NIA arrest| ಗಡಿಯಲ್ಲಿ ಉಗ್ರರಿಗೆ ಡ್ರೋನ್‌ ತರಬೇತಿ- ಅಮೆರಿಕ ಪ್ರಜೆ ಮತ್ತು 6 ಉಕ್ರೇನಿಯನ್ನರು ಎನ್‌ಐಎ ಬಲೆಗೆ!
x
ಅಮೆರಿಕದ ಮ್ಯಾಥ್ಯೂ ವ್ಯಾನ್ ಡೈಕ್ ಈಗ ಭಾರತದ ರಾಷ್ಟ್ರೀಯ ತನಿಖಾ ದಳದ ವಶದಲ್ಲಿದ್ದಾನೆ(ಸಂಗ್ರಹ ಚಿತ್ರ).

NIA arrest| ಗಡಿಯಲ್ಲಿ ಉಗ್ರರಿಗೆ ಡ್ರೋನ್‌ ತರಬೇತಿ- ಅಮೆರಿಕ ಪ್ರಜೆ ಮತ್ತು 6 ಉಕ್ರೇನಿಯನ್ನರು ಎನ್‌ಐಎ ಬಲೆಗೆ!

NIA ಅಮೆರಿಕದ ಪ್ರಜೆ ಮ್ಯಾಥ್ಯೂ ವ್ಯಾನ್ ಡೈಕ್ ಮತ್ತು 6 ಉಕ್ರೇನಿಯನ್ನರನ್ನು ಬಂಧಿಸಿದೆ. ಮ್ಯಾನ್ಮಾರ್ ಗಡಿಯಲ್ಲಿ ಉಗ್ರರಿಗೆ ಡ್ರೋನ್ ತರಬೇತಿ ನೀಡುತ್ತಿದ್ದ ಗಂಭೀರ ಆರೋಪದ ಪೂರ್ಣ ವಿವರ ಇಲ್ಲಿದೆ.


ಭಾರತದ ರಾಷ್ಟ್ರೀಯ ತನಿಖಾ ದಳ (NIA) ದೇಶದ ಮೂರು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಅಮೆರಿಕದ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್ ಡೈಕ್ ಮತ್ತು ಆರು ಮಂದಿ ಉಕ್ರೇನ್ ಪ್ರಜೆಗಳನ್ನು ಬಂಧಿಸಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ವ್ಯಾನ್ ಡೈಕ್‌ನನ್ನು ಬಂಧಿಸಿದರೆ, ದೆಹಲಿ ಮತ್ತು ಲಕ್ನೋ ವಿಮಾನ ನಿಲ್ದಾಣಗಳಲ್ಲಿ ತಲಾ ಮೂವರು ಉಕ್ರೇನ್ ಪ್ರಜೆಗಳನ್ನು ಸೆರೆಹಿಡಿಯಲಾಗಿದೆ.

ಬಂಧಿತ ಉಕ್ರೇನ್ ಪ್ರಜೆಗಳ ವಿವರ

ಬಂಧಿತ ಉಕ್ರೇನಿಯನ್ನರನ್ನು ಪೆಟ್ರೋ ಹುರ್ಬಾ, ತಾರಸ್ ಸ್ಲಿವಿಯಾಕ್, ಇವಾನ್ ಸುಕ್ಮನೋವ್ಸ್ಕಿ, ಮರಿಯನ್ ಸ್ಟೆಫಾಂಕಿವ್, ಮಕ್ಸಿಮ್ ಹೊಂಚರುಕ್ ಮತ್ತು ವಿಕ್ಟರ್ ಕಮಿನ್ಸ್ಕಿ ಎಂದು ಗುರುತಿಸಲಾಗಿದೆ. ಮಾರ್ಚ್ 13ರ ಶುಕ್ರವಾರದಂದು ಈ ಕಾರ್ಯಾಚರಣೆ ನಡೆದಿದೆ.

ಯಾರು ಈ ಮ್ಯಾಥ್ಯೂ ವ್ಯಾನ್ ಡೈಕ್?

