Terror Suspects Arrested| ಬಳ್ಳಾರಿಯ ಅಬ್ದುಲ್ ಸಲಾಮ್ ಸೇರಿ 12 ಶಂಕಿತ ಉಗ್ರರ ಬಂಧನ
x
ಬಂಧಿತ ಶಂಕಿತ ಉಗ್ರರು

Terror Suspects Arrested| ಬಳ್ಳಾರಿಯ ಅಬ್ದುಲ್ ಸಲಾಮ್ ಸೇರಿ 12 ಶಂಕಿತ ಉಗ್ರರ ಬಂಧನ

ಆಂಧ್ರಪ್ರದೇಶ ಪೊಲೀಸರು 7 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಬಳ್ಳಾರಿಯ ಅಬ್ದುಲ್ ಸಲಾಮ್ ಸೇರಿದಂತೆ 12 ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಅಲ್-ಖೈದಾ ಮತ್ತು ಐಸಿಸ್ ನಂಟು ಹೊಂದಿದ್ದ ಈ ತಂಡದ 'ಅಲ್ ಮಲಿಕ್' ಸಂಘಟನೆಯ ಭಯಾನಕ ಸ್ಕೆಚ್ ಇಲ್ಲಿದೆ.


ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಸಮರ ಸಾರಿರುವ ಆಂಧ್ರಪ್ರದೇಶ ಪೊಲೀಸರು ಬುಧವಾರ ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಕರ್ನಾಟಕದ ಬಳ್ಳಾರಿ ಸೇರಿದಂತೆ ದೇಶದ ಒಟ್ಟು 7 ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ನಿಷೇಧಿತ ಉಗ್ರ ಸಂಘಟನೆಗಳಾದ ಅಲ್-ಖೈದಾ (AQIS) ಮತ್ತು ಐಸಿಸ್ (ISIS) ಜೊತೆ ನಂಟು ಹೊಂದಿದ್ದ 12 ಮಂದಿ ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಳ್ಳಾರಿಯಲ್ಲಿ ಅಬ್ದುಲ್ ಸಲಾಮ್ ಬಂಧನ

ಈ ಬೃಹತ್ ಕಾರ್ಯಾಚರಣೆಯಲ್ಲಿ ಕರ್ನಾಟಕದ ಬಳ್ಳಾರಿ ಮೂಲದ ಅಬ್ದುಲ್ ಸಲಾಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಉಗ್ರ ಸಿದ್ಧಾಂತಗಳಿಂದ ಪ್ರಭಾವಿತನಾಗಿ ವಿಜಯವಾಡದ ತಂಡದೊಂದಿಗೆ ಸಕ್ರಿಯವಾಗಿದ್ದ ಎಂದು ತಿಳಿದುಬಂದಿದೆ.

'ಅಲ್ ಮಲಿಕ್' ಸಂಘಟನೆಯ ಭಯಾನಕ ಸ್ಕೆಚ್‌

ಬಂಧಿತ ಶಂಕಿತರು ಆಂಧ್ರಪ್ರದೇಶದಲ್ಲಿ ‘ಅಲ್ ಮಾಲಿಕ್ ಇಸ್ಲಾಮಿಕ್ ಯೂತ್’ (AMYIC) ಎಂಬ ಹೆಸರಿನ ಗುಂಪನ್ನು ರಚಿಸಿಕೊಂಡಿದ್ದು, ಭಾರತವನ್ನು ಸಂಪೂರ್ಣವಾಗಿ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸುವ ಅಪಾಯಕಾರಿ ಗುರಿಯನ್ನು ಹೊಂದಿದ್ದರು. ಈ ಉದ್ದೇಶಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿ ಮುಸ್ಲಿಂ ಯುವಕರಿಗೆ ತೀವ್ರಗಾಮಿ ಚಿಂತನೆಗಳನ್ನು ತುಂಬುವ ಮೂಲಕ ಅವರನ್ನು ಜಿಹಾದ್‌ನತ್ತ ಸೆಳೆಯುವ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಈ ಶಂಕಿತರು ಉಗ್ರ ತರಬೇತಿ ಪಡೆಯುವ ಸಲುವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದರು ಎಂಬ ಆಘಾತಕಾರಿ ವಿಷಯವು ತನಿಖೆಯ ವೇಳೆ ವರದಿಯಾಗಿದೆ.

