿಗೆ ಆಗಮಿಸಲಿರುವ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದ್ದು, ನಾಳೆಯೇ ಹೈಕಮಾಂಡ್‌ಗೆ ಅಂತಿಮ ಪಟ್ಟಿಯನ್ನು ರವಾನಿಸುವ ಸಾಧ್ಯತೆಯಿದೆ.

ಅಂತಿಮ ಪಟ್ಟಿ ತಯಾರಿಕೆಗೂ ಮುನ್ನ ಸುರ್ಜೇವಾಲಾ ಅವರು ಟಿಕೆಟ್ ಆಕಾಂಕ್ಷಿಗಳೊಂದಿಗೂ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು

ಕಾಂಗ್ರೆಸ್ ಹಿರಿಯ ನಾಯಕ‌ ಶಾಮನೂರು ಶಿವಶಂಕರಪ್ಪಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ನೀಡಲಾಗುವುದು ಎಂಬ ಹಿರಿಯ ನಾಯಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಹಳೆಯ ಮಾತನ್ನೇ ಅಸ್ತ್ರವಾಗಿಸಿಕೊಂಡಿರುವ ಮುಸ್ಲಿಂ ಮುಖಂಡರು, ತಮ್ಮ ಸಮುದಾಯದವರಿಗೇ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಮತ್ತೊಂದೆಡೆ ಶಾಮನೂರು ಶಿವಶಂಕರಪ್ಪ ಅವರ ಪಿತ್ರ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ತಮ್ಮ ಕುಟುಂಬದವರಿಗೇ ಟಿಕೆಟ್ ನೀಡಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ತಮ್ಮ ಪುತ್ರ ಸಮರ್ಥ್ ಅಥವಾ ಸಹೋದರ ಗಣೇಶ್ ಅವರಿಗೆ ದಾವಣಗೆರೆ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಎಸ್.ಎಸ್.ಮಲ್ಲಿಕಾರ್ಜುನ್ ಅವರು ಹಕ್ಕು ಪ್ರತಿಪಾದಿಸಿದ್ದಾರೆ. ಹೀಗಾಗಿ, ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಅಭ್ಯರ್ಥಿ ಆಯ್ಕೆ ತಲೆನೋವಾಗಿದೆ.

ಮೇಟಿ ಕುಟುಂಬದ ಜತೆ ಸಿಎಂ ಸಂಧಾನ

ಬಾಗಲಕೋಟೆ ಕ್ಷೇತ್ರದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಆಸಕ್ತಿ ವಹಿಸಿದ್ದಾರೆ. ಈಗಾಗಲೇ ದಿವಂಗತ ಎಚ್.ವೈ. ಮೇಟಿ ಅವರ ಕುಟುಂಬದ ಸದಸ್ಯರೊಂದಿಗೆ ಸಿಎಂ ಸಮಾಲೋಚನೆ ನಡೆಸಿದ್ದು, ಕುಟುಂಬದಲ್ಲಿ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಚುನಾವಣಾ ಸಮಿತಿಯು ಎರಡೂ ಕ್ಷೇತ್ರಗಳ ಗ್ರೌಂಡ್ ರಿಪೋರ್ಟ್ ಸಿದ್ಧಪಡಿಸಿ ಕೆಪಿಸಿಸಿಗೆ ಸಲ್ಲಿಸಲಾಗಿದೆ.

ಈ ವರದಿ ಸಂಬಂಧ ನಾಳೆ ಬೆಂಗಳೂರಿನಲ್ಲಿ ಸುರ್ಜೇವಾಲಾ ನೇತೃತ್ವದಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ‌ ಚರ್ಚಿಸಲಾಗುವುದು.

ಬಾಗಲಕೋಟೆಯಲ್ಲಿ ಮೇಟಿ ಕುಟುಂಬದ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಸಿಎಂ ಕಸರತ್ತು ನಡೆಸಿದ್ದು, ಸಂಭಾವ್ಯರ ಪಟ್ಟಿಯನ್ನು ನಾಳೆಯೇ ಹೈಕಮಾಂಡ್ ಗೆ ರವಾನಿಸಲು ನಿರ್ಧರಿಸಲಾಗಿದೆ.

ಒಟ್ಟಾರೆ, ಕುಟುಂಬ ರಾಜಕಾರಣ ಮತ್ತು ಸಮುದಾಯದ ಪ್ರಾತಿನಿಧ್ಯದ ನಡುವೆ ಸಮತೋಲನ ಕಾಯ್ದುಕೊಳ್ಳಲು ಕಾಂಗ್ರೆಸ್‌ ಹರಸಾಹಸ ಪಡುತ್ತಿದೆ. ಸುರ್ಜೇವಾಲಾ ಭೇಟಿಯ ನಂತರ ಹಗ್ಗಜಗ್ಗಾಟಕ್ಕೆ ತೆರೆ ಬೀಳಲಿದೆ ಎನ್ನಲಾಗಿದೆ.

Read More
Next Story