ಮ್ಯಾಥ್ಯೂ ವ್ಯಾನ್ ಡೈಕ್ ಒಬ್ಬ ಅಂತರಾಷ್ಟ್ರೀಯ ಭದ್ರತಾ ವಿಶ್ಲೇಷಕ, ಸಾಕ್ಷ್ಯಚಿತ್ರ ನಿರ್ಮಾಪಕ ಮತ್ತು ಮುಖ್ಯವಾಗಿ ಒಬ್ಬ 'ಮರ್ಸನರಿ' (ಹಣಕ್ಕಾಗಿ ಹೋರಾಡುವ ಸೈನಿಕ). 2011ರಲ್ಲಿ ಲಿಬಿಯಾದಲ್ಲಿ ಗಡ್ಡಾಫಿ ಆಡಳಿತದ ವಿರುದ್ಧ ಬಂಡುಕೋರರ ಪರವಾಗಿ ಹೋರಾಡಿ ಸುದ್ದಿಯಾಗಿದ್ದ. ಇರಾಕ್‌ನಲ್ಲಿ ಐಸಿಸ್ (ISIS) ಉಗ್ರರ ವಿರುದ್ಧ ಹೋರಾಡಿದ ಅನುಭವ ಇವನಿಗಿದೆ.

2022ರಲ್ಲಿ ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಸೈನಿಕರಿಗೆ ತರಬೇತಿ ನೀಡಿದ್ದ ಮತ್ತು ಡ್ರೋನ್ ತಂತ್ರಜ್ಞಾನದಲ್ಲಿ ನೆರವಾಗಿದ್ದ. ಇವನು 'ಸನ್ಸ್ ಆಫ್ ಲಿಬರ್ಟಿ ಇಂಟರ್ನ್ಯಾಷನಲ್' (SOLI) ಎಂಬ ಸಂಸ್ಥೆಯ ಸ್ಥಾಪಕನೂ ಹೌದು.

ಏನಿದು ಆರೋಪ?

ಎನ್‌ಐಎ ದಾಖಲಿಸಿರುವ ಎಫ್‌ಐಆರ್ (FIR) ಪ್ರಕಾರ, ಈ ಗುಂಪು ಈಶಾನ್ಯ ಭಾರತದ ಭದ್ರತೆಗೆ ಧಕ್ಕೆ ತರುವಂತಹ ಗಂಭೀರ ಸಂಚು ರೂಪಿಸಿತ್ತು. ಇವರು ಅಗತ್ಯವಿರುವ 'ನಿರ್ಬಂಧಿತ ಪ್ರದೇಶದ ಅನುಮತಿ' (Restricted Area Permit - RAP) ಇಲ್ಲದೆಯೇ ಮಿಜೋರಾಂಗೆ ಪ್ರಯಾಣಿಸಿದ್ದರು. ಅಲ್ಲಿಂದ ಅಕ್ರಮವಾಗಿ ಮ್ಯಾನ್ಮಾರ್ ಗಡಿ ದಾಟಿದ್ದರು.

ಮ್ಯಾನ್ಮಾರ್‌ನಲ್ಲಿದ್ದ ಜನಾಂಗೀಯ ಸಶಸ್ತ್ರ ಗುಂಪುಗಳ (EAGs) ಜೊತೆ ಇವರು ಸಂಪರ್ಕ ಹೊಂದಿದ್ದರು. ಈ ಗುಂಪುಗಳು ಭಾರತದ ಈಶಾನ್ಯ ರಾಜ್ಯಗಳ ಪ್ರತ್ಯೇಕತಾವಾದಿ ಸಂಘಟನೆಗಳ ಜೊತೆ ಸಂಬಂಧ ಹೊಂದಿವೆ ಎಂದು ಎನ್‌ಐಎ ಹೇಳಿದೆ. ಯುರೋಪಿನಿಂದ ಆಮದು ಮಾಡಿಕೊಂಡ ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸಿ ಮ್ಯಾನ್ಮಾರ್‌ನ ತರಬೇತಿ ಶಿಬಿರಗಳಲ್ಲಿ ಉಗ್ರರಿಗೆ ಡ್ರೋನ್ ಯುದ್ಧತಂತ್ರ, ಅಸೆಂಬ್ಲಿಂಗ್ ಮತ್ತು ಜ್ಯಾಮಿಂಗ್ ತಂತ್ರಜ್ಞಾನದ ತರಬೇತಿ ನೀಡಲು ಈ ಗುಂಪು ಯೋಜಿಸಿತ್ತು.

ಯುಎಪಿಎ ಅಡಿ ಪ್ರಕರಣ ದಾಖಲು:

ಬಂಧಿತ ಏಳು ಮಂದಿಯನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು 11 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದೆ. ಇವರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More
Next Story