ಒಸಾಮಾ ಬಿನ್ ಲಾಡೆನ್ ಮಾದರಿಯಲ್ಲಿ ವರ್ತನೆ!
ತನಿಖೆಯ ವೇಳೆ ಪೊಲೀಸರಿಗೆ ಮತ್ತೊಂದು ಆಘಾತಕಾರಿ ವಿಷಯ ತಿಳಿದುಬಂದಿದೆ. ಈ ತಂಡದ ಕೆಲವು ಸದಸ್ಯರು ಜಾಗತಿಕ ಉಗ್ರ ಒಸಾಮಾ ಬಿನ್ ಲಾಡೆನ್‌ನನ್ನು ಆರಾಧಿಸುತ್ತಿದ್ದರು. ಅಷ್ಟೇ ಅಲ್ಲದೆ, ಆತನ ಮಾದರಿಯಲ್ಲೇ ವೇಷಧರಿಸಿ, ಆತನ ಹಾವಭಾವಗಳನ್ನು ಅನುಕರಿಸುತ್ತಾ ವಿಡಿಯೋಗಳನ್ನು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ಪಟ್ಟಿ

ಆಂಧ್ರಪ್ರದೇಶ ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ವಿವಿಧ ರಾಜ್ಯಗಳಿಂದ ಒಟ್ಟು 12 ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರಲ್ಲಿ ಕರ್ನಾಟಕದ ಬಳ್ಳಾರಿಯ ಅಬ್ದುಲ್ ಸಲಾಮ್, ಬಿಹಾರದ ಅಜಾನುಲ್ಲಾ ಖಾನ್, ದೆಹಲಿಯ ಲಕ್ಕಿ ಅಹ್ಮದ್, ಪಶ್ಚಿಮ ಬಂಗಾಳದ ಮಿರ್ ಆಸಿಫ್ ಅಲಿ, ರಾಜಸ್ಥಾನದ ಜೀಶನ್, ಮಹಾರಾಷ್ಟ್ರದ ಶಾರುಖ್ ಖಾನ್ ಮತ್ತು ಶಿಯಾಕ್ ಪಿಯಾಜ್ ಉರ್ ರೆಹಮಾನ್ ಸೇರಿದ್ದಾರೆ. ಅಲ್ಲದೆ, ಆಂಧ್ರಪ್ರದೇಶದ ಮೂಲದವರಾದ ಮೊಹಮ್ಮದ್ ರಹಮತುಲ್ಲಾ ಶರೀಫ್, ಮಿರ್ಜಾ ಸೊಹೈಲ್ ಬೇಗ್ ಮತ್ತು ಮೊಹಮ್ಮದ್ ಡ್ಯಾನಿಶ್ ಅವರನ್ನು ಸಹ ಬಂಧಿಸಲಾಗಿದ್ದು, ಈ ತಂಡವು ದೇಶಾದ್ಯಂತ ಜಾಲ ವಿಸ್ತರಿಸಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ವಿಜಯವಾಡ ಪೊಲೀಸರು ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇವರ ಹಿಂದೆ ಯಾವುದಾದರೂ ದೊಡ್ಡ ಉಗ್ರ ಜಾಲವಿದೆಯೇ ಮತ್ತು ಇವರಿಗೆ ಆರ್ಥಿಕ ಸಹಾಯ ಎಲ್ಲಿಂದ ಬರುತ್ತಿತ್ತು ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ.

Read More
Next Story